ADVERTISEMENT

ಕಾಂಗ್ರೆಸ್‌ ದಲಿತರಿಗೆ ಸಿಎಂ ಹುದ್ದೆ ನೀಡಲಿ: ಶಿವರಾಂ ಸವಾಲು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 0:51 IST
Last Updated 15 ಆಗಸ್ಟ್ 2021, 0:51 IST
ಕೆ.ಶಿವರಾಂ
ಕೆ.ಶಿವರಾಂ   

ಚಾಮರಾಜನಗರ: ‘ದೇಶದಲ್ಲಿ ದಲಿತರ ಮತಗಳನ್ನು ತೆಗೆದುಕೊಂಡು ಅಧಿಕಾರ ಅನುಭವಿಸುತ್ತ ಬಂದಿರುವ ಕಾಂಗ್ರೆಸ್‌ ದಲಿತರನ್ನು ಮುಖ್ಯಮಂತ್ರಿ ಮಾಡಿಲ್ಲ. ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆಯಂತಹ ಧೀಮಂತ ನಾಯಕರಿಗೂ ಅಧಿಕಾರ ಕೊಟ್ಟಿಲ್ಲ. ಸಿದ್ದರಾಮಯ್ಯ ಅವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಲಿ’ ಎಂದು ಬಿಜೆಪಿ ಮುಖಂಡ ಕೆ.ಶಿವರಾಂ ಅವರು ಸವಾಲು ಹಾಕಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮವರನ್ನು ಈ ಬಾರಿ ಸಿಎಂ ಮಾಡುತ್ತಾರೆ, ಮುಂದಿನ ಸಾರಿ ಮಾಡುತ್ತಾರೆ ಎಂದು ಆಸೆ ಪಡುತ್ತಲೇ ಇದ್ದೇವೆ. ಆದರೆ ಅವಕಾಶ ಕೊಡುತ್ತಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಹಾಗಿದ್ದರೆ ನಮ್ಮವರನ್ನು ಯಾವಾಗ ಮಾಡುತ್ತಾರೆ? ದಲಿತರು ಜೀತದಾಳುಗಳ ರೀತಿಯಲ್ಲಿ ಪ್ರತಿ ಬಾರಿ ಕಾಂಗ್ರೆಸ್‌ಗೆ ಮತ ಹಾಕುತ್ತಿದ್ದಾರೆ. ಆದರೆ, ಪಕ್ಷ ನಮ್ಮನ್ನು ಕೈ ಹಿಡಿಯಲಿಲ್ಲ. ಅಂತಹವರಿಗೆ ನಾವು ಮತ ಹಾಕಬೇಕೇ ಎಂದು ನಮ್ಮ ಜನರನ್ನೇ ಕೇಳಬೇಕಾಗಿದೆ’ ಎಂದರು.

‘ಬಿಜೆಪಿ ಕೋಮುವಾದಿ ಪಕ್ಷ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಆದರೆ ನಿಜವಾಗಿ ಕಾಂಗ್ರೆಸ್‌ ಕೋಮುವಾದಿ ಪಕ್ಷ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಗೌರವ ನೀಡುತ್ತಿರುವುದು ಬಿಜೆಪಿ. ಅಂಬೇಡ್ಕರ್‌ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಕಾಂಗ್ರೆಸ್‌ನವರು ಅಂಬೇಡ್ಕರ್‌ ಅವರಿಗೆ ಮಾಡಿದ್ದು ಇಷ್ಟೇ. ಅವರನ್ನು ಎರಡು ಬಾರಿ ಸೋಲಿಸಿದ್ದು ಹಾಗೂ ಮೃತಪಟ್ಟಾಗ ಸಂಸ್ಕಾರಕ್ಕೆ ಜಾಗಕೊಡದೇ ಇದ್ದಿದ್ದು’ ಎಂದು ವ್ಯಂಗ್ಯವಾಡಿದರು.

ADVERTISEMENT

ಆನೇಕಲ್ ಟಿಕೆಟ್ ಆಕಾಂಕ್ಷಿ: ಚುನಾವಣಾ ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಯಡಿಯೂರಪ್ಪ ಅವರು ಕ್ಷೇತ್ರದಲ್ಲಿ ಕೆಲಸದಲ್ಲಿ ತೊಡಗುವಂತೆ ಸೂಚಿಸಿದ್ದರು. ಅಂತಿಮವಾಗಿಶ್ರೀನಿವಾಸ ಪ್ರಸಾದ್ ಅವರು ಸ್ಪರ್ಧಿಸಿದರು. ಅವರು ಹಿರಿಯ ನಾಯಕರು. ಸುಮ್ಮನಿದ್ದೆ. ನನಗೆ ಅದೃಷ್ಟ ಇರಲಿಲ್ಲ’ ಎಂದರು.

‘ಮುಂದೆ ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ವಿಧಾನಸಭೆಗೆ ಸ್ಪರ್ಧಿಸುವ ಬಯಕೆ ಹೊಂದಿದ್ದೇನೆ. ಬೆಂಗಳೂರಿನ ಆನೇಕಲ್‌ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಬಯಸಿದ್ದೇನೆ. ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.