ADVERTISEMENT

ಬಹಿಷ್ಕಾರದ ಮನಸ್ಥಿತಿ ಬದಲಾಗದಿದ್ದರೆ ಕ್ರಮ: ನ್ಯಾ.ಭಾರತಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 14:12 IST
Last Updated 15 ಡಿಸೆಂಬರ್ 2024, 14:12 IST
ಚಾಮರಾಜನಗರ ತಾಲ್ಲೂಕಿನ ಲಿಂಗರಾಜಪುರಕ್ಕೆ ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನೊಳಗೊಂಡ ಹಿರಿಯ ಅಧಿಕಾರಿಗಳ ತಂಡ ಶುಕ್ರವಾರ ಭೇಟಿನೀಡಿ ಬಹಿಷ್ಕಾರಕ್ಕೊಳಗಾಗಿರುವ ಕುಟುಂಬ ಹಾಗೂ 16 ಗ್ರಾಮಗಳ ಮುಖಂಡರ ಜೊತೆಗೆ ಸಭೆ ನಡೆಸಿತು
ಚಾಮರಾಜನಗರ ತಾಲ್ಲೂಕಿನ ಲಿಂಗರಾಜಪುರಕ್ಕೆ ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನೊಳಗೊಂಡ ಹಿರಿಯ ಅಧಿಕಾರಿಗಳ ತಂಡ ಶುಕ್ರವಾರ ಭೇಟಿನೀಡಿ ಬಹಿಷ್ಕಾರಕ್ಕೊಳಗಾಗಿರುವ ಕುಟುಂಬ ಹಾಗೂ 16 ಗ್ರಾಮಗಳ ಮುಖಂಡರ ಜೊತೆಗೆ ಸಭೆ ನಡೆಸಿತು   

ಚಾಮರಾಜನಗರ: ಉಪ್ಪಾರ ಸಮುದಾಯದ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ಘಟನೆ ಸಂಬಂಧ, ತಾಲ್ಲೂಕಿನ ಲಿಂಗರಾಜಪುರಕ್ಕೆ ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಶುಕ್ರವಾರ ಭೇಟಿ ನೀಡಿ, ಸಂತ್ರಸ್ತರು ಹಾಗೂ 16 ಗ್ರಾಮಗಳ ಕಟ್ಟೆಗಡಿ ಯಜಮಾನರ ಜೊತೆಗೆ ಸಭೆ ನಡೆಸಿದರು‌.

‘ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಠ ಪದ್ಧತಿ ಆಚರಣೆ ಕಾನೂನು ಪ್ರಕರಣ ಶಿಕ್ಷಾರ್ಹ ಅಪರಾಧ. ಇಂತಹ ಘಟನೆಗಳು ಮುಂದೆ ನಡೆಯಬಾರದು’ ಎಂದು 16 ಗ್ರಾಮಗಳ ಮುಖಂಡರಿಗೆ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಎಚ್ಚರಿಕೆ ನೀಡಿದರು.

‘ಮೂರು ತಿಂಗಳ ಗಡುವು ನೀಡಿದ ಅವರು, ಗ್ರಾಮಗಳ ಮುಖಂಡರು ಮನಸ್ಥಿತಿ ಬದಲಾಯಿಸಿಕೊಳ್ಳದಿದ್ದರೆ, ಬಹಿಷ್ಕಾರ ಆಚರಿಸುವುದು ಕಂಡುಬಂದರೆ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎಂದರು.

ADVERTISEMENT

‘ಸಮಾಜದಲ್ಲಿ ಎಲ್ಲರೂ ಸಮಾನರು. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಸಂವಿಧಾನಕ್ಕೆ ವಿರುದ್ಧವಾಗಿ ಬಹಿಷ್ಕಾರ ಹಾಕುವುದು, ದಂಡ ವಿಧಿಸುವುದಕ್ಕೆ ಅವಕಾಶವಿಲ್ಲ. ಕಾನೂನಿನಡಿ ಎಲ್ಲರೂ ಬದುಕಬೇಕು’ ಎಂದರು.

‘ಬಹಿಷ್ಕಾರದಂತಹ ಘಟನೆಗಳು ಮರುಕಳಿಸುವುದಿಲ್ಲ, ಅನಿಷ್ಟ ಪದ್ಧತಿ ಆಚರಣೆಗೆ ಮುಂದಾಗುವುದಿಲ್ಲ ಎಂದು ಮುಖಂಡರು ಲಿಖಿತ ಹೇಳಿಕೆ ನೀಡಿದರು’ ಎಂದು ಸಂತ್ರಸ್ತರು ತಿಳಿಸಿದರು.

ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್, ಉಪವಿಭಾಗಾಧಿಕಾರಿ ಮಹೇಶ್, ವಕೀಲ ಮಹಾಲಿಂಗ ಗಿರ್ಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.