ADVERTISEMENT

ಬಿಳಿಗಿರಿರಂಗನಬೆಟ್ಟ: ವಿಶೇಷ ಸೇವೆ, ಉತ್ಸವ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 1:58 IST
Last Updated 24 ನವೆಂಬರ್ 2025, 1:58 IST
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಸ್ವಾಮಿಯ ಪಲ್ಲಕ್ಕಿ ಉತ್ಸವದ ನಡೆಯಿತು
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಸ್ವಾಮಿಯ ಪಲ್ಲಕ್ಕಿ ಉತ್ಸವದ ನಡೆಯಿತು   

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಭಾನುವಾರ ವಿವಿಧ ವಿಶೇಷ ಉತ್ಸವಗಳು ಜರುಗಿದವು.

ದೀಪೋತ್ಸವ. ಪಲ್ಲಕ್ಕಿ ಉತ್ಸವ ಹಾಗೂ ಬ್ಯಾಟಮನೆ ಸೇವೆಗಳಲ್ಲಿ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.

ಮುಂಜಾನೆ ಮಾರ್ಗಶಿರ ಶುದ್ಧ ತದಿಗೆ ಮೂಲ ನಕ್ಷತ್ರದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಾರಾಂತ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಕಲ್ಯಾಣಿಯಲ್ಲಿ ಮಿಂದು ಮಡಿಯುಟ್ಟು ದೇವಾಲಯಕ್ಕೆ ತೆರಳಿದರು.

ADVERTISEMENT

ನಂತರ ರಂಗನಾಥನ ಬೆಳ್ಳಿ ದಂಡಕಹೊತ್ತು ಸೇವೆ ಪೂರೈಸಿದರು. ಈ ಸಮಯ ಮಂಗಳವಾದ್ಯ ಮೊಳಗಿಸಿ, ಅಗ್ನಿ ಸ್ತ್ರೋತ್ರ ಮಾಡಿ, ಉತ್ಸವ ಮೂರ್ತಿಗೆ ಹೂ ಹಾರಗಳನ್ನು ಅರ್ಪಿಸಲಾಯಿತು.

ಬೆಳಿಗ್ಗೆ ಕಲ್ಯಾಣಿ ತೀರ್ಥದಿಂದ ಪ್ರೋಕ್ಷಣೆ ಮಾಡಿ, ಸ್ವಾಮಿಗೆ ಮಂಗಳಾರತಿ ಬೆಳಗಿ, ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಯಿತು. ಈ ವೇಳೆ ದಾಸರು ಶಂಕನಾದ ಮೊಳಗಿಸಿ, ಜಾಗಟೆ ಬಾರಿಸಿ ಬ್ಯಾಟಮನೆ ಉತ್ಸವದಲ್ಲಿ ಪಾಲ್ಗೊಂಡರು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ಅಲಂಕಾರ ಪೂಜೆ ಕಣ್ತುಂಬಿಕೊಂಡರು.

‘ದೀಪಾವಳಿಯಿಂದ ವಿಷ್ಣು ದೀಪೋತ್ಸವ ತನಕ ದಿನನಿತ್ಯ ದೀಪ ಬೆಳಗಲಾಗುತ್ತದೆ. ಈ ವೇಳೆ ಭಕ್ತರು ಹರಿನಾಮ ಸ್ಮರಣೆ ಮಾಡಿ ಹಣತೆ ಬೆಳಗುತ್ತಾರೆ. ಹಣ್ಣು ಕಾಯಿ ಪೂಜೆ ನೆರವೇರಿಸುತ್ತಾರೆ’ ಎಂದು ದೇವಳ ಪಾರುಪತ್ತೆಗಾರ ರಾಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.