ಗುಂಡ್ಲುಪೇಟೆ: ‘ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಕ್ಷೇತ್ರದಲ್ಲಿ ನೀರಿನ ಬವಣೆ ಕಡಿಮೆ ಮಾಡಿದ್ದಾರೆ’ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ತಿಳಿಸಿದರು.
ತಾಲ್ಲೂಕಿನ ಪಡಗೂರು ಗ್ರಾಮದಲ್ಲಿ ಎಸ್.ಸಿ.ಪಿ ಯೋಜನೆಯಡಿ ₹75 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ₹30 ಲಕ್ಷ ವೆಚ್ಚದಲ್ಲಿ ಸಾಮಾನ್ಯ ವರ್ಗದ ಬೀದಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಕೆ.ಎಸ್.ನಾಗರತ್ನಮ್ಮ ನಲ್ಲೂರ ಅಮ್ಮಾನಿ ಕೆರೆ ನಿರ್ಮಾಣ ಮಾಡಿದ್ದಾರೆ. ಇದನ್ನು ಕಟ್ಟದಿದ್ದರೆ ನೀರಿನ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತಿತ್ತು. ಇದರಿಂದ ಆ ಭಾಗದಲ್ಲಿ ಇದೀಗ ನೀರಿನ ಸಮಸ್ಯೆ ಕಡಿಮೆಯಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಬಂಧ ಇನ್ನೂ ಹೆಚ್ಚಿನ ಕೆಲಸಗಳು ಆಗಬೇಕಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಾಡಲಾಗುವುದು’ ಎಂದು ತಿಳಿಸಿದರು.
‘ಗ್ರಾಮಗಳಲ್ಲಿ ಚರಂಡಿ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ. ಇದರಿಂದ ಮಳೆ ಬಂದರೆ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುತ್ತದೆ. ಜೊತೆಗೆ ಊರು ಕೂಡ ಸ್ವಚ್ಛವಾಗಿರುತ್ತದೆ. ₹25 ಕೋಟಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 62 ಗ್ರಾಮಗಳ ಸಾಮಾನ್ಯ ವರ್ಗದ ಬೀದಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗುತ್ತಿದ್ದು, ಕೆಲ ಗ್ರಾಮಸ್ಥರು ಕಡಿಮೆ ಹಣ ಹಾಕಿದ್ದೀರಿ ಎನ್ನುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವುಗಳಿಗೆ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ಸಿಎಂ ಬಳಿ ಇನ್ನಷ್ಟು ವಿಶೇಷ ಅನುದಾನಕ್ಕಾಗಿ ಮನವಿ ಮಾಡಲಾಗಿದ್ದು, ಬಿಡುಗಡೆಯಾಗುವ ನಿರೀಕ್ಷೆಯಿದೆ’ ಎಂದು ಹೇಳಿದರು.
‘ಸರ್ಕಾರ ಮಾಡುತ್ತಿರುವ ಕೆಲ ಬದಲಾವಣೆಗಳಲ್ಲಿ ತಪ್ಪು ಸಂದೇಶ ಕೊಡಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ವಿರೋಧ ಪಕ್ಷದವರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ. ಸರ್ಕಾರ ಹಾಲಿನ ಬೆಲೆ ಏರಿಕೆ ಮಾಡಿರುವುದು ರೈತರ ಅನುಕೂಲಕ್ಕಾಗಿಯೇ. ಇದರಿಂದ ರೈತರಿಗೆ ಹಣ ಸಿಗುತ್ತದೆ. ಸ್ವರ್ಧಾತ್ಮಕ ಯುಗವಾಗಿರುವ ಕಾರಣ ತಾಲ್ಲೂಕಿಗೆ ಖಾಸಗೀ ಡೇರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಹಾಲು ಬರಲಿಲ್ಲ ಎಂದರೆ ಈ ಡೇರಿಗಳು ಮುಚ್ಚುತ್ತದೆ. ಆದ್ದರಿಂದ ರೈತರು ಸರ್ಕಾರಿ ಡೇರಿಗೆ ಹೆಚ್ಚಿನ ಆದ್ಯತೆ ನೀಡಿ, ಇಲ್ಲಿಗೆ ಹಾಲು ಹಾಕಬೇಕು. ಇದರಿಂದ ಸರ್ಕಾರಿ ಡೇರಿ ಶಾಶ್ವತವಾಗಿ ಉಳಿಯುತ್ತದೆ. ಜೊತೆಗೆ ಜನರು ಹಾಗೂ ಸರ್ಕಾರಕ್ಕೂ ಕೂಡ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಂಜುಂಡಪ್ರಸಾದ್, ಕಬ್ಬಹಳ್ಳಿ ದೀಪು, ಗಾಯತ್ರಿ ನಾಗೇಶ್ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.