ADVERTISEMENT

ಸ್ಮಾರಕದ ಸುತ್ತ ನಿಯಮ ಮೀರಿ ಕಟ್ಟಡ ನಿರ್ಮಾಣ

ಗುಂಡ್ಲುಪೇಟೆ: ವಿಜಯ ನಾರಾಯಣ ದೇವಾಲಯದ 200 ಮೀ. ವ್ಯಾಪ್ತಿಯಲ್ಲಿ ತಲೆ ಎತ್ತುತ್ತಿವೆ ಕಟ್ಟಡಗಳು

ಮಲ್ಲೇಶ ಎಂ.
Published 23 ಅಕ್ಟೋಬರ್ 2021, 16:54 IST
Last Updated 23 ಅಕ್ಟೋಬರ್ 2021, 16:54 IST
ದೇವಾಲಯದ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ
ದೇವಾಲಯದ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ   

ಗುಂಡ್ಲುಪೇಟೆ: ಪ್ರಾಚೀನ ಸ್ಮಾರಕ ಅಥವಾ ಸಂರಕ್ಷಿತ ಸ್ಮಾರಕಗಳ ಸುತ್ತಮುತ್ತಲಿನ 200 ಮೀಟರ್ ಒಳಗೆ ಯಾವುದೇ ಕಟ್ಟಡದ ನಿರ್ಮಾಣ ಮಾಡಬಾರದು ಎಂಬ ಸರ್ಕಾರದ ನಿಯಮವಿದ್ದರೂ ಪಟ್ಟಣದ ವಿಜಯ ನಾರಾಯಣ ಸ್ವಾಮಿ ದೇವಸ್ಥಾನ ಅಕ್ಕಪಕ್ಕದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡಗಳು ನಿರ್ಮಾಣವಾಗುತ್ತಿವೆ.

200 ಮೀಟರ್‌ ವ್ಯಾಪ್ತಿಯ ಒಳಗಡೆ ಕಟ್ಟಡ ನಿರ್ಮಾವಾಗುತ್ತಿದ್ದರೂ ಪುರಸಭೆ ಹಾಗೂ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ದೂರು. ಸುತ್ತಮುತ್ತಲಿನ ನಿವಾಸಿಗಳು ನಿಯಮದ ಅರಿವಿಲ್ಲದೇ ಕಟ್ಟಡ ನಿರ್ಮಿಸುತ್ತಿರುವ ಸಾಧ್ಯತೆ ಇರುತ್ತದೆ. ಅಧಿಕಾರಿಗಳು ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಅದನ್ನು ಮಾಡುತ್ತಿಲ್ಲ ಎಂಬುದು ಅವರ ಆರೋಪ.

‘ಹೊಯ್ಸಳ ದೊರೆ ವಿಷ್ಣುವರ್ಧನ ಈ ದೇವಸ್ಥಾನ ನಿರ್ಮಿಸಿದ್ದ ಎಂದು ಹೇಳಲಾಗುತ್ತಿದೆ. ವಿಜಯನಾರಾಯಣ ಸ್ವಾಮಿ ದೇವಾಲಯ ತಾಲ್ಲೂಕಿನ ಮುಕುಟಪ್ರಾಯ. ಇಂತಹ ಪರಂಪರೆ ಹೊಂದಿರುವ ದೇವಸ್ಥಾನಕ್ಕೆ ಚ್ಯುತಿ ಬರದಂತೆ ಸಂರಕ್ಷಣೆ ಮಾಡಬೇಕಾದದ್ದು ಎಲ್ಲರ ಕರ್ತವ್ಯ. ಆದರೆ ಪುರಸಭೆಯ ಅಧಿಕಾರಿಗಳು ಶಾಮೀಲಾಗಿಯೋ ಅಥವಾ ರಾಜಕೀಯ ಪ್ರಭಾವದಿಂದಲೋ ಗೊತ್ತಿಲ್ಲ, ಸದ್ದಿಲ್ಲದೆ ದೇವಸ್ಥಾನದ ಗೋಪುರಕ್ಕಿಂತ ಎತ್ತರಕ್ಕೆ ಕಟ್ಟಡಗಳ ನಿರ್ಮಾಣವಾಗುತ್ತಿದೆ’ ಎಂದು ಪಟ್ಟಣದ ರಾಜೇಶ್ ಭಟ್ಟ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ದೇವಸ್ಥಾನದ ಸುತ್ತ ವಾಸಕ್ಕಾದರೂ ಮನೆಗಳನ್ನು ನಿರ್ಮಿಸಿ ಕೊಳ್ಳಬೇಕಾದರೆ ಇಲಾಖೆಯ ಅನುಮತಿ ಕಡ್ಡಾಯ. 100 ಮೀಟರ್‌ ಒಳಗೆ ಒಂದು ಮಹಡಿ ಕಟ್ಟಡ ನಿರ್ಮಿಸಲೂ ಅನುಮತಿ ಇಲ್ಲ. ಆದರೆ ದೇವಸ್ಥಾನ ಸುತ್ತಲೂ ಇಂತಹ ಕಟ್ಟಡಗಳು ಕೆಲವೇ ತಿಂಗಳುಗಳಲ್ಲಿ ನಿರ್ಮಾಣವಾಗಿರುವ ನಿದರ್ಶನಗಳು ಹಲವು ಇವೆ. ಈ ಬಗ್ಗೆ ಅಧಿಕಾರಿಗಳು ಯಾರ ಮೇಲೂ ಕ್ರಮ ಕೈಗೊಂಡಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯರೊಬ್ಬರು ತಿಳಿಸಿದರು.

‘ನೋಟಿಸ್‌ ನೀಡಲಾಗಿದೆ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಹೇಮಂತ್‌ ರಾಜ್‌ ಅವರು, ‘ದೇವಸ್ಥಾನದ ಸುತ್ತಲಿನ ನಿಷೇಧಿತ ಪ್ರದೇಶ ಎಂದು ಘೋಷಣೆಯಾಗಿದ್ದರೂ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವವರಿಗೆ ನೋಟಿಸ್ ನೀಡಿ ಭಾರತೀಯ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.