
ಚಾಮರಾಜನಗರ: ದೊಡ್ಡ ಬೆಕ್ಕುಗಳ ಪ್ರಜಾತಿಗೆ ಸೇರಿರುವ ಹುಲಿ, ಸಿಂಹ, ಚಿರತೆ, ಚೀತಾ, ಹಿಮ ಚಿರತೆ, ಜಾಗ್ವಾರ್ ಹಾಗೂ ಪ್ಯೂಮಾಗಳ ರಕ್ಷಣೆಗೆ ಹಾಗೂ ದೊಡ್ಡಬೆಕ್ಕುಗಳ ಆವಾಸಗಳ ಉಳಿವಿಗಾಗಿ ಧಾತ್ರಿ ಇಂಟರ್‌ನ್ಯಾಷನಲ್ ಫೌಂಡೇಷನ್, ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಇರಾಲೆ ಸಂಸ್ಥೆಯ ನೇತೃತ್ವದಲ್ಲಿ ದೇಶದಾದ್ಯಂತ 7,000 ಕಿ.ಮೀ ಬೈಕ್ ರ‍್ಯಾಲಿ ಹಮ್ಮಿಕೊಂಡಿದೆ.
‘ರ್‍ಯಾಲಿ ಫಾರ್ ಬಿಗ್ ಕ್ಯಾಟ್’ ಹೆಸರಿನಲ್ಲಿ ನಡೆಯುತ್ತಿರುವ ಬೈಕ್ ರ‍್ಯಾಲಿ ನವದೆಹಲಿಯಿಂದ ಆರಂಭವಾಗಿದ್ದು ಕೇರಳದಲ್ಲಿ ಸಮಾಪನಗೊಳ್ಳಲಿದೆ. 30 ದಿನಗಳ ಜಾಥಾದಲ್ಲಿ ವನ್ಯಜೀವಿ ಸಂಶೋಧಕರು, ಪರಿಸರ ಪ್ರಿಯರು, ಬೈಕ್ ರೈಡರ್ಸ್‌ಗಳು ಹಾಗೂ ಉತ್ಸಾಹಿ ಯುವ ಪಡೆ ಭಾಗವಹಿಸಿದ್ದು ರ‍್ಯಾಲಿ ಸಾಗುವ ಮಾರ್ಗದಲ್ಲಿ ದೊಡ್ಡ ಬೆಕ್ಕುಗಳ ಸಂತತಿ ಉಳಿವಿಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಕಾಡಂಚಿನ ಗ್ರಾಮಗಳಲ್ಲಿ ವಾಸವಾಗಿರುವ ಜನರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ನವದೆಹಲಿಯಿಂದ ರಾಜಸ್ತಾನದಲ್ಲಿರುವ ಚಿರತೆಗಳ ನೆಲೆಯಾದ ಜವಾಯ್, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನ, ಸತ್ಪುರ, ಗುಜರಾತ್‌ನ ಗಿರ್ ಅರಣ್ಯ, ಆಂಧ್ರಪ್ರದೇಶದ ನಾಗಾರ್ಜುನ ಸಾಗರದ ಮಾರ್ಗವಾಗಿ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ತಲುಪಿದೆ.
ಮುಂದೆ ತಮಿಳುನಾಡಿನ ಮಧುಮಲೈ ಅಭಯಾರಣ್ಯ ಹಾಗೂ ಕಾಲಕ್ಕಾಡ್ ತಲುಪುವ ಬೈಕ್ ರ‍್ಯಾಲಿ ಕೇರಳದ ಪೆರಿಯಾರ್‌ನಲ್ಲಿ ಸಮಾಪನಗೊಳ್ಳಲಿದೆ. ಬುಧವಾರ ಬಂಡೀಪುರ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿದ ಸಂಸ್ಥೆಯು ಅರಣ್ಯದಂಚಿನ ಗ್ರಾಮಸ್ಥರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಪರಿಸರಾಸಕ್ತರ ವಿಚಾರ ವಿನಿಮಯ ನಡೆಸಿತು.
ವನ್ಯಜೀವಿ ತಜ್ಞ ಮದನ್ ಕುಮಾರ್, ಧಾತ್ರಿ ಸಂಸ್ಥೆಯ ನಿಶಾಂತ್ ಹಾಗೂ ಇರಾಲೆ ಸಂಸ್ಥೆಯ ಯೋಗಾನಂದ್ ಚಂದ್ರಯ್ಯ ನೇತೃತ್ವದ ತಜ್ಞರ ತಂಡ ದೊಡ್ಡ ಬೆಕ್ಕುಗಳ ಉಳಿವಿಗೆ ಸಮಾಜದ ಸಹಭಾಗಿತ್ವದ ಅಗತ್ಯತೆಯನ್ನು ಒತ್ತಿ ಹೇಳಿತು.
ಅರಣ್ಯದೊಳಗೆ ಆಹಾರ ಸರಪಳಿಯನ್ನು ನಿಯಂತ್ರಿಸುವ ಹುಲಿಗಳು ಉಳಿದರೆ ಮಾತ್ರ ಪರಿಸರ ಸಮತೋಲನದಿಂದ ಕೂಡಿರುತ್ತದೆ. ಹುಲಿಗಳ ಸಂತತಿ ನಾಶವಾದರೆ ಅರಣ್ಯದೊಳಗೆ ಸಸ್ಯಹಾರಿ ಪ್ರಾಣಿಗಳ ಸಂತತಿ ಹೆಚ್ಚಾಗಿ ಮೇವಿನ ಕೊರತೆ ಎದುರಾಗುತ್ತದೆ. ಕಾಡಂಚಿನ ಕೃಷಿ ಭೂಮಿಯಲ್ಲಿ ಬೆಳೆಯುವ ಬೆಳೆಗಳು ಕಾಡುಪ್ರಾಣಿಗಳ ಪಾಲಾಗುತ್ತದೆ. ಮಾನವ ಪ್ರಾಣಿ ಸಂಘರ್ಷ ಮಿತಿಮೀರುತ್ತದೆ. ಈ ನಿಟ್ಟಿನಲ್ಲಿ ಹುಲಿಗಳನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂದು ತಜ್ಞರು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಅತಿ ಹೆಚ್ಚು ಹುಲಿಗಳ ಆವಾಸ ಹೊಂದಿರುವ ಬಂಡೀಪುರ ಅಭಯಾರಣ್ಯದೊಳಗೆ ಮಾನವ ಹಸ್ತಕ್ಷೇಪ ನಿಲ್ಲಬೇಕು, ಕಾಡಂಚಿನ ನಿವಾಸಿಗಳು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕಾದ ಅಗತ್ಯತೆ ಇದೆ ಎಂದು ತಜ್ಞರು ಸಲಹೆ ನೀಡಿದರು.
ಅಭಯಾರಣ್ಯದೊಳಗಿರುವ ಹೆದ್ದಾರಿಗಳಲ್ಲಿ ವನ್ಯಜೀವಿಗಳ ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ಮಾಡುವುದು ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಾಗಿರುತ್ತವೆ. ಪ್ರಾಣಿಗಳ ಸೆರೆ ಕಾರ್ಯಾಚರಣೆ ಮಾಡುವಾಗಲೂ ಸಾರ್ವಜನಿಕರು ವಿಡಿಯೊ ಚಿತ್ರೀಕರಣದಂತಹ ದುಸ್ಸಾಹಕ್ಕೆ ಕೈಹಾಕಬಾರದು ಎಂದು ಸಲಹೆ ನೀಡಿದರು.
ರ‍್ಯಾಲಿಯ ಮಹತ್ವ
ರ‍್ಯಾಲಿ ಫಾರ್ ಬಿಗ್ ಕ್ಯಾಟ್ಸ್ ಕಾರ್ಯಕ್ರಮದಲ್ಲಿ ದೊಡ್ಡ ಬೆಕ್ಕುಗಳ ರಕ್ಷಣೆಯ ಮಹತ್ವನ್ನು ತಿಳಿಸುವುದರ ಜೊತೆಗೆ ಪರಿಸರದ ಮಹತ್ವ ಜೀವ ವೈವಿಧ್ಯತೆ ನದಿಗಳ ಸಂರಕ್ಷಣೆ ಕುರಿತಾಗಿ ಸಾರ್ವಜನಿಕ ಕಾರ್ಯಾಗಾರಗಳು ನಡೆಯಲಿವೆ.
ಅರಣ್ಯನಾಶ ಕ್ಷೀಣಿಸುತ್ತಿರುವ ವನ್ಯಜೀವಿಗಳ ಆವಾಸ ಹೆಚ್ಚುತ್ತಿರುವ ಕಳ್ಳಬೇಟೆ ಹವಾಮಾನ ಬದಲಾವಣೆ ಮಾನವ ಪ್ರಾಣಿ ಸಂಘರ್ಷ ತಡೆ ಕಾಡಂಚಿನ ನಿವಾಸಿಗಳ ಜೀವನೋಪಾಯ ಸಮುದಾಯ ಪಾಲ್ಗೊಳ್ಳುವಿಕೆಯ ಬಗ್ಗೆಯೂ ಚರ್ಚೆಗಳು ನಡೆಯುತ್ತವೆ.
ಮುಖ್ಯವಾಗಿ ಯುವಜನತೆಗೆ ವನ್ಯಜೀವಿಗಳ ರಕ್ಷಣೆಯ ಕುರಿತು ತಿಳಿ ಹೇಳಲಾಗುತ್ತಿದೆ. ರ‍್ಯಾಲಿ ಸಾಗುವ ಮಾರ್ಗದಲ್ಲಿ ಸಿಗುವ ಅಭಯಾರಣ್ಯದ ಚಿತ್ರಣದ ಕುರಿತು ಮಾಹಿತಿ ಸಂಗ್ರಹ ಮಾಡಲಾಗುತ್ತದೆ. ಸ್ಥಳೀಯ ಪರಿಸರವಾದಿಗಳು ಎನ್‌ಜಿಒಗಳು ಸಂಶೋಧಕರನ್ನು ಸಂಪರ್ಕಿಸಿ ಜ್ಞಾನ ವಿನಿಮಯವೂ ನಡೆಯುತ್ತದೆ ಎನ್ನುತ್ತಾರೆ ಇರಾಲೆ ಸಂಸ್ಥೆಯ ಯೋಗಾನಂದ್ ಚಂದಯ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.