ADVERTISEMENT

ಚಾಮರಾಜನಗರ: ಚಾಮುಲ್‌ ಆಡಳಿತ ಬಿಜೆಪಿ ತೆಕ್ಕೆಗೆ

ಹಾಲು ಒಕ್ಕೂಟದ ಅಧ್ಯಕ್ಷರಾಗಿ ವೈ.ಸಿ,ನಾಗೇಂದ್ರ ಆಯ್ಕೆ, ಕೊನೆ ಕ್ಷಣದಲ್ಲಿ ಮಹತ್ವದ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 14:36 IST
Last Updated 29 ಜೂನ್ 2022, 14:36 IST
ಚಾಮುಲ್‌ ಅಧ್ಯಕ್ಷರಾಗಿ ಆಯ್ಕೆಯಾದ ವೈ.ಸಿ.ನಾಗೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಅಭಿನಂದಿಸಿದರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ಚಾಮುಲ್‌ ನಿರ್ದೇಶಕ ಎಚ್.ಎಸ್‌.ಬಸವರಾಜು, ಮುಖಂಡ ಸಿದ್ದರಾಜು ಇತರರು ಇದ್ದರು
ಚಾಮುಲ್‌ ಅಧ್ಯಕ್ಷರಾಗಿ ಆಯ್ಕೆಯಾದ ವೈ.ಸಿ.ನಾಗೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಅಭಿನಂದಿಸಿದರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ಚಾಮುಲ್‌ ನಿರ್ದೇಶಕ ಎಚ್.ಎಸ್‌.ಬಸವರಾಜು, ಮುಖಂಡ ಸಿದ್ದರಾಜು ಇತರರು ಇದ್ದರು   

ಚಾಮರಾಜನಗರ: ಭಾರಿ ಕುತೂಹಲ ಕೆರಳಿಸಿದ್ದ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೈ.ಸಿ.ನಾಗೇಂದ್ರ ಅವರು ಒಂದು ಮತದ ಅಂತರದ ರೋಚಕ ಜಯ ಸಾಧಿಸಿದ್ದಾರೆ.

ಈಮೂಲಕ, ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಬಿಜೆಪಿ ತೆಕ್ಕೆಗೆ ಸಿಕ್ಕಿದಂತಾಗಿದೆ.

ಅಧ್ಯಕ್ಷರ ಆಯ್ಕೆಗಾಗಿ ಬುಧವಾರ ನಡೆದ ಚುನಾವಣೆಯಲ್ಲಿಶಾಸಕ ಪುಟ್ಟರಂಗಶೆಟ್ಟಿ ಅವರ ಮಗಳು ಶೀಲಾ ಅವರು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿದ್ದರು. ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯು ಯಳಂದೂರು ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ವೈ.ಸಿ.ನಾಗೇಂದ್ರ ಅವರನ್ನು ಕಣಕ್ಕಿಳಿಸಿತ್ತು.

ADVERTISEMENT

ಚಲಾವಣೆಯಾದ 13 ಮತಗಳ ಪೈಕಿ ನಾಗೇಂದ್ರ ಅವರು ಏಳು ಮತಗಳನ್ನು ಪಡೆದರೆ, ಶೀಲಾ ಅವರು ಆರು ಮತಗಳನ್ನು ಪಡೆದರು.

15 ನಿರ್ದೇಶಕರಿರುವ ಚಾಮುಲ್‌ ಆಡಳಿತ ಮಂಡಳಿಯಲ್ಲಿ 14 ಮಂದಿಗೆ ಮತದಾನದ ಹಕ್ಕು ಇದೆ. ಆದರೆ, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಪ್ರತಿನಿಧಿ ಮತದಾನದಿಂದ ದೂರ ಉಳಿದುದರಿಂದ 13 ಮಂದಿ ಮತ ಚಲಾಯಿಸಿದರು.

ನಿರ್ದೇಶಕರಾದ ಎಚ್.ಎಸ್.ಬಸವರಾಜು, ಎಂ.ಪಿ.ಸುನೀಲ್, ಎಚ್.ಎಸ್.ನಂಜುಂಡಪ್ರಸಾದ್, ಎಂ.ನಂಜುಂಡಸ್ವಾಮಿ, ಸದಾಶಿವಮೂರ್ತಿ, ಎಸ್.ಮಹದೇವಸ್ವಾಮಿ, ಶಾಹುಲ್ ಅಹಮದ್, ನಾಮನಿರ್ದೇಶನ ಸದಸ್ಯ ಅಯ್ಯನಪುರ ಶಿವಕುಮಾರ್, ಕರ್ನಾಟಕ ಹಾಲು‌ಮಹಾಮಂಡಳದ (ಕೆಎಂಎಫ್‌ ಪ್ರತಿನಿಧಿ) ಪ್ರಧಾನ ವ್ಯವಸ್ಥಾಪಕ ಎಂ.ಕೃಷ್ಣಪ್ಪ, ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವೆ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಸಿ.ಸುರೇಶ್, ಸಹಕಾರ ಸಂಘಗಳ ಉಪ ರಿಜಿಸ್ಟ್ರಾರ್‌ ಜ್ಯೋತಿ ಅರಸ್ ಮತ ಚಲಾಯಿಸಿದರು.

ಚುನಾವಣಾಧಿಕಾರಿ ಕೆ.ಎ.ರಾಜೇಂದ್ರಪ್ರಸಾದ್, ಸಹಾಯಕ ಚುನಾವಣಾಧಿಕಾರಿಯಾಗಿ ಕಿರಣ್‌ಕುಮಾರ್‌ ಹಾಗೂ ಸಹಾಯಕರಾಗಿ ನಾಗೇಶ್ ಕರ್ತವ್ಯ ನಿರ್ವಹಿಸಿದರು.

ಅಭಿನಂದನೆ: ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ನಾಗೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಉಪಾಧ್ಯಕ್ಷ ರಾಜೇಂದ್ರ ಎಂ, ಮುಖಂಡ, ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ‌ಆರ್‌.ಸುಂದರ್‌, ರಾಜ್ಯ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಜಿ.ಎನ್‌.ನಂಜುಂಡಸ್ವಾಮಿ, ಹಾಸನ ಜಿಲ್ಲಾ ಪ್ರಭಾರಿ ನಿಜಗುಣರಾಜು, ಜಿಲ್ಲಾ ಘಟಕದ ಉಪಾಧ್ಯಕ್ಷ ದತ್ತೇಶ್‌ ಕುಮಾರ್‌ ಇತರರು ಅಭಿನಂದಿಸಿದರು.

ಅಧಿಕಾರ ಹಂಚಿಕೆ:ಫಲಿತಾಂಶದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎನ್‌.ರವಿಕುಮಾರ್‌, ‘ಚಾಮುಲ್‌ನಲ್ಲಿ ನಾವು ಅಧಿಕಾರ ಹಿಡಿದಿದ್ದೇವೆ. ಏಳು ಮತಗಳು ಬರುವ ವಿಶ್ವಾಸವಿತ್ತು. ನಿರ್ದೇಶಕರಾದ ಎಚ್‌.ಎಸ್‌.ಬಸವರಾಜು ಅವರು ಈ ಗೆಲುವಿಗೆ ಕಾರಣ. ಪಕ್ಷದ ಮುಖಂಡ ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದ ಎಂ.ಪಿ.ಸುನೀಲ್‌ ಅವರು ಕೂಡ ನಾಗೇಂದ್ರ ಗೆಲುವಿಗೆ ಶ್ರಮಿಸಿದ್ದಾರೆ.ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿದೆ. ಶೀಘ್ರದಲ್ಲಿ ಎಪಿಎಂಸಿ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಅಲ್ಲೂ ಗೆಲ್ಲುತ್ತೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕೂ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ’ ಎಂದರು.

ಅಧ್ಯಕ್ಷೀಯ ಅಭ್ಯರ್ಥಿಯ ಆಯ್ಕೆ ಸಂದರ್ಭದಲ್ಲಿ ನಡೆದಿರುವ ಗೊಂದಲದ ಬಗ್ಗೆ ಕೇಳಿದ್ದಕ್ಕೆ, ‘ಗೊಂದಲ ಆಗಿದ್ದು ನಿಜ. ಆದರೆ, ಅಂತಿಮವಾಗಿ ನಾಗೇಂದ್ರ ಅವರನ್ನು ಆಯ್ಕೆ ಮಾಡಿ ಎಲ್ಲರೂ ಅವರನ್ನು ಬೆಂಬಲಿಸಿದ್ದಾರೆ. ಅಧಿಕಾರ ಹಂಚಿಕೆ ಸಂಬಂಧಿಸಿದಂತೆ ಮಾತುಕತೆ ನಡೆದಿದ್ದು, ಎರಡೂವರೆ ವರ್ಷ ನಾಗೇಂದ್ರ ಅವರು ಅಧ್ಯಕ್ಷರಾಗಲಿದ್ದಾರೆ. ನಂತರದ ಎರಡೂವರೆ ವರ್ಷಗಳ ಕಾಲ ಬಸವರಾಜು ಅವರು ಅಧ್ಯಕ್ಷರಾಗಲಿದ್ದಾರೆ’ ಎಂದರು.

ಅಭಿವೃದ್ಧಿಗೆ ಶ್ರಮಿಸುವೆ: ಗೆಲುವಿನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವೈ.ಸಿ.ನಾಗೇಂದ್ರ ಅವರು, ‘ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ವರಿಷ್ಠರು ನನಗೆ ಸ್ಪರ್ಧಿಸಲು ಅವಕಾಶ ನೀಡಿದ್ದರು. ಎಲ್ಲರ ಬೆಂಬಲದೊಂದಿಗೆ ಗೆದ್ದಿದ್ದೇನೆ. ಜಿಲ್ಲೆಯ ಹಾಲು ಉತ್ಪಾದಕರು ಹಾಗೂ ಡೇರಿಗಳ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಸರ್ಕಾರ ಹಾಗೂ ಒಕ್ಕೂಟದ ಯೋಜನೆಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.