ADVERTISEMENT

ವೇತನ ಪಾವತಿಗೆ ಆಗ್ರಹ; ಕೆಲಸ ಮಾಡದಿರಲು ಹೊರಗುತ್ತಿಗೆ ಸಿಬ್ಬಂದಿ ನಿರ್ಧಾರ

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 11:36 IST
Last Updated 12 ಫೆಬ್ರುವರಿ 2023, 11:36 IST
ಬಿಆರ್ ಟಿ ಸಿಬ್ಬಂದಿ
ಬಿಆರ್ ಟಿ ಸಿಬ್ಬಂದಿ   

ಚಾಮರಾಜನಗರ/ಯಳಂದೂರು: ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್ ಟಿ) ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕಳ್ಳ ಬೇಟೆ ನಿಗ್ರಹ ಶಿಬಿರಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವಾಚರ್ಗಳಿಗೆ ಐದು ತಿಂಗಳಿಂದ ಸಂಬಳವಾಗಿಲ್ಲ.

ಇದರಿಂದ ಬೇಸತ್ತಿರುವ ಅವರು ವೇತನ ಪಾವತಿ ಮಾಡುವವರೆಗೆ ಕರ್ತವ್ಯಕ್ಕೆ ಹಾಜರಾಗದಿರಲು ನಿರ್ಧರಿಸಿದ್ದು, ಸ್ಥಳೀಯ ಅರಣ್ಯಾಧಿಕಾರಿಗಳು ಮನವೊಲಿಸಿದ ನಂತರ ಕೆಲವರು ಭಾನುವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಸ್ಥಳೀಯ ಸೋಲಿಗ ಸಮುದಾಯವದವರನ್ನೇ ಅರಣ್ಯ ಇಲಾಖೆ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದೆ. ಬಿಆರ್ ಟಿ ವ್ಯಾಪ್ತಿಯಲ್ಲಿ 28 ಕಳ್ಳಬೇಟೆ ತಡೆ ಶಿಬಿರಗಳಿದ್ದು, ಪ್ರತಿಯೊಂದು ಶಿಬಿರದಲ್ಲೂ ನಾಲ್ವರು ವಾಚರ್ ಗಳಿದ್ದಾರೆ.‌ ಇದಲ್ಲದೆ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲೂ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವವರಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದಿಂದ ಅನುದಾನ ಬಾರದೇ ಇರುವುದರಿಂದ ವೇತನ ಪಾವತಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಸಭೆ ಸೇರಿರುವ ವಾಚರ್ ಗಳು ಮುಂದಿನ ಹೋರಾಟದ ಬಗ್ಗೆ ಚರ್ಚಿಸಿದ್ದಾರೆ.

'ಅಧಿಕಾರಿಗಳು, ಅನುದಾನ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಹೇಳುತ್ತಿದ್ದು, ಇನ್ನೂ ಬಂದಿಲ್ಲ. ವೇತನ ಪಾವತಿ ಮಾಡುವವರೆಗೆ ಕೆಲಸಕ್ಕೆ ಹಾಜರಾಗುವುದು ಬೇಡ ಎಂಬ ಅಭಿಪ್ರಾಯ ಸಭೆಯಲ್ಲಿ ಬಹುತೇಕರು ವ್ಯಕ್ತಪಡಿಸಿದ್ದಾರೆ' ಎಂದು ವಾಚರ್ ಒಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

'ಐದು ತಿಂಗಳ ವೇತನ ಬಾಕಿ ಇರುವುದು ನಿಜ. ಆದರೆ ಸಿಬ್ಬಂದಿ ಯಾರೂ ಮುಷ್ಕರ ಹೂಡಿಲ್ಲ. ಕೆಲಸಕ್ಕೆ ಬಂದಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಶೀಘ್ರ ಅನುದಾನ ಬರಲಿದೆ ಎಂದು ಅವರು ಹೇಳಿದ್ದಾರೆ' ಎಂದು ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್, ನಿರ್ದೇಶಕಿ ದೀಪ್ ಜೆ.ಕಾಂಟ್ರ್ಯಾಕ್ಟರ್ ತಿಳಿಸಿದರು.

ಕೆಲವು ವಲಯಗಳಲ್ಲಿ ಸಿಬ್ಬಂದಿ ಹಾಜರಾಗಿದ್ದರೆ, ಇನ್ನೂ ಕೆಲವೆಡೆ ಹಾಜರಾಗಿಲ್ಲ ಎಂದು ಗೊತ್ತಾಗಿದೆ.

ಎಲ್ಲೆಡೆಯೂ ಬಾಕಿ: ಕೇಂದ್ರದಿಂದ ಅನುದಾನ ಬಾರದೇ ಇರುವುದರಿಂದ ಎಲ್ಲ ಹುಲಿ ಸಂರಕ್ಷಿತ ಪ್ರದೇಶಗಳಲ್ಲೂ ಹೊರ ಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಹೆಚ್ಚು ವರಮಾನ ಹೊಂದಿರುವ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಸ್ಥಳೀಯ ಸಂಪನ್ಮೂಲ ನಿಧಿಯಿಂದ ಸ್ವಲ್ಪ ವೇತನ ಪಾವತಿಸಲಾಗಿದೆ. ಬಿಆರ್ ಟಿಯಲ್ಲಿ ಆ ಪ್ರಮಾಣದಲ್ಲಿ ವರಮಾನ ಸಂಗ್ರಹವಾಗದಿರುವುದರಿಂದ ಸ್ಥಳೀಯವಾಗಿ ಮುಂಚೂಣಿ ಸಿಬ್ಬಂದಿಗೆ ಹಣ ಪಾವತಿಸಲು ಸಾಧ್ಯವಾಗಿಲ್ಲ' ಎಂದು‌ ಮೂಲಗಳು ತಿಳಿಸಿವೆ.

'ಕೇಂದ್ರ ಸರ್ಕಾರ‌ ನೀಡುವ ಅನುದಾನದಷ್ಟೇ‌ ಮೊತ್ತವನ್ನು ರಾಜ್ಯವೂ ನೀಡುತ್ತದೆ.‌ ಕೇಂದ್ರದಿಂದ ಎಷ್ಟು ಬರುತ್ತದೆ ಎಂದು ಗೊತ್ತಿಲ್ಲದಿರುವುದರಿಂದ ರಾಜ್ಯ ಸರ್ಕಾರಕ್ಕೂ ಕೊಡಲು ಆಗುತ್ತಿಲ್ಲ. ಅರಣ್ಯ ಖಾತೆಯೂ ಮುಖ್ಯಮಂತ್ರಿಯವರ ಬಳಿ ಇರುವುದರಿಂದ ಅವರೇ ನಿರ್ಧಾರ ಕೈಗೊಳ್ಳಬೇಕಿದೆ. ಶೀಘ್ರದಲ್ಲಿ ಅನುದಾನ ಬಿಡುಗಡೆಯಾಗಲಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ರಕ್ಷಣೆ ಕಾರ್ಯಕ್ಕೆ ಹೊಡೆತ:

'ಬೇಸಿಗೆಯಾಗಿರುವುದರಿಂದ ಇದು ಕಾಳ್ಗಿಚ್ಚಿನ ಸಮಯ. ಈ ಸಂದರ್ಭದಲ್ಲಿ ಹೆಚ್ಚುವರಿ ಸಿಬ್ಬಂದಿಯ ಅಗತ್ಯವಿದೆ. ಅಂತಹದ್ದರಲ್ಲಿ ಇರುವ ಸಿಬ್ಬಂದಿ ಕರ್ತವ್ಯಕ್ಕೆ ಗೈರಾದರೆ ಅರಣ್ಯ ಸಂರಕ್ಷಣೆ ಪ್ರಯತ್ನಕ್ಕೆ ಧಕ್ಕೆಯಾಗುತ್ತದೆ. ಮುಂಚೂಣಿಯಲ್ಲಿ ನಿಂತು ಅರಣ್ಯ ರಕ್ಷಣೆಯಲ್ಲಿ ತೊಡಗಿರುವ ವಾಚರ್ ಗಳಿಗೆ ಅರಣ್ಯ‌ಇಲಾಖೆ ತಕ್ಷಣವೇ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು' ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.