ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಗಡಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆಗೆ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ ಸಜ್ಜಾಗಿದೆ.
ಗುರುವಾರ (ಏ.24) ಮಧ್ಯಾಹ್ನ 12ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಗಡಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದುಕೊಂಡಿದೆ. ನೆರೆಯ ಮೈಸೂರು, ಮಂಡ್ಯ, ಹಾಸನ ಸೇರಿದಂತೆ ಮೈಸೂರು ಪ್ರದೇಶದ ಪ್ರಗತಿಗೆ ಸಂಬಂಧಿಸಿದ ಯೋಜನೆಗಳು ಘೋಷಣೆಯಾಗುವ ನಿರೀಕ್ಷೆ ಹೊಂದಲಾಗಿದೆ.
1997ರಲ್ಲಿ ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ನೂತನ ಜಿಲ್ಲೆಯಾಗಿ ರಚನೆಯಾದರೂ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಜಿಲ್ಲೆಯ ಅಭಿವೃದ್ಧಿಗೆ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆಯ ನಿರೀಕ್ಷೆಗಳು ಗರಿಗೆದರಿವೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಳಿಗಿರಿರಂಗನಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆದಿತ್ತು. ಅದಾದ ನಂತರ ಈಗ ಇಡೀ ಸರ್ಕಾರವೇ ಮಾದಪ್ಪನ ಸನ್ನಿಧಿಗೆ ಬರುತ್ತಿದೆ.
ಚಾಮರಾಜನಗರ ಹಾಗೂ ಜಿಲ್ಲೆಯ ಪಟ್ಟಣಗಳಿಗೆ ಒಳಚರಂಡಿ ವ್ಯವಸ್ಥೆ, ರಸ್ತೆಗಳ ಅಭಿವೃದ್ಧಿ, ನೀರಾವರಿ ಯೋಜನೆಗಳು, ಬುಡಕಟ್ಟು ಸಮುದಾಯಗಳಿಗೆ ವಸತಿ, ಹಾಡಿಗಳಿಗೆ ರಸ್ತೆ, ವಿದ್ಯುತ್ ಸಂಪರ್ಕ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಬೇಕಾಗಿರುವ ಯೋಜನೆಗಳ ಬಗ್ಗೆ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ನಾಲೆಗಳ ಅಭಿವೃದ್ದಿಗೆ ಅನುದಾನ ನಿರೀಕ್ಷಿಸಲಾಗುತ್ತಿದೆ.
‘ಬೆಟ್ಟ’ದ ‘ಜೇನುಮಲೆ’ ಭವನದ ಮುಂಭಾಗ ಸಭೆಗೆ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಜರ್ಮನ್ ಟೆಂಟ್ ಹಾಕಲಾಗಿದೆ. ಕೆಲ ಸಚಿವರು ಬುಧವಾರವೇ ಬಂದು ವಾಸ್ತವ್ಯ ಹೂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಗುರುವಾರ ಬೆಳಿಗ್ಗೆ ಆಗಮಿಸಲಿದ್ದಾರೆ. ಅಧಿಕಾರಿ ವರ್ಗ ಬೀಡುಬಿಟ್ಟಿದೆ. ಮಹದೇಶ್ವರ ದೇವಸ್ಥಾನ, ಪ್ರವೇಶದ್ವಾರ ಸೇರಿದಂತೆ ಬೆಟ್ಟದಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.
ಡಿಐಜಿ, ಇಬ್ಬರು ಎಸ್‌ಪಿ, ನಾಲ್ವರು ಹೆಚ್ಚುವರಿ ಎಸ್‌ಪಿ ಭದ್ರತೆಯ ಉಸ್ತುವಾರಿ ವಹಿಸಿದ್ದು, 20 ಡಿವೈಎಸ್‌ಪಿ ಸಹಿತ 1,300 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯನ್ನೂ ಮುಖ್ಯಮಂತ್ರಿ ನಡೆಸಲಿದ್ದು, ನಂತರ ಬೆಟ್ಟದಲ್ಲೇ ವಾಸ್ತವ್ಯ ಹೂಡುತ್ತಾರೆ.
ಏನೇನು ಉದ್ಘಾಟನೆ?
* ಮಹದೇಶ್ವರನ ಚರಿತ್ರೆ ಒಳಗೊಂಡ ಮ್ಯೂಸಿಯಂ
* ವಜ್ರಮಲೆ ಭವನ ವಸತಿಗೃಹ
* ಸಮಗ್ರ ಒಳಚರಂಡಿ ಯೋಜನೆ
* 1 ಮೆಗಾವಾಟ್ ಸೋಲಾರ್ ಪವರ್ ಪ್ಲಾಂಟ್
* ದೊಡ್ಡಕೆರೆ ಜೀರ್ಣೋದ್ಧಾರ ಕಾಮಗಾರಿ
* ವಜ್ರಮಲೆ ಭವನ ವಸತಿ ಗೃಹದ ರಸ್ತೆ ತಡೆಗೋಡೆ
* ಮಹದೇಶ್ವರನ ಪ್ರತಿಮೆವರೆಗೆ ನಿರ್ಮಿಸಿದ ಸಿಸಿ ರಸ್ತೆ
* ಚರಂಡಿ ಸಾಲೂರು ಮಠದ ವೇದಾಗಮ ಪಾಠಶಾಲೆ ಯಾವ್ಯಾವುದಕ್ಕೆ ಶಂಕುಸ್ಥಾಪನೆ?
* ಬೆಟ್ಟದ ಸ್ವಾಗತ ಕಮಾನು
* ದಾಸೋಹ ಭವನ * ತಂಗುದಾಣ
* ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ
* ಡಾರ್ಮೆಟರಿ ಕಟ್ಟಡ * 6 ಕೂಡು ರಸ್ತೆಗಳ ಅಭಿವೃದ್ಧಿ
* ಮಹದೇಶ್ವರ ಬೃಹತ್ ಪ್ರತಿಮೆಯ ಹೊರ ಆವರಣ ಸುತ್ತಲೂ ಗೇಬಿಯನ್ ವಾಲ್
* ಜೆಎಸ್‌ಎಸ್ ಆರ್ಚ್–ಲೋಕೋಪಯೋಗಿ ಇಲಾಖೆ ಕಚೇರಿವರೆಗೆ ಸಿಸಿ ರಸ್ತೆ ಮತ್ತು ಚರಂಡಿ
* ಅಂಚೆ ಕಚೇರಿಯಿಂದ ಅಂತರಗಂಗೆ ಮಾರ್ಗದ ರಸ್ತೆ ಅಭಿವೃದ್ಧಿ
* ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ಸಾಲೂರು ಮಠದವರೆಗೆ ರಸ್ತೆ * ಡಾಂಬರೀಕರಣ ದಾಸೋಹ ಭವನ ಎದುರು ಶೌಚಾಲಯ * ಸ್ನಾನಗೃಹ ಪೌರಕಾರ್ಮಿಕರಿಗೆ ವಸತಿಗೃಹ ನಿರ್ಮಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.