ADVERTISEMENT

ಬಿಳಿಗಿರಿ ಬೆಟ್ಟದ ರಂಗಪ್ಪನಿಗೂ ಕೊರೊನಾ ಗ್ರಹಣ‌: ಮೇ 6ರ ಉತ್ಸವ ಅನುಮಾನ

ಊರಿಗೆ ಹೊರಟ ಶಿಲ್ಪಿಗಳು

ನಾ.ಮಂಜುನಾಥ ಸ್ವಾಮಿ
Published 17 ಏಪ್ರಿಲ್ 2020, 1:54 IST
Last Updated 17 ಏಪ್ರಿಲ್ 2020, 1:54 IST
ಯಳಂದೂರು ತಾಲ್ಲೂಕಿನ ಪ್ರಸಿದ್ದ ರಂಗನಾಥಸ್ವಾಮಿ ದೇವಾಲಯದ ಕಾಮಗಾರಿ ಸ್ಥಗಿತಗೊಂಡಿರುವುದು
ಯಳಂದೂರು ತಾಲ್ಲೂಕಿನ ಪ್ರಸಿದ್ದ ರಂಗನಾಥಸ್ವಾಮಿ ದೇವಾಲಯದ ಕಾಮಗಾರಿ ಸ್ಥಗಿತಗೊಂಡಿರುವುದು   

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ದೇವಾಲಯ ನಿರ್ಮಾಣ ಕಾಮಗಾರಿಗೂ ಕೋವಿಡ್‌–19ಸಂಕಷ್ಟ ತಂದಿತ್ತಿದೆ. ಅಂತಿಮ ಹಂತದ ಕೆಲಸಗಳು ಮತ್ತೆ ಸ್ಥಗಿತವಾಗಿದೆ. ದೇವಸ್ಥಾನದ ಗೋಪುರದಲ್ಲಿ ದೇವರ ಶಿಲ್ಪಗಳನ್ನು ಅಳವಡಿಸುತ್ತಿದ್ದಬಹಳಷ್ಟು ಕುಶಲ ಕಾರ್ಮಿಕರು ಊರಿಗೆ ಹೋಗಿದ್ದಾರೆ.

ಇದರಿಂದಾಗಿ ಈ ವರ್ಷವೂ ರಂಗನಾಥನ ಜಾತ್ರೆ, ಉತ್ಸವಗಳು ಕಳೆಗಟ್ಟದು ಎಂಬ ಕೊರಗು ಭಕ್ತರನ್ನುಕಾಡಿದೆ.ಪ್ರಸಕ್ತ ವರ್ಷ ದೊಡ್ಡ ಜಾತ್ರೆ ವೇಳೆಗೆ ನೂತನ ದೇವಾಲಯದಲ್ಲಿ ನಗಾರಿಯ ಶಬ್ದ, ಗಂಟೆಯನಾದ, ದಾಸರ ಅನುರಣನ ಕೇಳಿ ಬರುವ ನಿರೀಕ್ಷೆ ಇತ್ತು. ತೇರಿನ ಉತ್ಸವಕ್ಕೆ ಸಜ್ಜು ಮಾಡಲುಅಳಿದುಳಿದ ಕೆಲಸಕ್ಕೆ ವೇಗದ ಚಾಲನೆ ನೀಡಲಾಗಿತ್ತು. ಬಹಳಷ್ಟು ಶಿಲ್ಪಗಳನ್ನು ಶಿಖರಕ್ಕೆಮುಟ್ಟಿಸುವ ಕೆಲಸಕ್ಕೆ ಚಾಲನೆ ಸಿಕ್ಕಿತ್ತು. ಆದರೆ, ಕೊರೊನಾ ಸೋಂಕು ವ್ಯಾಪಕಆಗುತ್ತಿದ್ದಂತೆ ದೇವರನ್ನು ಗುಡಿಗೆ ಏರಿಸುವ ಶಿಲ್ಪಿಗಳು ತೆರಳಿದ್ದಾರೆ.

‘ಈಗಾಗಲೇ ಶೇ 70ರಷ್ಟು ಕಾಮಗಾರಿ ಮುಗಿದಿದೆ. ದೇವಾಲಯದ ಶಿಖರಕ್ಕೆ ದೇವ–ದೇವತೆಯಉಬ್ಬು ಶಿಲ್ಪಗಳನ್ನು ಅಳವಡಿಸುವ ಕೆಲಸಗಳು ಬಾಕಿ ಇತ್ತು. ಸುಣ್ಣ, ಬಣ್ಣ ಬಳಿದು,ಮೇ–ಜೂನ್‌ನಲ್ಲಿ ಕೆಲಸಗಳನ್ನು ಪೂರೈಸುವ ಜರೂರಿನೊಡನೆ ನಿಪುಣ ಶ್ರಮಿಕರು ದುಡಿಯುತ್ತಿದ್ದರು. ಆದರೆ, ಮಾರ್ಚ್‌ ಮಧ್ಯದಲ್ಲಿ ಹೇರಲಾದ ಲಾಕ್‌ಡೌನ್‌ ಎಲ್ಲಕಾರ್ಯಗಳಿಗೂ ತಿಲಾಂಜಲಿ ನೀಡಿತು’ ಎಂದು ದೇವಾಲಯದ ಆಡಳಿತಾಧಿಕಾರಿ ಎಸ್‌.ಎಂ.ವೆಂಕಟೇಶ್ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ವಿಷ್ಣು, ಭೂದೇವಿ, ಶ್ರೀದೇವಿ, ಲಕ್ಮೀನರಸಿಂಹ, ಆಂಜನೇಯ, ನರಸಿಂಹ, ಗರುಡ, ಪುರುಷಮತ್ತು ರಂಗಸ್ವಾಮಿ ಶಿಲ್ಪಗಳನ್ನು ದೇವಾಲಯದ ಛಾವಣಿ ಮತ್ತು ಗೋಪುರದ ಸುತ್ತಲೂಅಳವಡಿಸಿದ್ದೇವೆ. ಇದರಿಂದ ದೇವಸ್ಥಾನಕ್ಕೆ ದೈವಕಳೆ ಬಂದಿದೆ. ನಂತರ ದೇವ–ದೇವಿಯರ ಕಣ್ಣುಗಳ ಉಬ್ಬು, ಮುಖದ ಆಕರ್ಷಣೆ, ಕರಗಳ ಸುತ್ತಲೂ ಟಚ್‌ ಅಪ್‌ ನೀಡಿದರೆ ಮುಕ್ಕಾಲುಪಾಲು ಕೆಲಸ ನೀಗಿದಂತೆ ಆಗುತ್ತದೆ’ ಎಂದು ಶಿಲ್ಪಿ ಆರ್ಮುಗಂ ಹೇಳಿದರು.

ಮಾಜಿ ಧರ್ಮದರ್ಶಿ ದೊರೆಸ್ವಾಮಿ ಮಾತನಾಡಿ, ‘ದೇವಾಲಯ ಕೆಲಸಮುಕ್ತಾಯದ ಹಂತಕ್ಕೆ ಬಂದಿತ್ತು. ಇನ್ನೇನು ತಳ ಭಾಗದ ನೆಲಹಾಸು ಮತ್ತು ಸಣ್ಣಪುಟ್ಟಸೂಕ್ಷ್ಮ ಕೆಲಸಗಳು ಉಳಿದಿದ್ದವು. ಕೊರೊನಾ ವೈರಸ್‌ ಹರಡುತ್ತಿದ್ದಂತೆ ಅಂತರಕಾಪಾಡುವ ನಿಟ್ಟಿನಲ್ಲಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಲಾಯಿತು. ಈ ವರ್ಷವೂ ದೇವರ ಕೆಲಸಕ್ಕೆವಿಘ್ನವಾಯಿತು’ ಎಂದು ಹೇಳಿದರು.

ದೊಡ್ಡ ತೇರಿನ ಉತ್ಸವ ಅನುಮಾನ
ದೇವಳದಲ್ಲಿ ಜರುಗುವ ದೊಡ್ಡಜಾತ್ರೆಯ ಉತ್ಸವದಂದು ಸಾವಿರಾರು ಜನರು ನೆರೆಯುತ್ತಾರೆ.ರಥೋತ್ಸವ ರದ್ದಾಗಿ 5 ವರ್ಷ ಕಂಡರೂ, ಜನರು ಅಂದು ರಂಗನಾಥನನ್ನು ಅರ್ಚಿಸಿ, ಹರಿಕೆತೀರಿಸುವ ಪರಂಪರೆ ಇದೆ. ದಾಸರು ಮತ್ತು ಸ್ಥಳೀಯರು ಹಣ್ಣು, ಕಾಯಿ ಮಾಡಿಸಿ, ಧೂಪ ದೀಪಹಚ್ಚಿ ತೆರಳುತ್ತಿದ್ದರು.

‘ಕೊರೊನಾ ವೈರಸ್‌ ತಡೆಗಾಗಿ ಮೇ 3ರವರೆಗೆ ಲಾಕ್‌ಡೌನ್ ವಿಸ್ತರಣೆ ಆಗಿದೆ. ವೈಶಾಖ ಮಾಸದಚಿತ್ತ ನಕ್ಷತ್ರದಲ್ಲಿ ಮೇ 6 ರಂದು ಆಯೋಜಿಸುವ ಧಾರ್ಮಿಕ ಆಚರಣೆಗೆ ಜಿಲ್ಲಾಡಳಿತದಅನುಮತಿ ನೀಡುವುದೇ ಎಂಬುದನ್ನು ಕಾದು ನೋಡಬೇಕಿದೆ. ಓಡಾಟಕ್ಕೆ ಆಸ್ಪದ ಇಲ್ಲದಿದ್ದರೆಭಕ್ತಾದಿಗಳು ಮೇ 6 ರಂದು ಮನೆಯಲ್ಲಿ ಇದ್ದು ರಂಗನಾಥಸ್ವಾಮಿ ಸ್ಮರಣೆ ಮಾಡಬೇಕು’ ಎಂದುಆಡಳಿತಾಧಿಕಾರಿ ಎಸ್‌.ಎಂ.ವೆಂಕಟೇಶ್ ಪ್ರಸಾದ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.