ADVERTISEMENT

ಕೊಳ್ಳೇಗಾಲ: ಗಿಡಮರಗಳಿಗೆ ಸಿಮೆಂಟ್‌, ಡಾಂಬರಿನ ಬಂಧನ

ಬುಡಗಳನ್ನೂ ಬಿಡದ ಜನರು, ಬೇರಿಗೆ ಇಳಿಯದ ನೀರು

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 15:02 IST
Last Updated 19 ಜನವರಿ 2021, 15:02 IST
ಆರ್‌ಎಂಸಿ ತರಕಾರಿ ಮಾರುಕಟ್ಟೆಯಲ್ಲಿರುವ ಗಿಡಗಳ ಬುಡಗಳಲ್ಲಿ ನೀರು ಇಂಗುವುದಕ್ಕೆ ಜಾಗವೇ ಇಲ್ಲ
ಆರ್‌ಎಂಸಿ ತರಕಾರಿ ಮಾರುಕಟ್ಟೆಯಲ್ಲಿರುವ ಗಿಡಗಳ ಬುಡಗಳಲ್ಲಿ ನೀರು ಇಂಗುವುದಕ್ಕೆ ಜಾಗವೇ ಇಲ್ಲ   

ಕೊಳ್ಳೇಗಾಲ: ನಗರದ ವಿವಿಧ ಕಡೆಗಳಲ್ಲಿ ರಸ್ತೆಯ ಬದಿಯಲ್ಲಿರುವ ಗಿಡ ಮರಗಳನ್ನು ನೋಡುವಾಗ ಉಸಿರಾಡಲು ಕಷ್ಟಪಡುತ್ತವೆಯೇನೋ ಎಂದು ಭಾಸವಾಗುತ್ತದೆ. ಅದಕ್ಕೆ ಕಾರಣ ಗಿಡ–ಮರಗಳ ಬುಡದ ಸುತ್ತಲೂ ಹಾಕಿರುವ ಸಿಮೆಂಟ್‌, ಇಂಟರ್‌ಲಾಕ್‌ ಅಥವಾ ಡಾಂಬರು.

ಎಲ್ಲ ಗಿಡ ಅಥವಾ ಮರದ ಬುಡದಲ್ಲಿ ಬೇರಿಗೆ ನೀರು ಇಳಿಯಲು ಒಂದಷ್ಟು ಜಾಗ (ಪಾತಿ) ಇರಬೇಕು. ಆದರೆ, ನಗರದಲ್ಲಿ ಬಹುತೇಕ ಕಡೆಗಳಲ್ಲಿ ಕನಿಷ್ಠ ಜಾಗವನ್ನೂ ಬಿಡದೆ ಗಿಡದ ಕಾಂಡದವರೆಗೂ ಸಿಮೆಂಟು, ಡಾಂಬರು ಅಥವಾ ಇಂಟರ್‌ಲಾಕ್‌ ಹಾಕಿ ಮುಚ್ಚಲಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಪರಿಸರ ಪ್ರಿಯರ ದೂರು

ADVERTISEMENT

ಗಿಡ ಅಥವಾ ಮರ ಎಂದ ಮೇಲೆ ಅದರ ಸುತ್ತಲೂ ಕನಿಷ್ಠ ಒಂದೆರಡು ಅಡಿಯಾದರೂ ಪಾತಿ ಮಾಡಬೇಕು. ಈಗಾಗಲೇ ಬೆಳೆದು ದೊಡ್ಡದಾದ ಮರಗಳಾದರೆ ಪರವಾಗಿಲ್ಲ. ಅವುಗಳ ಬೇರು ಈಗಾಗಲೇ ಭೂಮಿಯ ಅಡಿಗೆ ಇಳಿದಿರುವುದರಿಂದ ಅವು ಬದುಕಬಲ್ಲವು. ಆದರೆ, ಗಿಡಗಳು ಹಾಗಲ್ಲ. ಬೇರು ಇನ್ನೂ ನೆಲದಡಿಯಲ್ಲಿ ಹರಡಿರುವುದಿಲ್ಲ. ಗಟ್ಟಿಯೂ ಆಗಿರುವುದಿಲ್ಲ. ಅಂತಹ ಗಿಡಗಳ ಬುಡದಲ್ಲಿ ನೀರು ಇಂಗುವಷ್ಟು ಜಾಗ ಬಿಡದೇ ಹೋದರೆ ಅವು ಹೆಚ್ಚು ದಿನ ಬದುಕಲಾರವು.

ಎಲ್ಲೆಲ್ಲಿ?: ನಗರದ ಮಹದೇಶ್ವರ ಕಲ್ಯಾಣ ಮಂಟಪ, ಐಬಿ ರಸ್ತೆ, ವಾಸವಿ ಕಾಲೇಜು ರಸ್ತೆ, ಮಹದೇಶ್ವರ ಕಾಲೇಜು ರಸ್ತೆ, ಆರ್.ಎಂ.ಸಿ ರಸ್ತೆ ಮತ್ತು ಆವರಣದ ಒಳಗಡೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅನೇಕ ಕಡೆ ಈ ಮರದ ಬುಡಗಳನ್ನು ಮುಚ್ಚಲಾಗಿದೆ. ಕೆಲವು ಅಂಗಡಿಗಳ ಮಾಲೀಕರು ಅಂಗಡಿ ಮುಂಭಾಗ ಚೆನ್ನಾಗಿ ಕಾಣಬೇಕು ಎಂಬ ಸ್ವಾರ್ಥದಿಂದಲೂ ಈ ಕೆಲಸ ಮಾಡುತ್ತಾರೆ.

‌‘ಮರಗಳ ಬುಡಕ್ಕೆ ಕಲ್ಲು ಮತ್ತು ಸಿಮೆಂಟ್‌ ಹಾಕುವುದು ಅವೈಜ್ಞಾನಿಕ ಕ್ರಮ. ಮರಗಳ ಸುತ್ತಲೂ ಎರಡು ಅಡಿ ಪಾತಿ ಮಾಡಬೇಕು. ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಶಿಕ್ಷಕ ಹಾಗೂ ಪರಿಸರ ಪ್ರೇಮಿ ಸುನೀಲ್‌ ಅವರು ಒತ್ತಾಯಿಸಿದರು.

ಗಿಡ–ಮರಕ್ಕೆ ಕೊಡಲಿ: ನಗರದ ಬಡಾವಣೆಗಳಲ್ಲಿ ಇತ್ತೀಚೆಗೆ ನಿವಾಸಿಗಳು ಗಿಡ ಮರಗಳನ್ನು ಕತ್ತರಿಸುವ ಪ್ರವೃತ್ತಿ ಜಾಸ್ತಿಯಾಗಿದೆ. ಮನೆ ಪೂರ್ಣವಾಗಿ ಕಾಣುವುದಿಲ್ಲ, ನೆರಳು ಬರುತ್ತದೆ ಎಂಬ ಕಾರಣವೊಡ್ಡಿ ಕೊಡಲಿ ಹಾಕುತ್ತಿದ್ದಾರೆ.

‘ಮರ ಕತ್ತರಿಸಿದ್ದನ್ನು ಕೇಳಲು ಹೋದರೆ ನಿವಾಸಿಗಳು ನಮಗೇ ಬೈಯುತ್ತಾರೆ. ಹೆದ್ದಾರಿ ಹಾಗೂ ಬಡಾವಣೆ ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲೂ ಕಡಿಯಲಾಗುತ್ತಿದೆ. ಗಿಡ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಜನರು ಜವಾಬ್ದಾರಿಯಿಂದ ವರ್ತಿಸಬೇಕು’ ಎಂದು ಪರಿಸರ ಪ್ರೇಮಿ ಕಿರಣ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸಸಿಗಳು ಅಥವಾ ಗಿಡಗಳು ಸತ್ತಿದ್ದರೆ ಅಲ್ಲಿ ಹೊಸ ಗಿಡಗಳನ್ನು ನೆಡಲಾಗುವುದು’ ಎಂದು ಕೊಳ್ಳೇಗಾಲ ಬಫರ್‌ ವಲಯ ಅರಣ್ಯಾಧಿಕಾರಿ ಪ್ರವೀಣ್‌ ರಾಮಪ್ಪ ಛಲವಾದಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.