ADVERTISEMENT

ಚಾಮರಾಜನಗರ: ಇದೀಗ ಚಿಟ್ಟೆಗಳ ವಲಸೆಯ ಸಮಯ

ಮಳೆ, ತೇವಾಂಶವ ವಾತಾವರಣದಿಂದ ತಪ್ಪಿಸಿಕೊಳ್ಳಲು ಚಿತ್ತಾರ್ಷಕ ಪಾತರಗಿತ್ತಿಗಳ ಪಯಣ

ನಾ.ಮಂಜುನಾಥ ಸ್ವಾಮಿ
Published 6 ಜೂನ್ 2020, 20:13 IST
Last Updated 6 ಜೂನ್ 2020, 20:13 IST
ಯಳಂದೂರು ತಾಲ್ಲೂಕಿನ ಉಪ್ಪಿನಮೋಳೆ ಬಳಿ ಕಂಡು ಬಂದ ವಲಸೆ ಪತಂಗಗಳು
ಯಳಂದೂರು ತಾಲ್ಲೂಕಿನ ಉಪ್ಪಿನಮೋಳೆ ಬಳಿ ಕಂಡು ಬಂದ ವಲಸೆ ಪತಂಗಗಳು   

ಯಳಂದೂರು:ಮುಂಗಾರಿನ ಆರಂಭವನ್ನು ಸಾರುವ ಪತಂಗಗಳ ವಲಸೆ ಪ್ರಕ್ರಿಯೆ ಕೀಟ ಲೋಕದ ವಿಸ್ಮಯಗಳಲ್ಲಿ ಒಂದು. ಲಕ್ಷಾಂತರ ಚಿಟ್ಟೆಗಳು ಒಮ್ಮೆಲೆ ಸಸ್ಯಗಳ ಮೇಲೆ ಕುಳಿತು ಹಾಲುರಸ ಹೀರುವ ದೃಶ್ಯ ಮನಮೋಹಕ. ಇಂತಹ ಚಿಟ್ಟೆ ಕುಟುಂಬದ ಮೆರವಣಿಗೆ ಈಗ ಜನಾಕರ್ಷಣೆಯ ಕೇಂದ್ರವಾಗಿದೆ.

ಪಟ್ಟಣದ ಉಪ್ಪಿನಮೋಳೆ ಬಳಿಯ ವಿಜಿಕೆಕೆ ಆವರಣ ಮತ್ತು ಬನದ ಸಮೀಪದ ಕಾಲುವೆಗಳಲ್ಲಿ ಮರ, ಮಣ್ಣುಗಳನ್ನು ಅಪ್ಪಿ, ಹೂವಿನ ಮಕರಂದ, ಪರಾಗವನ್ನು ಹೀರುವ ದೃಶ್ಯ ಪತಂಗ ಪ್ರಿಯರ ಅಧ್ಯಯನಕ್ಕೆ ಪೂರಕವಾಗಿದೆ.

ಪೂರ್ವ ಮುಂಗಾರು ಕಾಣಿಸುತ್ತಿದ್ದಂತೆ ಕೆಲವು ಪ್ರಭೇದದ ಪಾತರಗಿತ್ತಿಗಳು ಮೆರವಣಿಗೆ ಹೊರಡುತ್ತವೆ. ಜೂನ್‌ ತಿಂಗಳ ವರ್ಷಧಾರೆಯ ಅಬ್ಬರ ಹೆಚ್ಚುತ್ತಿದ್ದಂತೆ ಮಳೆ, ಚಳಿ, ಗಾಳಿಯಿಂದ ರಕ್ಷಿಸಿಕೊಳ್ಳಲು ಕಡಿಮೆ ಮಳೆ ಬೀಳುವ ಘಟ್ಟಗಳತ್ತ ತೆರಳುತ್ತವೆ ಎನ್ನುತ್ತಾರೆ ಪಾತರಗಿತ್ತಿ ಸಂಶೋಧಕರು.

ADVERTISEMENT

‘ಕೆಲವು ಜಾತಿಯ ಚಿಟ್ಟೆಗಳು ಸೆಪ್ಟಂಬರ್‌–ಅಕ್ಟೋಬರ್‌ ನಡುವೆ ಸಂತಾನೋತ್ಪತ್ತಿಗೆ ತೊಡಗುತ್ತವೆ. ಈ ಅವಧಿಯಲ್ಲಿ ತಿರುಮಲದಿಂದ ಸಹ್ಯಾದ್ರಿ ತನಕ ವಲಸೆ ಹೋಗುತ್ತವೆ. ಇಲ್ಲಿ ಮೊಟ್ಟೆಯಿಂದ ಹೊರ ಬರುವ ಪತಂಗಗಳು ನೈರುತ್ಯ ಮುಂಗಾರು ಆಗಮಿಸುತ್ತಿದ್ದಂತೆ ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿಯಾದ ಬಿಆರ್‌ಟಿಗೂ ಆಗಮಿಸುತ್ತವೆ. ಈ ಸಂದರ್ಭ ಸಾವಿರಾರು ಗುಂಪುಗಳಲ್ಲಿ ಒಟ್ಟಾಗಿ ಚಲಿಸುತ್ತವೆ. ಹುಲಿಪಟ್ಟೆ ಚಿಟ್ಟೆ, ಹಳದಿ ಚಿಟ್ಟೆ ಮತ್ತು ಡಾರ್ಕ್‌ ಬ್ಲೂಗಳು ಸಸ್ಯ ಮತ್ತು ಮರದ ಸುತ್ತ ಸುತ್ತುವ ದೃಶ್ಯ ಈಗ ಸಾಮಾನ್ಯ’ ಎಂದುಚಿಟ್ಟೆಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿರುವ ಸುಮನಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿಟ್ಟೆ ವಲಸೆ ಜಾಗತಿಕ ತಾಪದ ವ್ಯತ್ಯಾಸವನ್ನು ತಿಳಿಯಲು ನೆರವಾಗಿದೆ. ಆಹಾರ, ಉರಿ ಬಿಸಿಲು, ಅತಿಯಾದ ಮಳೆ ವಲಸೆಗೆ ಕಾರಣ. ಈ ಸಂದರ್ಭದಲ್ಲಿ ಇವು ನೂರಾರು ಕಿಲೊ ಮೀಟರ್‌ ತೆರಳುತ್ತವೆ. ವಂಶಾಭಿವೃದ್ಧಿಯ ಸಮಯದಲ್ಲಿ ವೈವಿಧ್ಯಮಯ ಸಸ್ಯಗಳ ಮಕರಂದ ಹೀರುವಿಕೆ, ಬಗೆಬಗೆಯ ಮಣ್ಣಿನ ರುಚಿಯನ್ನು ಆಘ್ರಾಣಿಸುತ್ತವೆ’ ಎಂದು ಅವರು ವಿವರಿಸಿದರು.

ವಯನಾಡಿನ ಫರ್ನ್ಸ್‌ ನ್ಯಾಚುರಲಿಸ್ಟ್‌ ಸೊಸೈಟಿ (ಎಫ್‌ಎನ್‌ಎಸ್‌), ಮಲಬಾರಿನ ಟ್ರಾವೆಂಕೂರ್‌ ನ್ಯಾಚುರಲ್‌ ಹಿಸ್ಟರಿ ಸೊಸೈಟಿ (ಟಿಎನ್‌ಎಚ್‌ಎಸ್‌), ನ್ಯಾಚುರಲ್‌ ಹಿಸ್ಟರಿ ಸೊಸೈಟಿ (ಎಂಎನ್‌ಎಚ್‌ಎಸ್‌) ಸಂಸ್ಥೆಗಳು ದಕ್ಷಿಣ ಭಾರತದಲ್ಲಿ ಚಿಟ್ಟೆಗಳ ವಲಸೆ ಬಗೆಗಿನ ಅಧ್ಯಯನಕ್ಕೆ ಶ್ರಮಿಸುತ್ತಿವೆ.

ದಖ್ಖನ್‌ ಡಾರ್ಕ್‌ ಬ್ಲೂ ಟೈಗರ್, ಓರಿಯಂಟಲ್‌ ಬ್ಲೂ ಟೈಗರ್, ಡಬಲ್‌ ಬ್ರಾಂಡೆಡ್‌ ಬ್ಲ್ಯಾಕ್‌ ಕ್ರೋ ಮತ್ತು ಇಂಡಿಯನ್‌ ಕಾಮನ್‌ ಕ್ರೋಗಳು ಮುಂಗಾರು ಆರಂಭಕ್ಕೂ ಮೊದಲೇ ತಂಪು ಹವಾಮಾನ ಮತ್ತು ಹೆಚ್ಚು ಮಳೆಗೆ ಸಿಲುಕುವುದನ್ನು ತಪ್ಪಿಸಲು ವಲಸೆ ಹೊರಡುತ್ತವೆ.

ವಲಸೆಯ ಬೆನ್ನು ಹತ್ತಿ...

ಚಿಟ್ಟೆ ‘ಲೆಪಿಡೊಪ್ಟೆರಾ ಆರ್ಡರ್‌’ಗೆ ಸೇರಿದ ಸುಂದರ ಕೀಟ. ಇದರ ಅಧ್ಯಯನ ನಡೆಸುವವರನ್ನು ‘ಲೆಪಿಡಾಪ್ಟರಿಸ್ಟ್’ ಎಂದು ಕರೆಯುತ್ತಾರೆ. ಕಡಿಮೆ ಜೀವಿತಾವಧಿ ಕಾರಣ ಒಂದೇ ಚಿಟ್ಟೆ ಪೂರ್ಣ ವಲಸೆ ಹಾದಿಯನ್ನು ಪೂರೈಸದು, ಹೆಣ್ಣು ಚಿಟ್ಟೆಗಳು ಈ ವಲಸೆ ಅವಧಿಯಲ್ಲಿ ಮೊಟ್ಟೆ ಇಡುತ್ತವೆ. ನಂತರ ವಲಸೆ ಕೈಗೊಂಡರೆ 3–4 ಪೀಳಿಗೆಯೊಡನೆ ತಮ್ಮ ಮೂಲ ಆವಾಸಕ್ಕೆ ಮರಳುತ್ತವೆ. ಬಿಆರ್‌ಟಿ ಸುತ್ತಮುತ್ತಲ ಆವಾಸದಲ್ಲಿ ನೂರಾರು ಬಗೆಯ ಪತಂಗಗಳು ಮನೆ ಮಾಡಿವೆ.

ಎಫ್‌ಎನ್‌ಎಸ್‌ ಚಿಟ್ಟೆ ಗುಂಪಿನ ಸದಸ್ಯರಾದ ಪಿ.ಎ.ವಿನಯನ್‌ ಮಾಹಿತಿ ನೀಡಿ, ‘ಚಿಟ್ಟೆಗಳ ಬಗ್ಗೆ ಆಸಕ್ತಿ ಇರುವವರು ‘ಬಟರ್‌ಫ್ಲೈ ಮೈಗ್ರೇಶನ್‌ ಇಂಡಿಯಾ’ ಸದಸ್ಯರಾಗಬಹುದು. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳ ಅರಣ್ಯ ಇಲಾಖೆ ಅನುಮತಿ ಸಿಕ್ಕರೆ, ರಾಷ್ಟ್ರೀಯ ಜಾಲವನ್ನು ವಿಸ್ತರಿಸಬಹುದು. ಆ ಮೂಲಕ ದೇಶದೆಲ್ಲಡೆ ಏಕ ಕಾಲಕ್ಕೆ ಚಿಟ್ಟೆಗಳ ವಲಸೆ ಅಧ್ಯಯನ ಕೈಗೊಳ್ಳಬಹುದು. ಪ್ರಸ್ತುತ 202 ಜನರು ವ್ಯಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿ (9447044498) ಸಕ್ರಿಯರಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.