ADVERTISEMENT

ತಂಬಾಕು ಸೇವನೆ ವಿರುದ್ಧ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 14:20 IST
Last Updated 24 ಜೂನ್ 2019, 14:20 IST
ಅಧಿಕಾರಿಗಳು ಸೋಮವಾರ ತಂಬಾಕು ಸೇವನೆ, ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಿದರು
ಅಧಿಕಾರಿಗಳು ಸೋಮವಾರ ತಂಬಾಕು ಸೇವನೆ, ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಿದರು   

ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ವಿವಿಧ ಅಂಗಡಿಗಳು, ಬಾರ್, ರೆಸ್ಟೋರೆಂಟ್, ಹೋಟೆಲ್‌, ಪಾನ್ ಶಾಪ್ ಹಾಗು ಕಿರಾಣಿ ಅಂಗಡಿಗಳು ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ವಿರುದ್ಧ ಅಧಿಕಾರಿಗಳು ಸೋಮವಾರ ವಿಶೇಷ ಕಾರ್ಯಾಚರಣೆ ನಡೆಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶಗಳ ಭಾಗಿದಾರಿಕೆಯಲ್ಲಿ ಕಾರ್ಯಾಚರಣೆ ನಡೆದಿದೆ.ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗು ಕಾರ್ಯಕ್ರಮ ಅಧಿಕಾರಿಗಳಾದ ಡಾ.ಎಂ.ನಾಗರಾಜು ಅವರ ನಿರ್ದೇಶನ ಹಾಗೂ ಪಟ್ಟಣ ಪೋಲೀಸ್ ಠಾಣೆಯ ಸಿಬ್ಬಂದಿ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ.

2003ರ ಕೋಟ್ಪಾ ತಂಬಾಕು ನಿಯಂತ್ರಣ ಕಾಯ್ದೆಯಡಿಸೂಕ್ತ ಸೂಚನಾ ಫಲಕಗಳನ್ನು ಪ್ರದರ್ಶಿಸದ ಮಳಿಗೆಗಳಿಂದ ₹1,200ದಂಡ ವಸೂಲಿ ಮಾಡಿ 17 ಪ್ರಕರಣಗಳನ್ನು ದಾಖಲಿಸಲಾಯಿತು. ಜಾಹೀರಾತು ಮತ್ತು ಇನ್ನಿತರ ತಂಬಾಕು ಉತ್ಪನ್ನಗಳ ಪ್ರದರ್ಶಿಸಿದ ಭಿತ್ತಿಪತ್ರಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.

ADVERTISEMENT

‘ಕಾಯ್ದೆಯ ಸೆಕ್ಷನ್ 4, 5, 6ಎ ಮತ್ತು 6ಬಿ ಹಾಗು 7 ಅನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಆಗತ್ಯವಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಕಾನೂನಿನ ಪ್ರಕಾರ, ತಂಬಾಕು ಉತ್ಪನ್ನಗಳ ಮಾರಾಟ ಸ್ಥಳಗಳಲ್ಲಿ ಅವುಗಳಿಂದಾಗುವ ದುಷ್ಪರಿಣಾಮದ ಕುರಿತು ಸೂಚನಾ ಫಲಕಗಳನ್ನು ಹಾಕಬೇಕು ಎಂದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತರಾದ ನವೀದುಲ್ಲಾ ಷರೀಫ್, ವೀರಣ್ಣ, ಆಹಾರ ಸುರಕ್ಷತಾಧಿಕಾರಿಗಳಾದ ಶ್ರೀನಿವಾಸ್, ನಗರಸಭೆಯ ಆರೋಗ್ಯ ನಿರೀಕ್ಷಕರಾದ ಮಂಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಿಬ್ಬಂದಿ ನಾಗೇಂದ್ರ, ಪಟ್ಟಣ ಪೋಲೀಸ್ ಠಾಣೆಯ ಪ್ರಸನ್ನ ಕುಮಾರ್ ಮತ್ತು ಕುಮಾರಸ್ವಾಮಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.