ADVERTISEMENT

ಆರ್‌ಎಸ್‌ಎಸ್‌ ಟೀಕೆ: ಸಿದ್ದರಾಮಯ್ಯ ವಿರುದ್ಧ ಮಲ್ಲೇಶ್‌ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ದಲಿತ ಮುಖಂಡರನ್ನು ತುಳಿದ ನಾಯಕ ಸಿದ್ದರಾಮಯ್ಯ: ಮಲ್ಲೇಶ್‌ ಆರೋಪ

​ಪ್ರಜಾವಾಣಿ ವಾರ್ತೆ
Published 29 ಮೇ 2022, 16:01 IST
Last Updated 29 ಮೇ 2022, 16:01 IST
ಮಲ್ಲೇಶ್‌
ಮಲ್ಲೇಶ್‌   

ಚಾಮರಾಜನಗರ: ಕಾಂಗ್ರೆಸ್‌ ಪಕ್ಷದಲ್ಲಿರುವ ದಲಿತ ಮುಖಂಡರನ್ನು ನಿರಂತರವಾಗಿ ತುಳಿಯುತ್ತಾ ಬಂದಿರುವ ಸಿದ್ದರಾಮಯ್ಯ, ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯಿಂದ ಆರ್‌ಎಸ್‌ಎಸ್‌ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್‌ ಅವರು ಭಾನುವಾರ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ನವರನ್ನು ಪ್ರಸ್ತಾಪಿಸಿ ಆರ್ಯರು, ದ್ರಾವೀಡರು ಎಂಬ ವಿಚಾರದ ಬಗ್ಗೆ ಮಾತನಾಡಿದ್ದಾರೆ. 6000 ವರ್ಷಗಳ ಹಿಂದಿನ ವಿಷಯವನ್ನು ಈಗ ಎತ್ತುವ ಅಗತ್ಯವೇನಿತ್ತು? ನೆಹರೂ ಯಾರು ಹಾಗಿದ್ದರೆ? ಸೋನಿಯಾ ಗಾಂಧಿ ಎಲ್ಲಿಯವರು? ರಾಹುಲ್‌ ಗಾಂಧಿ ಯಾರು’ ಎಂದು ಪ್ರಶ್ನಿಸಿದರು.

‘ಇವರೇ ಪಕ್ಷದ ಒಳಗಿರುವ ದಲಿತ ಮುಖಂಡರನ್ನು ಸಹಿಸುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಗೆ ಕಳುಹಿಸಿದರು. ಪರಮೇಶ್ವರ ಅವರನ್ನು ಸೋಲಿಸಿದರು. ಶ್ರೀನಿವಾಸ ಪ್ರಸಾದ್‌ ಅವರನ್ನು ‍ಪಕ್ಷ ತೊರೆಯುವಂತೆ ಮಾಡಿದರು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಇದೆಲ್ಲವನ್ನೂ ಮಾಡಿದವರು ಈಗ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ತಾವು ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಅದಕ್ಕೆ ತಕ್ಕಂತೆ ನಡೆದುಕೊಂಡಿಲ್ಲ. ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ, ಇವರ ಶಿಫಾರಸುಗಳನ್ನೆಲ್ಲ ವರಿಷ್ಠರು ನಿರಾಕರಿಸುತ್ತಿದ್ದಾರೆ. ಜನರು ದಡ್ಡರಲ್ಲ. ಎಲ್ಲವನ್ನೂ ಗಮನಿಸುತ್ತಿದ್ದಾರೆ’ ಎಂದರು.

ಅಕ್ಕಪಕ್ಕದಲ್ಲಿ ಭ್ರಷ್ಟರು: ಬಿಜೆಪಿ ಸರ್ಕಾರದ ವಿರುದ್ಧ ಶೇ 40 ಕಮಿಷನ್‌ ಆರೋಪ ಮಾಡುವ ಸಿದ್ದರಾಮಯ್ಯ ಅವರು ತಮ್ಮ ಸುತ್ತಮುತ್ತ ಭ್ರಷ್ಟರನ್ನೇ ಕೂರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕೆ.ಜೆ.ಜಾರ್ಜ್‌, ಜಮೀರ್‌ ಅಹಮದ್‌ ಖಾನ್‌ ಎಲ್ಲರೂ ಭ್ರಷ್ಟರೇ ಎಂದು ಆರೋಪಿಸಿದರು.

ಟಿಪ್ಪು ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಮೈಸೂರು ಒಡೆಯರ್‌ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ಒಡೆಯರ್‌ ಮನೆತನದ ಋಣದಲ್ಲಿದ್ದರೂ ಅವರ ಬಗ್ಗೆ ಇದುವರೆಗೆ ಒಳ್ಳೆಯ ಮಾತನಾಡಿಲ್ಲ. ಆರ್‌ಎಸ್‌ಎಸ್‌ಗೆ ಬೈಯುವ ಅವರು ಎಸ್‌ಡಿಪಿಐ, ಪಿಎಫ್‌ಐ ಮುಂತಾದ ಸಂಘನೆಗಳ ಬಗ್ಗೆ ಏನೂ ಹೇಳುವುದಿಲ್ಲ. ಸಿದ್ದರಾಮಯ್ಯ ಅವರು ಸಮಾಜ ದ್ರೋಹಿಗಳನ್ನು ವೈಭವೀಕರಿಸುತ್ತಾರೆ. ಅಂತಹವರನ್ನೇ ಪಕ್ಕದಲ್ಲಿ ಇಟ್ಟುಕೊಂಡಿರುತ್ತಾರೆ’ ಎಂದು ಮಲ್ಲೇಶ್‌ ವ್ಯಂಗ್ಯವಾಡಿದರು.

ಬಿಜೆಪಿ ಮುಖಂಡರಾದ ರಾಮಸಮುದ್ರ ಬಸವರಾಜು, ಪ್ರಸನ್ನ, ನಲ್ಲೂರು ಪರಮೇಶ, ಗೌಡರ ಸುರೇಶ್, ಬಸವನಪುರ ರಾಜಶೇಖರ್, ಸತೀಶ್ ಇದ್ದರು.

‘ಗೊಂದಲದಲ್ಲಿ ಧ್ರುವನಾರಾಯಣ’

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಯಾರ ಬಣದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ ಎಂದು ಮಲ್ಲೇಶ್‌ ಟೀಕಿಸಿದರು.

‘ದಲಿತ ಮುಖಂಡರನ್ನು ತುಳಿಯುತ್ತಾ ಬಂದಿರುವ ಸಿದ್ದರಾಮಯ್ಯ ಅವರು ಧ್ರುವನಾರಾಯಣ ಅವರನ್ನೂ ಸುಮ್ಮನೆ ಬಿಡುವುದಿಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರ ಜೊತೆ ಸೇರುವುದೋ ಅಥವಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಗುರುತಿಸಿಕೊಳ್ಳುವುದೇ ಎಂಬ ಗೊಂದಲ ಅವರನ್ನು ಕಾಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.