ADVERTISEMENT

ವೈಫಲ್ಯ ಮುಚ್ಚಿಹಾಕಲು ಮತಾಂತರ ನಿಷೇಧ ಕಾಯ್ದೆ- ಬಿಎಸ್‌ಪಿ ರಾಜ್ಯ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 2:47 IST
Last Updated 31 ಡಿಸೆಂಬರ್ 2021, 2:47 IST
ಕೃಷ್ಣಮೂರ್ತಿ
ಕೃಷ್ಣಮೂರ್ತಿ   

ಚಾಮರಾಜನಗರ: ‘ರಾಜ್ಯ ಬಿಜೆಪಿ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿ, ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಮತ ಬ್ಯಾಂಕ್‌ ಭದ್ರಗೊಳಿಸುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿದೆ’ ಎಂದು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಗುರುವಾರ ಇಲ್ಲಿ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧಾರ್ಮಿಕ ಹಕ್ಕು ಸಂರಕ್ಷಣೆ ಹೆಸರಿನಲ್ಲಿ ಬಿಜೆಪಿ ಸರ್ಕಾರ ರೂಪಿಸಿರುವ ಮತಾಂತರ ನಿಷೇಧ ಕಾಯ್ದೆಯನ್ನು ಬಿಎಸ್‌ಪಿ ವಿರೋಧಿಸುತ್ತದೆ. ಭಾರತೀಯ ಸಂವಿಧಾನದ ಕಲಂ 25ರಿಂದ 30ರವರೆಗೆ ದೇಶದ ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ತನಗೆ ಇಷ್ಟವಾದ ಧರ್ಮಕ್ಕೆ ಸೇರ್ಪಡೆಗೊಳಿಸುವುದು, ಆಚರಿಸುವುದು, ಇಷ್ಟವಿಲ್ಲದ ಧರ್ಮವನ್ನು ತಿರಸ್ಕರಿಸುವ ಹಕ್ಕನ್ನು ನೀಡಿದೆ. ಅಲ್ಲದೇ ಬಲವಂತದ, ಆಮಿಷ ಒಡ್ಡಿ ಮತಾಂತರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶವನ್ನೂ ಸಂವಿಧಾನ ನೀಡಿದೆ. ಹೀಗಿರುವಾಗ ಪ್ರತ್ಯೇಕವಾದ ಮತಾಂತರ ನಿಷೇಧ ಕಾಯ್ದೆಯ ಅಗತ್ಯವಿತ್ತೇ’ ಎಂದು ಪ್ರಶ್ನಿಸಿದರು.

‘2019ರಲ್ಲಿ 17 ಶಾಸಕರನ್ನು ಖರೀದಿಸಿ ಮೈತ್ರಿ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಕೋವಿಡ್‌ ಪರಿಸ್ಥಿತಿ ನಿರ್ವಹಿಸಲು ವಿಫಲವಾಯಿತು. ಪ್ರವಾಹದ ಸಂದರ್ಭದಲ್ಲಿ ಮನೆ ಕಳೆದುಕೊಂಡವರು, ಬೆಳೆ ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಲು ಬಿಜೆಪಿಯವರಿಗೆ ಸಾಧ್ಯವಾಗಲಿಲ್ಲ. ಈ ಬಾರಿ ಸುರಿದ ಧಾರಾಕಾರ ಮಳೆಗೆ ನಷ್ಟ ಅನುಭವಿಸಿದವರಿಗೆ ಪರಿಹಾರವನ್ನೂ ನೀಡಿಲ್ಲ. ಕೋವಿಡ್‌ ಸಂದರ್ಭದಲ್ಲಿ ವೆಂಟಿಲೇಟರ್‌, ಹಾಸಿಗೆ, ಔಷಧ ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ. ರಾಜ್ಯ ಗುತ್ತಿಗೆದಾರರ ಸಂಘವು, ಈ ಸರ್ಕಾರದ ಸಚಿವರು ಯೋಜನೆಯಲ್ಲಿ ಶೇ 40ರಷ್ಟು ಕಮಿಷನ್‌ ಪಡೆಯುತ್ತಾರೆ ಎಂದು ಪ್ರಧಾನಿ, ರಾಷ್ಟ್ರಪತಿಗೆ ಪತ್ರವನ್ನೂ ಬರೆದಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ತನ್ನ ಕಾರ್ಯಗಳಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಇದನ್ನು ಮುಚ್ಚಿ ಹಾಕುವುದಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿದೆ’ ಎಂದು ದೂರಿದರು.

ADVERTISEMENT

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಕಾರ್ಯದರ್ಶಿ ಕಮಲ್‌ ನಾಗರಾಜ್‌, ಜಿಲ್ಲಾ ಅಧ್ಯಕ್ಷ ಎನ್.ನಾಗಯ್ಯ, ಉಪಾಧ್ಯಕ್ಷ ಬಸವಣ್ಣ ಬ್ಯಾಡಮೂಡ್ಲು ಪತ್ರಿಕಾಗೋಷ್ಠಿಯಲ್ಲಿದ್ದರು.

‘ಕಾಯ್ದೆ ವಿರುದ್ಧದ ಹೋರಾಟಕ್ಕೆ ಬೆಂಬಲ’

‘ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ, ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿದೆಯೇ? ಹಿಂದುತ್ವ, ಮತಾಂತರ ನಿಷೇಧ ಕಾಯ್ದೆ, ಲವ್‌ ಜಿಹಾದ್‌ ಕಾಯ್ದೆ, ದೇವಸ್ಥಾನಗಳಿಗೆ ಸ್ವಾತಂತ್ರ್ಯ ಮುಂತಾದ ವಿಚಾರಗಳನ್ನು ಪ್ರಸ್ತಾಪಿಸುತ್ತ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಮುಂದಿನ ಚುನಾವಣೆಗೆ ಮತ ಬ್ಯಾಂಕ್‌ ಸೃಷ್ಟಿಸುವ ಹುನ್ನಾರ ಅವರದ್ದು’ ಎಂದು ಕೃಷ್ಣಮೂರ್ತಿ ಕಿಡಿಕಾರಿದರು.

‘ಮತಾಂತರ ನಿಷೇಧ ಕಾಯ್ದೆ ವಿರುದ್ಧ ನಡೆಯುತ್ತಿರುವ, ನಡೆಯುವ ಎಲ್ಲ ಹೋರಾಟಗಳಿಗೂ ಬಿಎಸ್‌ಪಿ ಬೆಂಬಲ ನೀಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.