ADVERTISEMENT

ಕೆಆರ್‌ಎಸ್‌, ಕಬಿನಿಯಿಂದ ನೀರು: 9 ಗ್ರಾಮದಲ್ಲಿ ಕಾಳಜಿ ಕೇಂದ್ರಕ್ಕೆ ಸಿದ್ಧತೆ

ಕಾವೇರಿ ಮಟ್ಟ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 5:24 IST
Last Updated 29 ಜುಲೈ 2025, 5:24 IST
ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಕಾವೇರಿ ನದಿಗೆ ಹರಿಸಿರುವುದರಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರಿನಲ್ಲಿ ಕಬ್ಬಿನ ಬೆಳೆ ಜಲಾವೃತಗೊಂಡಿದೆ
ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಕಾವೇರಿ ನದಿಗೆ ಹರಿಸಿರುವುದರಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರಿನಲ್ಲಿ ಕಬ್ಬಿನ ಬೆಳೆ ಜಲಾವೃತಗೊಂಡಿದೆ   

ಮೈಸೂರು: ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಕಾವೇರಿ ನದಿಗೆ ಹರಿಸಿರುವುದರಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ನದಿ ತೀರಗಳಲ್ಲಿರುವ ಗ್ರಾಮಗಳು ಜಲಾವೃತವಾಗುವ ಭೀತಿ ಎದುರಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನದಿ ತೀರದ ಪ್ರದೇಶಗಳೂ ಮುಳುಗಡೆಯಾಗಿವೆ. ಪ್ರವಾಹ ಪರಿಸ್ಥಿತಿ ಹೆಚ್ಚಾಗುತ್ತಿರುವುದರಿಂದ ಪಟ್ಟಣ ಮತ್ತು ವಿವಿಧ ಗ್ರಾಮಗಳ ನದಿ ತೀರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ನದಿಯತ್ತ ಯಾರೂ ತೆರಳದಂತೆ ಪ್ರಚಾರ ಮಾಡಲಾಗುತ್ತಿದೆ.

ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೆ ಅಣಗಳ್ಳಿ, ಹರಳೆ, ಸರಗೂರು, ಧನಗೆರೆ, ಯಡಕುರಿಯ ಸತ್ತೇಗಾಲ ಅಗ್ರಹಾರದ ಕೃಷಿ ಭೂಮಿ ಜಲಾವೃತಗೊಂಡಿವೆ. ಭತ್ತ, ರಾಗಿ, ಜೋಳ, ಬಾಳೆ, ಕಬ್ಬು ಸೇರಿ ತರಕಾರಿ ಬೆಳೆಗಳು ನಾಶವಾಗುವ ಭೀತಿ ಎದುರಾಗಿದೆ. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ 9 ಗ್ರಾಮಗಳು ಮುಳುಗಡೆಯಾಗಲಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿದೆ.

ADVERTISEMENT

ಶ್ರೀರಂಗಪಟ್ಟಣದ ನದಿ ತೀರದ ದೇವಾಲಯ– ಮಂಟಪ ಮತ್ತು ಕೃಷಿ ಜಮೀನುಗಳು, ಪಶ್ಚಿಮವಾಹಿನಿಯ ಪುರಾತನ ಮಂಟಪ, ದೇವಾಲಯ ಹಾಗೂ ಮಹಾತ್ಮ ಗಾಂಧಿ ಚಿತಾಭಸ್ಮ ಸ್ಮಾರಕ ಮತ್ತು ರಾಜಮನೆತನದ ಸ್ನಾನಘಟ್ಟಗಳು, ಬಟ್ಟೆ ಬದಲಿಸುವ ಮನೆ ಮುಳುಗಿವೆ. ಸಾಯಿಬಾಬಾ ಆಶ್ರಮದ ಮುಖ ಮಂಟಪದೊಳಕ್ಕೆ ನೀರು ನುಗ್ಗಿದ್ದು, ಶಂಭುಲಿಂಗಯ್ಯನಕಟ್ಟೆ ಸ್ಮಶಾನದ ಮೇಲೆ ನೀರು ಹರಿಯುತ್ತಿದೆ.

ಸಮೀಪದ ಗಂಜಾಂನ ಚಿಕ್ಕ ಗೋಸಾಯಿಘಾಟ್‌ ಮತ್ತು ದೊಡ್ಡ ಗೋಸಾಯಿಘಾಟ್‌ಗಳಲ್ಲಿ ದೇವಾಲಯಗಳ ಬಾಗಿಲುವರೆಗೂ ನೀರು ಬಂದಿದೆ. ಆಂಜನೇಯಸ್ವಾಮಿ ದೇವಾಲಯ, ರಂಗನತಿಟ್ಟು ಪಕ್ಷಿಧಾಮದಲ್ಲಿ ಹಳೆಯ ಟಿಕೆಟ್‌ ಕೌಂಟರ್‌ ನೀರಿನಿಂದ ಆವೃತವಾಗಿದೆ. ರಾಂಪುರ, ಗಂಜಾಂ, ಮರಳಾಗಾಲ, ಚಿಕ್ಕಪಾಳ್ಯ, ಹಂಗರಹಳ್ಳಿ ಬಳಿ ನದಿ ತೀರದ ಕೃಷಿ ಜಮೀನುಗಳ ಮೇಲೆ ನೀರು ಹರಿಯುತ್ತಿದೆ. ಶ್ರೀನಿವಾಸ ಅಗ್ರಹಾರದ ಬಳಿ ಕಾವೇರಿ ನದಿ ನೀರು ಲೋಕಪಾವನಿ ನದಿಯತ್ತ ಹಿಮ್ಮುಖವಾಗಿ ಹರಿಯತೊಡಗಿದೆ.

ಉತ್ತರ ಕಾವೇರಿ ನದಿ ಸೇತುವೆ, ವೆಲ್ಲೆಸ್ಲಿ ಸೇತುವೆ, ಸಾಯಿಬಾಬಾ ಆಶ್ರಮದ ಬಳಿ ಸೇತುವೆ ಮೇಲೆ ನಿಂತು ಫೋಟೊ, ಸೆಲ್ಫೀ ತೆಗೆದುಕೊಳ್ಳುವವರು ಹೆಚ್ಚಾಗುತ್ತಿದ್ದು, ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಜನದಟ್ಟಣೆಯನ್ನು ನಿವಾರಿಸುವುದು ಪೊಲೀಸರಿಗೆ ಸವಾಲಾಗಿದೆ.

ಕೊಡಗಿನಲ್ಲಿ ಮಳೆ ಕಡಿಮೆಯಾದರೂ ಬಿರುಗಾಳಿ ತಗ್ಗಿಲ್ಲ. ಅದೇ ಕಾರಣಕ್ಕೆ ಶಾಲಾ, ಕಾಲೇಜುಗಳಿಗೆ ಸೋಮವಾರ ರಜೆ ನೀಡಲಾಗಿತ್ತು. ನಾಪೋಕ್ಲುವಿನಲ್ಲಿ ಮನೆಗೆ ಹಾನಿಯಾಗಿದೆ. ಶಾಂತಳ್ಳಿ ಹಾಗೂ ಶನಿವಾರಸಂತೆಯಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ.

ಕೆಆರ್‌ಎಸ್‌ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿಸಿರುವುದರಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಪಶ್ಚಿಮವಾಹಿನಿ ಬಳಿ ದೇವಾಲಯ ಮತ್ತು ಮಂಟಪ ಭಾಗಶಃ ಮುಳುಗಿವೆ

Cut-off box - ಇಂದು ನಾಳೆ ಹಿಮವದ್ ಗೋಪಾಲಸ್ವಾಮಿ ದೇಗುಲ ಬಂದ್ ‘ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಂರ್ಪಕ ಕಲ್ಪಿಸುವ ರಸ್ತೆಯ ಒಂದೆಡೆ ತಡೆಗೋಡೆ ಕುಸಿದಿದ್ದು ಲೋಕೋಪಯೋಗಿ ಇಲಾಖೆ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದೆ. ಹೀಗಾಗಿ ಜುಲೈ 29 ಮತ್ತು 30ರಂದು ದೇವಾಲಯವನ್ನು ಮುಚ್ಚಲಾಗುತ್ತಿದ್ದು ಎರಡೂ ದಿನ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.