
ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಬಿಳಿಗಿರಿಬೆಟ್ಟದ ರಂಗಪ್ಪನ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜಾ ಕೈಂಕರ್ಯಗಳು ಅಪಾರ ಭಕ್ತರ ಸಡಗರ ಸಂಭ್ರಮಗಳ ನಡುವೆ ಅದ್ದೂರಿಯಾಗಿ ನಡೆದವು.
ಸಂಕ್ರಾತಿ ರಥೋತ್ಸವ ಮುಗಿದ ಮಾರನೆ ದಿನ ಭಕ್ತರು ಗರುಡೋತ್ಸವ ಹಾಗೂ ರಂಗ ಮಂಟಪೋತ್ಸವ ಶಯನೋತ್ಸವ ಧಾರ್ಮಿಕ ಮಹೋತ್ಸವದಲ್ಲಿ ಮಿಂದರು. ಇದಕ್ಕಾಗಿ ಮುಂಜಾನೆಯಿಂದಲೇ ದೇವಾಲಯದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವೇದಮಂತ್ರ ಪಠಣ, ಭಜನೆ ಹಾಗೂ ಹರಿನಾಮ ಸ್ಮರಣೆ ಮಾಡಲಾಯಿತು.
ಶಕ್ತಿ, ವೈಭವ ಹಾಗೂ ಧರ್ಮದ ಸಂಕೇತವಾಗಿ ಗರುಡ ಮೂರ್ತಿಯ ಮೇಲೆ ರಂಗನಾಥಸ್ವಾಮಿ ಕೂರಿಸಿ ಅರ್ಚಿಸಲಾಯಿತು. ಭಕ್ತರ ಜಯಘೋಷಗಳ ನಡುವೆ ಮಂಗಳವಾದ್ಯ ಸಮೇತ ಪ್ರದಕ್ಷಿಣಾ ಪಥದಲ್ಲಿ ಉತ್ಸವ ನಡೆಸಲಾಯಿತು.
ರಂಗಧಾಮನನ್ನು ಹೂ ಹಾರಗಳಿಂದ ಸಿಂಗರಿಸಿ ಗರುಡ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಮಯ ದೇವತೆಗಳು ಭಕ್ತರೊಡನೆ ಸಂಚರಿಸುತ್ತಾರೆ ಎಂಬ ಪ್ರತೀತಿ ಇದೆ. ಸಹಸ್ರನಾಮ ಪಾರಾಯಣ, ವೇದಘೋಷ ಹಾಗೂ ಭಜನೆಗಳು ಮಹೋತ್ಸವದ ಭಾಗವಾಗಿರುತ್ತದೆ ಎನ್ನುತ್ತಾರೆ ದೇವಾಲಯದ ಸಿಬ್ಬಂದಿ ರಾಜು.
ದೇವಾಲಯದಲ್ಲಿ ದಾಸರ ಶಂಖ ಜಾಗಟೆ ನಾದದ ನಡುವೆ ಸಂಚರಿಸಿದ ಗರುಡೋತ್ಸವ ಮಧ್ಯಾಹ್ನ ಗುಡಿಮುಟ್ಟಿತು. ಗರುಡನನ್ನು ಇಳಿಸಿದ ನಂತರ ದೇವಾಲಯದ ಪ್ರಧಾನ ಅರ್ಚಕ ರವಿಕುಮಾರ್ ಅವರಿಂದ ಮಹಾ ಮಂಗಳಾರತಿ ನಡೆಯಿತು. ಈ ಸಮಯದಲ್ಲಿ ಭಕ್ತರು ಹೂ–ಹಣ್ಣು ಸಮರ್ಪಿಸಿದರು. ನಂತರ ಸರತಿ ಸಾಲಿನಲ್ಲಿ ನಿಂತು ಚಿನ್ನಾಭರಣಗಳಿಂದ ಶೋಭಿತನಾಗಿದ್ದ ರಂಗನಾಥಸ್ವಾಮಿಯ ದಿವ್ಯ ಮೂರ್ತಿಯನ್ನು ಕಣ್ತುಂಬಿಕೊಂಡರು.
ಧಾರ್ಮಿಕ ಮಹತ್ವ: ಮಕರ ಸಂಕ್ರಾಂತಿ ಹಬ್ಬದಂದು ರಾತ್ರಿ ಆಲಯದಲ್ಲಿ ಸ್ವರ್ಗದ ಭಾಗಿಲು ತೆಗೆಯಲಾಗುತ್ತದೆ. ಎಷ್ಟೇ ಪಾಪ–ಪುಣ್ಯ ಮಾಡಿದ್ದರೂ ಗರುಡ ಪಠಣದಿಂದ ನೇರವಾಗಿ ಸ್ವರ್ಗಕ್ಕೆ ತೆರಳುವರು. ಆತ್ಮಕ್ಕೆ ಶಾಂತಿ ಲಭಿಸುವುದು ಹಾಗೂ ಗರುಡ ಪುರಾಣ ಸ್ಮರಣೆಯಿಂದ ಆತ್ಮಕ್ಕೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ ಎನ್ನುತ್ತಾರೆ ಆಗಮಿಕ ರವಿಕುಮಾರ್.
ಶುಕ್ರವಾರ ರಾತ್ರಿ ದೇವರ ಸಂಧಾನೋತ್ಸವ ಪಾರುವಾಟೆ ಮಂಟಪೋತ್ಸವ ನಡೆಯಿತು. ಮೋಹಿನಿ ಅಲಂಕಾರ ಸೇವೆಯಲ್ಲಿ ಹೆಚ್ಚಿನ ಭಕ್ತರು ಭಾಗವಹಿಸಿದ್ದರು. ಶನಿವಾರ ಮಂಟಪೋತ್ಸವ ಹಾಗೂ ಶಯನೋತ್ಸವಗಳಲ್ಲಿ ವಿಶೇಷ ಪೂಜೆ ನಡೆಸಿ ದಿನದ ದೈವಿಕ ಕಾರ್ಯವನ್ನು ಪೂರ್ಣಗೊಳಿಸಲಾಯಿತು.
ಎಎಎಸ್‌ಪಿ ಶಶಿಧರ್, ಡಿವೈಎಸ್‌ಪಿ ಧರ್ಮೇಂದ್ರ, ಸಿಪಿಐ ಸುಬ್ರಹ್ಮಣ್ಯ, ಎಎಸ್ಐಗಳಾದ ಆಕಾಶ್, ಸುಪ್ರೀತ್, ಎನ್.ಕರಿಬಸಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.