ADVERTISEMENT

ಚಾಮರಾಜನಗರ: ಸಂಪುಟಕ್ಕೆ ಕೆ.ಎನ್.ರಾಜಣ್ಣ ಮರುಸೇರ್ಪಡೆಗೊಳಿಸಲು ಆಗ್ರಹ, ಪ್ರತಿಭಟನೆ

ನಾಯಕ ಸಮುದಾಯಕ್ಕೆ ಅನ್ಯಾಯ ಮಾಡಿದರೆ ವಿಧಾನಸೌಧಕ್ಕೆ ಮುತ್ತಿಗೆ: ಮುಖಂಡ ಎಂ.ರಾಮಚಂದ್ರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 2:02 IST
Last Updated 3 ಸೆಪ್ಟೆಂಬರ್ 2025, 2:02 IST
ಕೆ.ಎನ್.ರಾಜಣ್ಣ ಅವರನ್ನು ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು
ಕೆ.ಎನ್.ರಾಜಣ್ಣ ಅವರನ್ನು ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು   

ಚಾಮರಾಜನಗರ: ಸಕಾರಣ ಇಲ್ಲದೆ ಸಚಿವ ಸಂಪುಟದಿಂದ ವಜಾಗೊಳಿಸಿರುವ ಕೆ.ಎನ್.ರಾಜಣ್ಣ ಅವರನ್ನು ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಭುವನೇಶ್ವರಿ ವೃತ್ತದ ಮೂಲಕ ಬಿ.ರಾಚಯ್ಯ ಜೋಡಿರಸ್ತೆಯ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಸಹಕಾರ ಸಚಿವರಾಗಿದ್ದ ಕೆ.ಎನ್‌.ರಾಜಣ್ಣ ಭ್ರಷ್ಟಾಚಾರ ಸೇರಿದಂತೆ ಪಕ್ಷ ವಿರೋಧಿ ಚಟುವಟಿಕೆ ಮಾಡದಿದ್ದರೂ ಸಂಪುಟದಿಂದ ವಜಾಗೊಳಿಸಿರುವುದು ಖಂಡನೀಯ. ನಾಯಕ ಸಮುದಾಯದ ಮುಖಂಡರನ್ನು ಅಧಿಕಾರದಿಂದ ಕೆಳಗಿಳಿಸಿರುವುದು ಸಮುದಾಯಕ್ಕೆ ಮಾಡಿರುವ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ರಾಜ್ಯದೆಲ್ಲೆಡೆ ರಾಜಣ್ಣ ಅವರ ಪರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದು ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ನಾಯಕ ಸಮಾಜ ನಿರ್ಧಿಷ್ಟವಾಗಿ ಪಕ್ಷವನ್ನು ಗುರಿಯಾಗಿಸಿ ಪ್ರತಿಭಟನೆ ಮಾಡುತ್ತಿಲ್ಲ, ಸಮುದಾಯಕ್ಕೆ ಆಗಿರುವ ಅನ್ಯಾಯ ಖಂಡಿಸುತ್ತಿದ್ದೇವೆ ಎಂದರು.

ಕೆ.ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಬೇಕು. ಬೇಡಿಕೆ ಈಡೇರದಿದ್ದರೆ ಮುಂದೆ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಾಯಕ ವಿದ್ಯಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪು.ಶ್ರೀನಿವಾಸನಾಯಕ ಮಾತನಾಡಿ, ನಾಯಕ ಸಮುದಾಯದ ಮುಖಂಡರನ್ನು ರಾಜಕೀಯವಾಗಿ ಕಡೆಗಣಿಸುವ ಪ್ರಯತ್ನ ಎಲ್ಲ ಪಕ್ಷಗಳಲ್ಲಿ ನಡೆಯುತ್ತಿದೆ. ನಾಯಕರ ವಿರುದ್ಧ ‌ನಿರಂತರ ಶೋಷಣೆ ನಡೆಯುತ್ತಿದೆ. ಸತ್ಯ ಮಾತನಾಡಿದರೆ ಸಮುದಾಯದ ನಾಯಕರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ದೂರಿದರು.

ರಾಜಕೀಯ ಪಕ್ಷಗಳಿಗೆ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮತಗಳು ಮಾತ್ರ ಬೇಕಿದ್ದು, ಅಧಿಕಾರ ಬೇರೆ ಸಮುದಾಯಗಳ ಪಾಲಾಗುತ್ತಿದೆ. ಹಿಂದುಳಿದ ಮತ್ತು ಸಮಾಜವಾದಿ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ರಾಜಣ್ಣ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹದೇವ ನಾಯಕ, ಉದ್ಬೂರು ಮಹಾದೇವಸ್ವಾಮಿ, ದ್ಯಾವಪ್ಪ ನಾಯಕ, ಜಯಸುಂದರ್, ಕೆಂಪನಾಯಕ ಮಾತನಾಡಿದರು. ನಗರಸಭಾ ಅಧ್ಯಕ್ಷ ಸುರೇಶ್, ಸದಸ್ಯ ಶಿವರಾಜ್, ಸಂಘದ ಪ್ರಧಾನ ಕಾರ್ಯದರ್ಶಿ ಆರ್.ರಾಚಪ್ಪ, ಉಪಾಧ್ಯಕ್ಷ ಎನ್.ಮಲ್ಲೇಶ್, ಆಲಗೂಡು ನಾಗರಾಜು, ಕಪನಿನಾಯಕ, ಬುಲೆಟ್ ಚಂದ್ರನಾಯಕ, ಶಿವು ವಿರಾಟ್, ಸಾಗಡೆ ನಂಜುಂಡ ನಾಯಕ, ಹೊಮ್ಮ ರಾಮನಾಯಕ, ಮಹೇಂದ್ರ, ಮಣಿಕಂಠ ನಾಯಕ, ಪರಶಿವನಾಯಕ ಕಟ್ಟೆಮನೆ, ಗಡಿಮನೆ ಹಾಗೂ ಜಿಲ್ಲೆಯ ಗ್ರಾಮಗಳ ಯಜಮಾನರು, ಕುಲಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.