ಚಾಮರಾಜನಗರ: ಜಿಲ್ಲೆಯಲ್ಲಿ ಜೀತ ವಿಮುಕ್ತರಿಗೆ ಸಾಮಾಜಿಕ ಭದ್ರತೆ, ಆಶ್ರಯ ಮನೆ, ಬಿಡುಗಡೆ ಪತ್ರ, ಪರಿಹಾರ ಸೌಲಭ್ಯ ಸಹಿತಿ ಇನ್ನಿತರೆ ಸರ್ಕಾರಿ ಸೌಲಭ್ಯಗಳು ದೊರೆತಿವೆಯೇ ಎಂಬ ಕುರಿತು ಪರಿಶೀಲಿಸಿ ವಾರದೊಳಗೆ ವರದಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ‘ಜಿಲ್ಲೆಯಲ್ಲಿ 253 ಮಂದಿ ಜೀತ ವಿಮುಕ್ತರಿದ್ದಾರೆ. ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜೀತ ವಿಮುಕ್ತಿಗೊಂಡಿದ್ದ ಹಲವರು ಮೃತಪಟ್ಟಿದ್ದು ಕೆಲವರಿಗೆ ಗುರುತಿನ ಚೀಟಿ, ಬಿಡುಗಡೆ ಪತ್ರ ನೀಡಿರುವುದಿಲ್ಲ.
ಸಂತ್ರಸ್ತರಿಗೆ ಜಮೀನು ನೀಡಲು ಗಡಿ ಗುರುತಿಸಿ ಹಸ್ತಾಂತರ ಮಾಡಬೇಕು. ಸರ್ಕಾರದ ಸ್ಥಳ ಲಭ್ಯವಿಲ್ಲದಿದ್ದರೆ ಉಪವಿಭಾಗಾಧಿಕಾರಿ ಹಂತದಲ್ಲಿ ದರ ನಿಗದಿಪಡಿಸಿ ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಸಿ ಹಂಚಿಕೆ ಮಾಡಬೇಕು. ಜೀತವಿಮುಕ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ವಿಳಂಬ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದೆಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಜೀತವಿಮುಕ್ತರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಸಾಕಷ್ಟು ವಿಳಂಬವಾಗಿದ್ದು ಮುಂದೆ ಇಂತಹ ಘಟನೆಗಳು ನಡೆಯಬಾರದು, ಜಿಲ್ಲಾಮಟ್ಟದಲ್ಲಿ ನಡಾವಳಿ ತಯಾರಿಸಬೇಕು, ಜೀತವಿಮುಕ್ತರಿಗೆ ಮಂಜೂರಾಗಿರುವ ಜಮೀನುಗಳು ಬೇರೆಯವರ ಸ್ವಾಧೀನದಲ್ಲಿದ್ದರೆ ಒತ್ತುವರಿ ತೆರವುಗೊಳಿಸುವ ಕಾರ್ಯ ಶೀಘ್ರ ನಡೆಯಬೇಕು, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕು.
ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಹಶೀಲ್ದಾರ್‌ಗಳು, ಭೂದಾಖಲೆ ಅಧಿಕಾರಿಗಳು ವಾರದೊಳಗೆ ಜಿಲ್ಲೆಯಲ್ಲಿ ಗುರುತಿಸಲಾಗಿರುವ ಜೀತವಿಮುಕ್ತರ ಸ್ಥಿತಿಗತಿಯ ಕುರಿತು ವರದಿ ಸಲ್ಲಿಸಬೇಕು. ಅ.13ರಂದು ನಿಗದಿಯಾಗಿರುವ ಮುಂದಿನ ಸಭೆಯೊಳಗೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಜೀತವಿಮುಕ್ತರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ನಿರ್ದೇಶನ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ಕಾಯ್ದೆ ಕುರಿತು ಅರಿವು ಮೂಡಿಸಲು ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಅರಿವು ಕಾರ್ಯಾಗಾರ ಏರ್ಪಡಿಸಬೇಕು. ಅಕ್ಟೋಬರ್‌ನಲ್ಲಿ ಜಿಲ್ಲಾಮಟ್ಟದ ಕಾರ್ಯಗಾರ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸುಳ್ವಾಡಿ ವಿಷಪ್ರಾಶನ ದುರಂತದ ಸಂತ್ರಸ್ತರಿಗೆ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರ ನಿಯಮಿತವಾಗಿ ಆಯೋಜಿಸಬೇಕು. ವಿಷಪ್ರಾಶನದಿಂದ ಅಡ್ಡಪರಿಣಾಮಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಜೂನ್‌ನಿಂದ ಸಂತ್ರಸ್ಥರಿಗೆ ಪೌಷ್ಟಿಕ ಆಹಾರ ವಿತರಣೆಯಾಗದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಸಂತ್ರಸ್ತರಿಗೆ ಡಿ.ಎಂ.ಎಫ್ ನಿಧಿಯಿಂದ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ವಾರದೊಳಗೆ ಸಮಸ್ಯೆ ಬಗೆಹರಿಸಬೇಕು. ವಿಳಂಬಕ್ಕೆ ಸಬೂಬು ಹೇಳಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಮಾತನಾಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆಗೆ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ತಾಲೂಕುವಾರು ಎಷ್ಟು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ, ಯಾವ ಹಂತದಲ್ಲಿವೆ, ಪರಿಹಾರ ದೊರತಿದೆಯೇ ಎಂಬುದನ್ನು ಪರಿಶೀಲಿಸಿ ನ್ಯಾಯ ದೊರಕಿಸಲು ನೆರವು ನೀಡಬೇಕು ಎಂದರು.
ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅರಕಲವಾಡಿ ನಾಗೇಂದ್ರ, ರಮೇಶ್ ಪ್ರಭು, ವೃಷಬೇಂದ್ರ, ನಟರಾಜು ಮಾಳಿಗೆ, ಸಿದ್ದರಾಜು, ಕೇತಮ್ಮ, ರಜನಿ ಕೆ. ತಿವಾರಿ, ಅರ್ಪಿತಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ತಹಶೀಲ್ದಾರ್‌ಗಳು, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.
‘ಸಮಿತಿ ಸಹಕಾರ ಪಡೆಯಿರಿ’
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆಗೆ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಸಹಕಾರ ಪಡೆಯಬೇಕು. ಸಮಿತಿ ಸದಸ್ಯರಿಂದ ಗ್ರಾಮಗಳಲ್ಲಿರುವ ತಳಮಟ್ಟದ ಸಮಸ್ಯೆ ಅರಿವಾಗಲಿದೆ. ಕೋವಿಡ್ ಸಂತ್ರಸ್ಥರಿಗೆ ಉದ್ಯೋಗ ನೀಡುವ ಸಂಬಂಧ ಕೆಲವು ಸಂತ್ರಸ್ಥರು ಎಸ್.ಎಸ್.ಎಲ್.ಸಿ ಉತ್ತೀರ್ಣವಾಗದಿರುವುದು ಕಂಡುಬಂದಿದ್ದು ಅವರಿಗೆ ಅಗತ್ಯ ತರಬೇತಿ ನೀಡಿ ಉತ್ತೀರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.