ADVERTISEMENT

ಗೌಡ ಲಿಂಗಾಯತರನ್ನೂ 2ಎಗೆ ಸೇರಿಸಲು ಬಿಜೆಪಿ ಮುಖಂಡರ ಆಗ್ರಹ

ಪಂಚಮಸಾಲಿಗಳ ಹೋರಾಟಕ್ಕೆ ಬೆಂಬಲ–ಮಲ್ಲೇಶ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 13:07 IST
Last Updated 22 ಫೆಬ್ರುವರಿ 2021, 13:07 IST
ಮಲ್ಲೇಶ್‌
ಮಲ್ಲೇಶ್‌   

ಚಾಮರಾಜನಗರ: ಹಳೆ ಮೈಸೂರು ಭಾಗದಲ್ಲಿರುವ ಗೌಡ ಅಥವಾ ಒಕ್ಕಲಿಗ ಲಿಂಗಾಯತರನ್ನೂ ಪ್ರವರ್ಗ–2ಎಗೆ ಸೇರಿಸಬೇಕು ಎಂದು ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್‌ ಅವರು ಸೋಮವಾರ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಉತ್ತರ ಕರ್ನಾಟಕದ ಲಿಂಗಾಯತ ಪಂಚಮಸಾಲಿ ಸಮುದಾಯದವರು 2ಎ ಸೇರ್ಪಡೆಗಾಗಿ ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಪಂಚಮಸಾಲಿ ಎಂದರೆ ವ್ಯವಸಾಯ ಮಾಡುವವರು. ಗೌಡ ಅಥವಾ ಒಕ್ಕಲಿಗ ಲಿಂಗಾಯತ, ಪಂಚಮಸಾಲಿ ಲಿಂಗಾಯತ ಎಂಬುದು ಎಲ್ಲ ಒಂದೆ. ಚಿತ್ರದುರ್ಗದಿಂದ ಆರಂಭಗೊಂಡು ಹಳೆ ಮೈಸೂರು ಭಾಗದವರೆಗೆ ಇದೇ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದು ಹೇಳಿದರು.

‘ಲಿಂಗಾಯತರು ಎಂದರೆ ಶ್ರೀಮಂತರು ಎಂಬ ಭಾವನೆ ಎಲ್ಲರಲ್ಲೂ ಇದೆ. ಗೌಡ/ಒಕ್ಕಲಿಗ ಲಿಂಗಾಯತರಲ್ಲಿ ಹಲವರು ಕಡು ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಮಹಿಳೆಯರು ಕೂಡ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ನಮ್ಮ ಸಮುದಾಯದಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿಗಳಿಲ್ಲ. ರಾಜಕೀಯ ಪ್ರಾತಿನಿಧ್ಯವೂ ಇಲ್ಲ. ನಿಗಮ ಮಂಡಳಿಗಳಲ್ಲಿ ಹುದ್ದೆ ನೀಡಿಲ್ಲ. ಮುಖ್ಯಮಂತ್ರಿ ಸೇರಿದಂತೆ ಸಚಿವರೆಲ್ಲ ಲಿಂಗಾಯತ ಸಮುದಾಯದ ಬೇರೆ ಉಪಜಾತಿಯವರೇ ಇದ್ದಾರೆ. 2ಎ ಪ್ರ‌ವರ್ಗಕ್ಕೆ ಸೇರ್ಪಡೆಗೊಂಡರೆ ನಮ್ಮ ಸಮುದಾಯದವರಿಗೂ ಮೀಸಲಾತಿ ಸಿಕ್ಕಿ, ಉನ್ನತ ಹುದ್ದೆಗೆ ಏರಲು ಅನುಕೂಲವಾಗುತ್ತದೆ’ ಎಂದು ಹೇಳಿದರು.

ADVERTISEMENT

ಮಠಾಧೀಶರು ಕಣ್ತೆರೆಯಿರಿ: ‘ಸಿದ್ಧಗಂಗಾ, ಸುತ್ತೂರು, ದೇವನೂರು ಸೇರಿದಂತೆ ಹಲವು ಮಠಗಳು ಗೌಡ ಲಿಂಗಾಯತ ಇದೇ ಸಮುದಾಯಕ್ಕೆ ಸೇರಿವೆ. ಈ ಮಠಗಳ ಸ್ವಾಮೀಜಿಗಳು ಕಣ್ತೆರೆದು, ಈ ವಿಚಾರವಾಗಿ ಸರ್ಕಾರದ ಗಮನ ಸೆಳೆಯಬೇಕು. ಹೋರಾಟದ ರೂಪು ರೇಷೆ ಸಿದ್ಧಪಡಿಸಬೇಕು’ ಎಂದರು.

‘ಗೌಡ ಲಿಂಗಾಯತ ಸಮುದಾಯದ ಬಹುತೇಕರು ಯಡಿಯೂರಪ್ಪ ಅವರಿಗೆ ಮತ ಹಾಕಿ ಅವರು ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ. ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರಿಸುವ ಮೂಲಕ ಜನರ ಋಣವನ್ನು ತೀರಿಸಬೇಕು. ಅವರ ಮಗ ವಿಜಯೇಂದ್ರ ಅವರು ಇದಕ್ಕೆ ಬೆಂಬಲ ವ್ಯಕ್ತಪಡಿಸಬೇಕು. ಪಂಚಮಸಾಲಿಗಳು ನಡೆಸುತ್ತಿರುವ ಹೋರಾಟವನ್ನು ನಾವು ಬೆಂಬಲಿಸುತ್ತೇವೆ’ ಎಂದು ಅವರು ಹೇಳಿದರು.

ಮುಖಂಡರಾದ ಕೊತ್ತಲವಾಡಿ ಮಹದೇವಕುಮಾರ್, ಎಂಅರ್ಎಫ್ ಮಹೇಶ, ಅರಕಲವಾಡಿ ಮಹೇಶ್, ರಾಮಸಮುದ್ರ ಸುರೇಶ್, ಸತೀಶ್, ಗಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.