ADVERTISEMENT

ಬಜೆಟ್: ಜನರು ಏನು ಹೇಳುತ್ತಾರೆ?

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 9:36 IST
Last Updated 6 ಜುಲೈ 2019, 9:36 IST
ವಿ.ಗುರುಪ್ರಸಾದ್
ವಿ.ಗುರುಪ್ರಸಾದ್   

ಸಂಪನ್ಮೂಲ ಕ್ರೂಢೀಕರಣಕ್ಕೆ ಅನುಕೂಲ

ದೇಶದ ಸಂಪನ್ಮೂಲ ಕ್ರೋಡೀಕರಣಕ್ಕೆ ಅನುಕೂಲವಾಗುವಂತಹ ಬಜೆಟ್‌ ಮಂಡನೆ ಮಾಡಲಾಗಿದೆ. ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಇದು ಪ್ರತಿ ನಾಗರಿಕನ ಬಜೆಟ್‌. ರೈತರು, ಕಾರ್ಮಿಕರು, ದೇಶ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ದೇಶದ ಸಮಗ್ರ ಅಭಿವೃದ್ಧಿಯ ಮುನ್ನೋಟ ಈ ಬಜೆಟ್‌.

–ವಿ.ಗುರುಪ್ರಸಾದ್, ಸೋಮವಾರಪೇಟೆ, ಚಾಮರಾಜನಗರ

ADVERTISEMENT

**

ಜನರಿಗೆ ಆರ್ಥಿಕ ಹೊರೆ

ಪೆಟ್ರೋಲ್‌, ಡೀಸಲ್‌ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಲಾಗಿದೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಲಿದೆ. ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ದರ ಕಡಿತಗೊಳಿಸುವ ಬಗ್ಗೆ ರಿಶೀಲನೆ ನಡೆಸಬೇಕು. ಒಟ್ಟಿನಲ್ಲಿ ಇದು ಜನರಿಗೆ ಆರ್ಥಿಕ ಹೊರೆ ಹೆಚ್ಚಿಸುವ ಬಜೆಟ್‌

–ಪಿ.ಮಂಜು, ಚಾಮರಾಜನಗರ

**

ಉದ್ಯಮ ಪರವಾದ ಬಜೆಟ್‌

ಎನ್‍ಡಿಎ ಸರ್ಕಾರವು ಈ ಬಜೆಟ್‌ ಅನ್ನು ಬಂಡವಾಳಷಾಹಿಗಳಿಗಾಗಿ ಸಿದ್ಧಪಡಿಸಿದಂತಿದೆ. ಕೇವಲ ಉದ್ಯಮಿಗಳ ಅವರ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ದೇಶದ ಬೆನ್ನೆಲೆಬು ರೈತನನ್ನು ಇಲ್ಲಿ ಕಡೆಗಣಿಸಲಾಗಿದೆ

–ಜವಾದ್ ಅಹಮದ್, ಬಂಡಳ್ಳಿ

**

ನಿರೀಕ್ಷೆ ಹುಸಿ

ಎರಡನೇ ಬಾರಿಗೆ ಕೇಂದ್ರದಲ್ಲಿ ಎನ್‍ಡಿಎ ನೇತೃತ್ವದ ಸರ್ಕಾರ ದೇಶದ ಜನೆತೆಯ ನಿರೀಕ್ಷೆ ಹುಸಿಗೊಳಿಸಿದೆ. ಕೇವಲ ಮ್ಯಾಜಿಕ್ ಬಜೆಟ್ ಮಂಡಿಸುವ ಮೂಲಕ ಜನತೆಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ

–ಮಹೇಶ್, ಶಾಘ್ಯ

**

ಮಹಿಳೆಯರಿಗೆ ಆದ್ಯತೆ

ಬಜೆಟ್‍ನಲ್ಲಿಪರಿಶಿಷ್ಟ ಜಾತಿ ಹಾಗೂ ಪಂಗಡ,ಮಹಿಳೆಯರಿಗೆ ಹೆಚ್ಚಿನ ಹಣಕಾಸಿನ ನೆರವು ನೀಡಲಾಗಿದೆ. ರೈತರಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ಮಾಶಾಸನವನ್ನು₹ 3 ಸಾವಿರಕ್ಕೆ ಏರಿಸಿರುವುದು ಸಂತಸದ ವಿಚಾರ

–ಜೆ.ಶಿವರಾಜು, ಹನೂರು

**

ಆಶಾದಾಯಕ ಬಜೆಟ್

ಇದೊಂದು ಆಶಾದಾಯಕ ಬಜೆಟ್. ಗೃಹ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಹಿರಿಯ ನಾಗರಿಕರ ವೃದ್ಧಾಪ್ಯ ವೇತನ ಹೆಚ್ಚಳ. ಮುದ್ರಾ ಯೋಜನೆಯಲ್ಲಿ ಸ್ವಯಂ ಸೇವಾಮಹಿಳಾ ಸಂಘಕ್ಕೆ ಸಾಲ ಸೌಲಭ್ಯ, ತೆರಿಗೆಯಲ್ಲಿ ವಿನಾಯತಿ ಮಾಡಿರುವುದು ಜನರಿಗೆ ಅನುಕೂಲವಾಗಲಿದೆ. ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ, ಸೋಲಾರ್ ಯೋಜನೆ ಕಡೆಗೆ ಹೆಚ್ಚಿನ ಗಮನ ನೀಡಲಾಗಿದ್ದು, ದೇಶದ ಅಭಿವೃದ್ಧಿಗೆ ಪೂರಕವಾಗಿದೆ

–ಡಾ.ಎಸ್.ಮಣಿಕಂಠ, ಗುಂಡ್ಲುಪೇಟೆ

**

ನಿರಾಶಾದಾಯಕ ಬಜೆಟ್‌

ಕಳೆದ ಬಾರಿಯಂತೆ ಇದು ಕೂಡ ನಿರಾಶಾದಾಯಕ ಬಜೆಟ್. ಹೊಸತನವಿಲ್ಲ. ದಲಿತರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಹಾಗೂ ರೈತರಿಗೆ ಅನ್ಯಯ ಮಾಡಲಾಗಿದೆ. ಹಿಂದಿನ ಸಲ ಮಂಡಿಸಿದ ಬಜೆಟ್ ಅನ್ನು ಈ ವರ್ಷವು ಮಂಡಿಸಿದ್ದಾರೆ ಎನಿಸುತ್ತಿದೆ. ಮಂಡಿಸಿದವರು ಮಾತ್ರ ಬದಲಾಗಿದ್ದಾರೆ ಅಷ್ಟೆ

-ಗಿರೀಶ್, ಲಕ್ಕೂರು

**

ದೂರದೃಷ್ಟಿಯ ಬಜೆಟ್‌

ದೂರದೃಷ್ಟಿಯ ಬಜೆಟ್. ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಉನ್ನತ ಹಾಗೂ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ತರುವಂತಹ ಪ್ರಯತ್ನ ಮಾಡಲಾಗಿದೆ. ಸ್ವಚ್ಛ ಭಾರತ ವಿಸ್ತರಣೆ, ದಾಸೋಹ ಇವುಗಳೆಲ್ಲ ಬಸವೇಶ್ವರರ ಕಾಯಕ ತತ್ವದಡಿಯಲ್ಲಿ ಮಂಡನೆ ಮಾಡಲಾಗಿರುವ ಉತ್ತಮ ಬಜೆಟ್

-ಮಹದೇಶ್ವರ ಸ್ವಾಮಿ, ಗುಂಡ್ಲುಪೇಟೆ

**

ಕೃಷಿ ಅಭಿವೃದ್ಧಿ ನಿರ್ಲಕ್ಷ್ಯ

ಈ ಸಾಲಿನ ಬಜೆಟ್‍ನಲ್ಲಿ ಸಾವಯವ ಕೃಷಿಗೆ ಆದ್ಯತೆ ಕೊಟ್ಟಿರುವುದು ಸ್ವಾಗತಾರ್ಹ. ರೈತರ ಕೃಷಿ ಅಭಿವೃದ್ಧಿಗೆ ಯಾವುದೇ ಕ್ರಮ ಇಲ್ಲ. ನೀರಾವರಿ ಯೋಜನೆಯಲ್ಲಿ ಅಂತರ್ಜಲ ಹೆಚ್ಚಿಸಲು ಕ್ರಮ ತೆಗೆದುಕೊಂಡಿಲ್ಲ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲ. ಸಾಲ ಮನ್ನಾ ವಿಚಾರ ಪ್ರಸ್ತಾಪ ಆಗಿಲ್ಲ. ರೈತರಿಗೆ ಯಾವುದೇ ಆಶಾಭಾವನೆ ಇಲ್ಲ. ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ಹುಸಿಯಾಗಿದೆ.

–ಬಸವಣ್ಣ,ಸಂತೇಮರಹಳ್ಳಿ

**

ಇಂಧನ ಸುಂಕ ಹೆಚ್ಚಳ ಸರಿಯಲ್ಲ

ಚಿನ್ನ, ಪೆಟ್ರೋಲ್, ಡಿಸೇಲ್ ಮೇಲೆ ಸುಂಕ ಏರಿಸಿರುವುದು ಸರಿಯಲ್ಲ. ರೈತರ ಕುರಿತುಸಮರ್ಪಕ ಯೋಜನೆ ಇಲ್ಲ. ಉಳ್ಳವರ ಪರ ಸರ್ಕಾರ ನಿಂತಿದೆ. ನಿರೀಕ್ಷೆಯ ಮಟ್ಟದಲ್ಲಿ ಬಜೆಟ್ ಮೂಡಿ ಬಂದಿಲ್ಲ.

–ಶಶಿಕುಮಾರ್,ಕೊಳ್ಳೇಗಾಲ

**

ಪ್ರಗತಿ ಪೂರಕ

ಸಣ್ಣ ಉದ್ಯಮಿದಾರರಿಗೆ ಸಾಲ, ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಹೆಚ್ಚು ಒತ್ತು ನೀಡಿರುವುದು ಆಶಾದಾಯಕ ಬೆಳವಣಿಗೆ. ಯುವಕರ, ಮಹಿಳೆಯರ ಮತ್ತು ಕೈಗಾರಿಕೋದ್ಯಮಿಗಳ ಪ್ರಗತಿಗೆ ಪೂರಕವಾದ ಬಜೆಟ್

–ಮನೋರಂಜನ್,ಕೊಳ್ಳೇಗಾಲ

**

ಎಲ್ಲ ವರ್ಗಗಳಿಗೆ ಸೌಲಭ್ಯ

ಈ ಬಾರಿಯ ಬಜೆಟ್ ಎಲ್ಲ ವರ್ಗಗಳನ್ನು ಒಳಗೊಂಡಿದ್ದು, ಎಲ್ಲರ ಅಭಿವೃದ್ಧಿಗೆ ಪೂರಕವಾಗಿದೆ. ಹಣಕಾಸು ಸಚಿವರು ಸೂಟ್‌ ಕೇಸ್‌ ಬಿಟ್ಟು ದೇಸಿ ಸಂಪ್ರದಾಯ ಪಾಲನೆ ತಂದಿರುವುದು ಖುಷಿ ತಂದಿದೆ

–ಶೋಭಾ, ಕೊಳ್ಳೇಗಾಲ

**

ಸ್ತ್ರೀ ಸಬಲೀಕರಣಕ್ಕೆ ಒತ್ತು

ಮಹಿಳೆಯರ ಸಬಲೀಕರಣಕ್ಕೆ ಈ ಬಾರಿ ಹೆಚ್ಚು ಒತ್ತು ನೀಡಿಲ್ಲ. ‘ನಾರಿತುನಾರಾಯಣಿ’ ಯೋಜನೆ ಮೂಲಕ ಗ್ರಾಮೀಣ ಮಹಿಳೆಯರ ಕೃಷಿ ಚಟುವಟಿಕೆಗೆ ಒತ್ತು ನೀಡಿದ್ದಾರೆ. ಆದರೆ, ಇದನ್ನು ಹೇಗೆ ವಿಸ್ತರಿಸಲಾಗುತ್ತದೆ ಎಂಬ ಬಗ್ಗೆ ಬಜೆಟ್‌ನಲ್ಲಿ ತಿಳಿಸಿಲ್ಲ. ಚಿನ್ನ ಮತ್ತಿತರ ಪ್ರಸಾಧನ ಸಾಮಗ್ರಿಗಳ ಬೆಲೆ ಏರಿಸುವ ಮೂಲಕ ಭಗಿನಿಯರುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸಲಾಗಿದೆ. ದುಡಿಯುವ ವರ್ಗದ ವನಿತೆಯರ ಕಲ್ಯಾಣ, ವಿಮೆ, ಆರೋಗ್ಯ ಮತ್ತಿತರ ಸೇವಾ ಕ್ಷೇತ್ರಗಳಲ್ಲಿ ಸ್ತ್ರೀಯರ ಭಾಗವಹಿಸುವಿಕೆಗೆ ಒತ್ತು ನೀಡಿಲ್ಲ.

–ಬಿ.ಜ್ಯೋತಿ,ಯಳಂದೂರು

**

ದೂರದರ್ಶಿತ್ವದ ಬಜೆಟ್

ನಿರುದ್ಯೋಗ, ಹಣದುಬ್ಬರ ನಿಯಂತ್ರಣ ಹಾಗೂ ಜನರ ಗುಣಮಟ್ಟ ಸುಧಾರಣೆಗೆ ಅಲ್ಪ ಮನ್ನಣೆ ನೀಡಲಾಗಿದೆ. ಕಳೆದ ವರ್ಷದ ಬಜೆಟ್‌ನ ಕೆಲವು ಅಂಶಗಳನ್ನು ಮುಂದುವರಿಸಲಾಗಿದೆ ಸ್ಮಾರ್ಟ್ ಮತ್ತು ಸ್ಟ್ಯಾಂಡ್ ಅಪ್‌ ಯೋಜನೆಗಳ ಮೂಲಕ ಉದ್ಯಮಗಳ ಸ್ಥಾಪನೆಗೂ ಮುಂದಾಗಿದೆ. ರೈಲ್ವೆಮತ್ತು ಸೋಲಾರ್ ಬಳಕೆಗೆ ಒತ್ತು ನೀಡುವ ಮೂಲಕ ಮಲೀನಮುಕ್ತ ಜೀವನ ಕಲ್ಪಿಸಲು ಒತ್ತು ನೀಡಿದೆ. ಉನ್ನತ ಶಿಕ್ಷಣ ಕಲ್ಪಿಸುವ ಮೂಲಕ ಕೌಶಲ ಅಭಿವೃದ್ಧಿಗೆ ಒತ್ತು ನೀಡಿದೆ. ಇದೊಂದು ಆಶಾದಾಯಕ ಬಜೆಟ್.

–ನಾಗರಾಜು,ಹೊನ್ನೂರು

**

ಜನಪ್ರಿಯ ಬಜೆಟ್‌

‘ಐಟಿ ಸಲ್ಲಿಸುವ ತೆರೆಗೆದಾರರ ಗೊಂದಲ ನಿವಾರಣೆಯಾಗಿದೆ. ಪ್ಯಾನ್‌ಕಾರ್ಡ್ ಬದಲು ಆಧಾರ್‌ಕಾರ್ಡ್ ಬಳಕೆ ತಂದಿರುವುದು ಸರಿಯಾಗಿದೆ. ‘ಪ್ರಧಾನ್‌ ಮಂತ್ರಿ ಕರಮ್‌ ಯೋಗಿ ಮನ್‌ಧನ್’ಯೋಜನೆಯಿಂದ ಚಿಲ್ಲರೆ ವ್ಯಾಪಾರಿ ಮತ್ತು ಅಂಗಡಿ ಮಾಲೀಕರಿಗೆ ವರದಾನ. ಸುಲಭ ಉದ್ದಿಮೆ ಮತ್ತು ಸುಲಭ ಜೀವನವನ್ನು ಕೃಷಿಕರಿಗೂ ನೀಡಿ ಪ್ರೋತ್ಸಾಹಿಸಿದೆ. ಸುಸ್ಥಿರ ಅಭಿವೃದ್ಧಿ ಮತ್ತು ‘ಎಲ್ಲರಿಗೂ ಮನೆ’ ಯೋಜನೆಯೂ ಬಜೆಟ್‌ನ ಜನಪ್ರಿಯತೆಗೆ ಸಾಕ್ಷಿಯಾಗಿದೆ’

–ರಾಜು,ಕೃಷ್ಣಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.