ADVERTISEMENT

ಕಾಂಗ್ರೆಸ್‌ನಿಂದ ಮಹಿಳಾ ಮತದಾರರಿಗೆ ಅಮಿಷ: ದೂರು

ಗ್ಯಾರಂಟಿ ಕಾರ್ಡುಗಳ ಹಂಚಿಕೆ ಚುನಾವಣಾ ಸಂಹಿತೆ ಉಲ್ಲಂಘನೆ : ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 17:06 IST
Last Updated 17 ಏಪ್ರಿಲ್ 2024, 17:06 IST
ಬಿಜೆಪಿಯ ಜಿ.ನಾರಾಯಣ ಪ್ರಸಾದ್ ಹಾಗೂ ಇತರ ಮುಖಂಡರು ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್‌ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು
ಬಿಜೆಪಿಯ ಜಿ.ನಾರಾಯಣ ಪ್ರಸಾದ್ ಹಾಗೂ ಇತರ ಮುಖಂಡರು ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್‌ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು   

ಚಾಮರಾಜನಗರ: ಚುನಾವಣೆಯಲ್ಲಿ ಈಡೇರಿಸಲಾಗದ ಗ್ಯಾರಂಟಿ ಕಾರ್ಡುಗಳನ್ನು ಕಾಂಗ್ರೆಸ್ ಪಕ್ಷವು ಮಹಿಳಾ ಮತದಾರರರಿಗೆ ಹಂಚಿಕೆ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ ಎಂದು ಬಿಜೆಪಿ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಅವರಿಗೆ  ದೂರು ನೀಡಿದೆ.

ಬಿಜೆಪಿ ಅಭ್ಯರ್ಥಿ ಎಸ್‌.ಬಾಲರಾಜು ಅವರ ಚುನಾವಣಾ ಏಜೆಂಟ್ ಆಗಿರುವ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಜಿ.ನಾರಾಯಣ ಪ್ರಸಾದ್, ಜಿಲ್ಲಾ ವಕ್ತಾರ ಕಾಡಹಳ್ಳಿ ಶಿವರುದ್ರಸ್ವಾಮಿ, ವಕೀಲ ಮಹೇಶ್, ಸಹ ವಕ್ತಾರ ಎನ್. ಮಂಜುನಾಥ್, ಸಹ ಪ್ರಮುಖ್ ಅಶ್ವಿನ್ ಅವರು ದೂರು ನೀಡಿದ್ದಾರೆ. 

‘ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಹಿಳೆಯರಿಗೆ ಗ್ಯಾರಂಟಿ ಕಾರ್ಡುಗಳನ್ನು ನೀಡಿ, ಅವರ ಆಧಾರ್ ಕಾರ್ಡುಗಳನ್ನು ಪಡೆದು, ಮೊಬೈಲ್ ನಂಬರ್ ನಮೂದಿಸಿ ಕೌಂಟರ್ ಫೈಲ್ ಅನ್ನು ತಾವು ಇಟ್ಟು ಕೊಳ್ಳುತ್ತಿದ್ದಾರೆ. ಜೊತೆಗೆ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಅಮಿಷ ಒಡ್ಡಲಾಗುತ್ತಿದೆ. ₹1 ಲಕ್ಷದ ಜೊತೆಗೆ ಇಲ್ಲಿ ಇರುವ ಎಲ್ಲ ಗ್ಯಾರಂಟಿಗಳು ನಿಮ್ಮ ಮನೆಗೆ ಬರುತ್ತದೆ ಎಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ADVERTISEMENT

ದೂರಿನೊಂದಿಗೆ ಸಾಕ್ಷ್ಯಗಳ ರೂಪದಲ್ಲಿ ವಿಡಿಯೊ ತುಣುಕು, ಫೋಟೊ ಕೂಡ ಸಲ್ಲಿಸಿದ್ದಾರೆ. 

‘ಗ್ರಾಮಾಂತರ ಪ್ರದೇಶಗಳಲ್ಲಿ ಮಹಿಳೆಯರಿಗೆ ಈ ರೀತಿ ಆಸೆ, ಅಮಿಷ ತೋರಿಸಿ, ಕಾನೂನು ಬಾಹಿರವಾಗಿ ಗ್ಯಾರಂಟಿ ಕಾರ್ಡುಗಳನ್ನು ವಿತರಣೆ ಮಾಡುತ್ತಿದ್ದು, ಪ್ರತಿ ಬಡ ಕುಟುಂಬ ಮಹಿಳೆಗೆ ₹1 ಲಕ್ಷ ಹಾಗು ಬಡ ನಿರುದ್ಯೋಗಿಗಳಿಗೆ ₹1 ಲಕ್ಷ ಗ್ಯಾರಂಟಿಯನ್ನು ತಮ್ಮ ಪಕ್ಷ ನೀಡುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರಾದ ಸೋಫಿಯಾ ಮತ್ತು ಸೈಯದ್ ತೌಸಿಫ್‌ ಇತರರು ಗ್ಯಾರಂಟಿ ಕಾರ್ಡುಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಇದರಿಂದಾಗಿ ನಿಷ್ಪಕ್ಷಪಾತ ಚುನಾವಣೆ ನಡೆಯುವುದು ಸಾಧ್ಯವಿಲ್ಲ. ಈ ಕಾರ್ಡುಗಳನ್ನು ಹಂಚಿಕೆ ಮಾಡುವ ಮೂಲಕ ಮತದಾರರನ್ನು ದಾರಿ ತಪ್ಪಿಸಲಾಗುತ್ತಿದೆ.  ಇದನ್ನು ಪರಿಗಣಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.