ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮದ ಬೈಪಾಸ್ ರಸ್ತೆಗೆ ಪೊಲೀಸ್ ಇಲಾಖೆ ಸಿಬ್ಬಂದಿ ಬ್ಯಾರಿಕೇಡ್ ಅಳವಡಿಸಿದ್ದಾರೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿತ್ತು, ಅದಲ್ಲದೆ ಈ ಹೆದ್ದಾರಿ ಆರಂಭವಾದ ದಿನದಿಂದಲೂ ಇಲ್ಲಿಯವರೆಗೆ ಸಾವುಗಳ ಸಂಖ್ಯೆ ಮಿತಿಮೀರಿದೆ. ಕಳೆದ ವಾರ ಸಹ ಗ್ರಾಮದ ಮೂವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ತಡೆ ಮಾಡಬೇಕು ಎಂಬುದಾಗಿ ಚಳವಳಿಯನ್ನು ಹಮ್ಮಿಕೊಂಡಿದ್ದರು. ವಿಷಯ ತಿಳಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೇಲ್ಸೇತುವೆ ನಿರ್ಮಾಣ ಮಾಡುವುದಾಗಿ ಒಪ್ಪಿಕೊಂಡಿದ್ದರು.
ಜಿಲ್ಲಾಧಿಕಾರಿ ಸೂಚನೆಯಂತೆ ಕಾಮಗಾರಿ ಮಾಡುವುದಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಒಂದು ತಿಂಗಳಲ್ಲಿ ಕಾಮಗಾರಿ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡುವುದಾಗಿ ಜಿಲ್ಲಾಧಿಕಾರಿ ಸಹ ಹೇಳಿದ್ದರು. ಅಲ್ಲಿಯವರೆಗೆ ಯಾವುದೇ ಅಪಘಾತಗಳು ಸಂಭವಿಸಬಾರದೆಂದು ಡಿವೈಎಸ್ಪಿ ಧರ್ಮೇಂದ್ರ ಅವರ ಸೂಚನೆಯ ಮೇರೆಗೆ ಪಿಎಸ್ಐ ಸುಪ್ರೀತ್ ತಂಡ ತಮ್ಮ ಸಿಬ್ಬಂದಿಯೊಂದಿಗೆ ರಸ್ತೆ ಪರಿಶೀಲಿಸಿ ಬ್ಯಾರಿಕೇಡ್ ಅಳವಡಿಸಿದೆ.
ಈಗ ವಾಹನ ಸವಾರರು ವೇಗವಾಗಿ ಹೋಗಲು ಸಾಧ್ಯವಿಲ್ಲ. ಪ್ರಮುಖ ರಸ್ತೆಗಳಲ್ಲಿ ಸಿಬ್ಬಂದಿ ನಿಯೋಜಿಸಿ ಅಪಘಾತ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ‘ಪ್ರಜಾವಾಣಿ’ಗೆ ಪಿಎಸ್ಐ ಸುಪ್ರೀತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.