ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ 18 ತಾಣಗಳಲ್ಲಿ ಬಿ.ಎಸ್.ಎನ್.ಎಲ್ 4ಜಿ ಸ್ಯಾಚುರೇಷನ್ ಸೇವೆಗೆ ವರ್ಚುವಲ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು ವೇಗದ ಇಂಟರ್‌ನೆಟ್ ಸೌಲಭ್ಯದ ಜೊತೆಗೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ದೊರೆಯುವ ನಿರೀಕ್ಷೆಗಳು ಇವೆ ಎಂದು ಶಾಸಕ ಎ.ಆರ್ ಕೃಷ್ಣಮೂರ್ತಿ ಹೇಳಿದರು.
ತಾಲ್ಲೂಕಿನ ಅರೇಪಾಳ್ಯ ಗ್ರಾಮದಲ್ಲಿ ಬಿ.ಎಸ್.ಎನ್.ಎಲ್ 4ಜಿ ಸ್ಯಾಚುರೇಷನ್ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಪ್ರಧಾನಿ ಮೋದಿ ಒಡಿಶಾದ ಬೆರ್ಹಾಂಪುರದಿಂದ ದೇಶದ ವಿವಿಧ ಭಾಗಗಳಲ್ಲಿ 4ಜಿ ಸ್ಯಾಚುರೇಷನ್ ಯೋಜನೆಯಡಿ ಸ್ವದೇಶಿ ತಂತ್ರಜ್ಞಾನದ 4 ಜಿ ಸೇವೆಗಳಿಗೆ ಚಾಲನೆ ನೀಡಿದ್ದಾರೆ ಎಂದರು.
‘ಅದರಲ್ಲಿ ಚಾಮರಾಜನಗರ ಜಿಲ್ಲೆಯ 18 ಸ್ಥಳಗಳು ಸೇರಿವೆ. ಜಿಲ್ಲೆಯ ಕುಂಭೇಶ್ವರ ಕಾಲೋನಿ, ಮುರಟಿಪಾಳ್ಯ, ಸೊತ್ತನಹುಂಡಿ, ನಾಗಪಟ್ಟಣ, ರಂಗನಾಥಪುರ, ಎಲಚೆಟ್ಟಿ, ದಡದಹಳ್ಳಿ, ಬಂಡೀಪುರ, ಹಾಲಹಳ್ಳಿ, ನಾಗನತ್ತ, ದಿನ್ನಹಳ್ಳಿ, ಹೂಗ್ಯಂ, ಮೀಣ್ಯಂ ಎ ಬೀಟ್, ಗೋಪಿನಾಥಂ ಬೀಟ್, ಅರಬಗೆರೆ, ಗುಂಡಾಲ್ ಎ ಬೀಟ್ ಬೂದಿಗುಪ್ಪ, ಅರೆಪಾಳ್ಯದಲ್ಲಿ ಬಿ.ಎಸ್.ಎನ್.ಎಲ್ 4ಜಿ ಸ್ಯಾಚುರೇಷನ್ ಸೇವೆ ದೊರೆಯಲಿದೆ’ ಎಂದು ತಿಳಿಸಿದರು.
‘ಇದರಿಂದ ಈ ಭಾಗಗಳಲ್ಲಿ ವೇಗದ ಮೊಬೈಲ್ ಇಂಟರ್‌ನೆಟ್ ಸೇವೆ ದೊರೆಯಯಲಿದೆ. ತುರ್ತು ಸಂದರ್ಭಗಳಲ್ಲಿ ಸಂವಹನ ನಡೆಸಲು ಅನುಕೂಲವಾಗಲಿದೆ. ವೈದ್ಯಕೀಯ, ಅಗ್ನಿಶಾಮಕ ಸೇವೆ, ಪೊಲೀಸ್ ಸೇವೆ, ಡಿಜಿಟಲ್ ಶಿಕ್ಷಣದಂತಹ ಅನುಕೂಲವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು. ಮೊಬೈಲ್ ನೆಟ್‌ವರ್ಕ್ ಸೇವೆಯು ಗ್ರಾಮೀಣ ಭಾಗಗಳಿಗೆ ಹೆಚ್ಚು ಉಪಯುಕ್ತವಾಗಲಿದೆ’ ಎಂದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್ 4ಜಿ ಸ್ಯಾಚುರೇಷನ್ ಸೇವೆಯಿಂದ ಆರೋಗ್ಯ, ಶಿಕ್ಷಣ, ವಿಪತ್ತು ನಿರ್ವಹಣೆಯಂತಹ ಸಂದರ್ಭಗಳಲ್ಲಿ ಹೆಚ್ಚು ಅನುಕೂಲವಾಗಲಿದೆ. ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೂ ಇಂಟರ್‌ನೆಟ್ ಸೇವೆ ಅಗತ್ಯವಾಗಿದ್ದು, ಹೊಸ ಸ್ಯಾಚುರೇಷನ್ ಸೇವೆಯಿಂದ ಸಮೀಕ್ಷಾ ಕಾರ್ಯಕ್ಕೂ ನೆರವಾಗಲಿದೆ’ ಎಂದರು.
‘ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್ ಟವರ್‌ಗಳ ನಿರ್ಮಾಣಕ್ಕಾಗಿ ಬಂದ ಪ್ರಸ್ತಾವಗಳಿಗೆ ಜಿಲ್ಲಾಡಳಿತ ಒತ್ತು ನೀಡಿದ್ದು ಟವರ್ ನಿರ್ಮಾಣಕ್ಕೆ ಅಗತ್ಯವಾದ ಜಾಗ ಗುರುತಿಸಲಾಗಿದೆ. ಅರೆಪಾಳ್ಯದಲ್ಲಿ 4ಜಿ ಸ್ಯಾಚುರೇಷನ್ ಟವರ್ ಉದ್ಘಾಟನೆಯಾಗಿದೆ. ಜೊತೆಗೆ ಜಿಲ್ಲೆಯ 17 ಕಡೆಗಳಲ್ಲಿ ಸ್ಯಾಚುರೇಷನ್ 4ಜಿ ಸೇವೆ ಲಭ್ಯವಾಗುತ್ತಿದೆ. ಮೊಬೈಲ್ ನೆಟ್‌ವರ್ಕ್ ಸೇವೆಗಳನ್ನು ಸಾರ್ವಜನಿಕರು ಸದ್ಭಳಕೆ ಮಾಡಿಕೊಳ್ಳಬೇಕು’ ಎಂದರು.
ಕಾರ್ಯಕ್ರಮದಲ್ಲಿ ಬಿ.ಎಸ್.ಎನ್.ಎಲ್ ಜನರಲ್ ಮ್ಯಾನೇಜರ್ ರಾಜೇಂದ್ರ ಕುಮಾರ್ ಸಿಂಗ್, ಡಿವೈಎಸ್‌ಪಿ ಸ್ನೇಹಾ ರಾಜು, ಡೆಪ್ಯೂಟಿ ಜನರಲ್ ಮ್ಯಾನೇಜರ್ ರವಿಶಂಕರ್, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಮ್ಮ, ನಾಗರಾಜು, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಜೇಂದ್ರ, ನಗರಸಭೆ ಅಧ್ಯಕ್ಷೆ ರೇಖಾ ಹಾಗೂ ಗ್ರಾಮದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.