ADVERTISEMENT

ಸತೀಶ ಜಾರಕಿಹೊಳಿ ವಿರುದ್ಧ ಬಿಜೆಪಿ ಆಕ್ರೋಶ

ಹೇಳಿಕೆ ವಾಪಸ್‌ ಪಡೆದು ಕ್ಷಮೆಯಾಚನೆಗೆ ಮುಖಂಡರ ಆಗ್ರಹ, ಪೊಲೀಸರಿಗೆ ದೂರು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 12:44 IST
Last Updated 9 ನವೆಂಬರ್ 2022, 12:44 IST
ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬುಧವಾರ ಚಾಮರಾಜನಗರದಲ್ಲಿ ಸತೀಶ್‌ ಜಾರಕಿಹೊಳಿ ವಿರುದ್ಧ ಪ್ರತಿಭಟನೆ ನಡೆಸಿದರು
ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬುಧವಾರ ಚಾಮರಾಜನಗರದಲ್ಲಿ ಸತೀಶ್‌ ಜಾರಕಿಹೊಳಿ ವಿರುದ್ಧ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ‘ಹಿಂದೂ ಪದಕ್ಕೆ ಕೆಟ್ಟ ಅರ್ಥವಿದೆ’ ಎಂದು ಹೇಳಿರುವ ಕಾಂಗ್ರೆಸ್‌ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ತಮ್ಮ ಹೇಳಿಕೆ ವಾಪಸ್‌ ಪಡೆದು ಜನರ ಕ್ಷಮೆ ಕೇಳಬೇಕು, ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿರುವ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಸೇರಿದ ಪ್ರತಿಭಟನಕಾರರು, ಭುವನೇಶ್ವರಿ ವೃತ್ತದ ವರೆಗೂ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಿದರು.

ಭಾರತ, ಹಿಂದೂ, ಹಿಂದುತ್ವದ ಪರ ಜೈಕಾರ ಹಾಕಿ, ಸತೀಶ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಸತೀಶ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌.ಸುಂದರ್‌ರಾಜ್‌ ಅವರಿಗೆ ಮನವಿ ಮಾಡಿದರು.

ADVERTISEMENT

ಪ್ರತಿಭಟನೆಯಲ್ಲಿ ಮಾತನಾಡಿದ ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್‌ ಹಾಗೂ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ, ‘ಹಿಂದೂ ಪದದ ಬಗ್ಗೆ ಮಾತನಾಡುವ ಮೂಲಕ ಸತೀಶ ಜಾರಕಿಹೊಳಿ ಅವರು ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸ್ವತಃ ಹಿಂದೂವಾಗಿದ್ದುಕೊಂಡು ಅವರು ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ. ಅವರು ತಕ್ಷಣವೇ ಕ್ಷಮೆ ಕೇಳಬೇಕು. ಇಲ್ಲವೇ ಇಡೀ ರಾಷ್ಟ್ರದಾದ್ಯಂತ ನೆಲೆಸಿರುವ ಹಿಂದೂಗಳು ಉಗ್ರವಾಗಿ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಎಚ್ಚರಿಸಿದರು.

ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡಿರುವ ಸತೀಶ ಅವರನ್ನು ಗಡಿಪಾರು ಮಾಡಬೇಕು ಎಂದು ಸೋಮನಾಯಕ ಆಗ್ರಹಿಸಿದರು.

‘ಹಿಂದೂ ಪದದ ಬಗೆಗಿನ ಹೇಳಿಕೆ ದೇಶದ ಸಂಸ್ಕೃತಿ, ದೇಶದ ಜನರ ಜೀವನ ಪದ್ಧತಿ ಮತ್ತು ನಮ್ಮ ಸಂಸ್ಕೃತಿ ಪರಂಪರೆಯ ಜೀವನಾಧಾರಿತ ಪದ್ಧತಿಯಲ್ಲಿ ಸಾಗುತ್ತಿರುವ ಅಪಾರ ಹಿಂದೂಗಳ ಮನಸ್ಸಿಗೆ ನೋವು ಉಂಟಾಗಿದೆ. ರಾಜ್ಯ, ದೇಶದಾದ್ಯಂತ ಸಾಮರಸ್ಯ ಹಾಳುಮಾಡಿ ರಾಜಕೀಯವಾಗಿ ತನ್ನ ವ್ಯಯಕ್ತಿಕ ಲಾಭ ಪಡೆಯಲು ಯತ್ನಿಸಿರುವ ಸತೀಶ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ನಾಗಶ್ರೀ ಪ್ರತಾಪ್‌, ಮಂಗಲ ಶಿವಕುಮಾರ್‌, ಜಿ.ನಾರಾಯಣ ಪ್ರಸಾದ್‌, ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್‌, ನಗರಸಭೆ ಅಧ್ಯಕ್ಷೆ ಆಶಾ, ರಾಜ್ಯ ಸಮಿತಿ ಸದಸ್ಯ ನೂರೊಂದು ಶೆಟ್ಟಿ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.