ಚಾಮರಾಜನಗರ: ‘ನಗರದಲ್ಲಿ ಸಾವಿರಕ್ಕೂ ಹೆಚ್ಚು ಬಡವರ ಮನೆಗಳು ಕತ್ತಲೆಯಲ್ಲಿವೆ. ‘ಸೌಭಾಗ್ಯ’ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ನಾಗರಿಕರೊಬ್ಬರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ಹಿರಿಯ ಅಧಿಕಾರಿಗಳನ್ನು ಮಂಗಳವಾರ ಒತ್ತಾಯಿಸಿದರು.
ನಗರದ ಸೆಸ್ಕ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಚೆನ್ನೀಪುರದ ಮೋಳೆಯ ಚಿಕ್ಕಅಂಕಶೆಟ್ಟಿ ಅವರು, ‘ನಗರದಲ್ಲಿ ವಾಸವಿರುವ ಬಡವರ ಮನೆಯಲ್ಲಿ ವಿದ್ಯುತ್ ಸೌಲಭ್ಯ ಇಲ್ಲದೆ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಕಷ್ಟವಾಗುತ್ತಿದೆ. ಮೈಸೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಸೌಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ನಮ್ಮಲ್ಲಿ ಏಳು ತಿಂಗಳ ಹಿಂದೆಯೇ ಸಾವಿರಕ್ಕೂ ಹೆಚ್ಚು ಮಂದಿ ಈ ಯೋಜನೆಯ ಅಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿ ಅದನ್ನು ಜಾರಿಗೆ ತರಬೇಕು’ ಎಂದು ಮನವಿ ಮಾಡಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸೆಸ್ಕ್ ಸೂಪರಿಂಟೆಂಡೆಂಟ್ ಎಂಜಿನಿಯರ್ ಉಮೇಶ್ ಬಿ.ಎಸ್ ಅವರು, ‘ಇದು ಕೇಂದ್ರ ಸರ್ಕಾರದ ಯೋಜನೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಯೋಜನೆಯ ಫಲಾನುಭವಿಗಳ ಹೆಸರುಗಳನ್ನು ಸಂಗ್ರಹಿಸಿದ್ದೇವೆ. ನಮಗೆ ಇನ್ನೂ ಸರ್ಕಾರದಿಂದ ನಿರ್ದೇಶನ ಬಂದಿಲ್ಲ. ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯುತ್ತೇವೆ’ ಎಂದರು.
ಸೆಸ್ಕ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಪೂರ್ಣಚಂದ್ರ ತೇಜಸ್ವಿ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಈ ಯೋಜನೆಗಾಗಿ 6,500 ಅರ್ಜಿಗಳು ಬಂದಿವೆ. ಚಾಮರಾಜನಗರದಲ್ಲಿ 1,500 ಅರ್ಜಿಗಳು ಬಂದಿವೆ. ಈ ಯೋಜನೆ ಪಟ್ಟಣ/ನಗರ ಪ್ರದೇಶಕ್ಕೆ ಅನ್ವಯವಾಗುವಂತಹದ್ದು. ರಾಜ್ಯದಲ್ಲಿ ಮಡಿಕೇರಿಯಲ್ಲಿ ಅನುಷ್ಠಾನಗೊಂಡಿದೆ. ಇಲ್ಲಿ ಇನ್ನೂ ಯೋಜನೆ ಜಾರಿಗೆ ಬಂದಿಲ್ಲ. ಸೂಚನೆ ಬಂದ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ. ಯೋಜನೆಯಿಂದ ಯಾರನ್ನೂ ಕೈಬಿಡುವುದಿಲ್ಲ’ ಎಂದು ಭರವಸೆ ನೀಡಿದರು.
ಉಮೇಶ್ ಅವರು ಮಾತನಾಡಿ, ‘ಸರ್ಕಾರದ ಯೋಜನೆಗಾಗಿ ಕಾಯಬೇಡಿ, ನೀವು ಮನೆಗಳಲ್ಲಿ ವಯರಿಂಗ್ ಮಾಡಿಕೊಳ್ಳಿ. ದಾಖಲೆಗಳು ನೀಡಿ ಹಾಗೂ ಠೇವಣಿಯನ್ನು ಕಟ್ಟಿದ 10ರಿಂದ 15 ದಿನಗಳಲ್ಲಿ ವಿದ್ಯುತ್ ಸಂಪರ್ಕ ನೀಡುತ್ತೇವೆ’ ಎಂದರು.
‘ಅವರಲ್ಲಿ ಸೂಕ್ತ ದಾಖಲೆಗಳಿಲ್ಲ, ನಗರಸಭೆಯಿಂದ ನಿರಾಕ್ಷೇಪಣಾ ಪತ್ರವನ್ನು ತರಲು ಅವರಿಂದ ಆಗುತ್ತಿಲ್ಲ’ ಎಂದು ಸೆಸ್ಕ್ ಎಂಜಿನಿಯರ್‌ಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು.
ಆರ್.ಆರ್. ನಂಬರ್ ಕೊಡಿ: ಚಾಮರಾಜನಗರದ ರಾಜು ಎಂಬುವವರು ಮಾತನಾಡಿ, ‘ಹಲವು ಕಡೆಗಳಲ್ಲಿ ಗ್ರಾಹಕರ ಕೊಳವೆ ಬಾವಿಗಳಿಗೆ ಸಂಪರ್ಕ ಕಲ್ಪಿಸಿದ ವಿದ್ಯುತ್‌ಗೆ ಆರ್.ಆರ್. ನಂಬರ್ ಕೊಟ್ಟಿಲ್ಲ. ಸೆಸ್ಕ್ ಅಧಿಕಾರಿಗಳು ಈಗ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಇದರಿಂದ ಅವರ ಕೃಷಿಗೆ ತೊಂದರೆಯಾಗುತ್ತಿದೆ’ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೂರ್ಣಚಂದ್ರ ತೇಜಸ್ವಿ ಅವರು, ‘ಅಕ್ರಮ ವಿದ್ಯುತ್ ಸಂಪರ್ಕಗಳಿಂದಾಗಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ವಿದ್ಯುತ್ ಪರಿವರ್ತಕಗಳು ಹಾಳಾಗುತ್ತಿವೆ. ಇದರಿಂದಾಗಿ ಅರ್ಹ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಆ ಕಾರಣದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಅವರು ದುಡ್ಡು ಕಟ್ಟಿ ಆರ್ ಆರ್ ನಂಬರ್ ಪಡೆಯಲಿ’ ಎಂದು ಹೇಳಿದರು.
ಮೈಸೂರು ಸೆಸ್ಕ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ತಾರಾ ಸೇರಿದಂತೆ ತಾಲ್ಲೂಕಿನ ವಿವಿಧ ವಿಭಾಗಗಳ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಇದ್ದರು.
‘ಇನ್ನಷ್ಟು ಪ್ರಚಾರ ಕೊಡಿ’
ಜನಸಂಪರ್ಕ ಸಭೆಗೆ ಕೇವಲ ಮೂವರು ನಾಗರಿಕರು ಮಾತ್ರ ಹಾಜರಾಗಿದ್ದರು. ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅರ್ಧ ಗಂಟೆಯಲ್ಲಿ ಸಭೆ ಮುಗಿಯಿತು.
ಅಧಿಕಾರಿಗಳ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿದ ಮಲ್ಲಯ್ಯನಪುರದ ಪ್ರಸಾದ್ ಅವರು, ‘ಜನಸಂಪರ್ಕ ಸಭೆ ನಡೆಯುತ್ತಿರುವ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ನಗರದವರಿಗೆ ಮತ್ತು ಮಾಧ್ಯಮದವರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಇದಕ್ಕೆ ಹೆಚ್ಚಿನ ಪ್ರಚಾರ ಕೊಡಬೇಕು. ಆಗ ಹೆಚ್ಚು ಜನರು ಇಲ್ಲಿಗೆ ಬಂದು, ತಮ್ಮ ಕುಂದುಕೊರತೆಗಳನ್ನು ಹೇಳಲು ಸಾಧ್ಯವಾಗುತ್ತದೆ’ ಎಂದರು.
ಪೂರಕವಾಗಿ ಸ್ಪಂದಿಸಿದ ಉಮೇಶ್ ಅವರು, ‘ಮುಂದಿನ ದಿನಗಳಲ್ಲಿ ಹೆಚ್ಚು ಪ್ರಚಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.
‘ಎರಡು ವಾರಗಳಲ್ಲಿ ಕಾಮಗಾರಿ ಆರಂಭ’
ಚಾಮರಾಜನಗರ ತಾಲ್ಲೂಕಿನ ಬೇಡಗುಳಿ ವ್ಯಾಪ್ತಿಯಲ್ಲಿ ಬರುವ ಕಾಡಿಗೆರೆ, ಬಿಸಿಲಗೆರೆ, ಮೊಣಕೈಪೋಡು ಮತ್ತು ರಾಮಯ್ಯನಪೋಡುಗಳಲ್ಲಿ ನನೆಗುದಿಗೆ ಬಿದ್ದಿರುವ ದೀನ ದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯ (ಡಿಡಿಯುಜಿಜೆವೈ) ಅಡಿಯಲ್ಲಿ ಮನೆಗಳಿಗೆ ಸೌರ ವಿದ್ಯುತ್ ಕಲ್ಪಿಸುವ ಯೋಜನೆಯ ಕಾಮಗಾರಿ ಎರಡು ವಾರಗಳಲ್ಲಿ ಆರಂಭವಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ಹೇಳಿದರು.
ಜನಸಂಪರ್ಕ ಸಭೆಯಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಮೇಶ್, ‘ದೀಪಾ ಸೋಲಾರ್ ಸಿಸ್ಟಮ್ಸ್ ಎಂಬ ಸಂಸ್ಥೆ ಟೆಂಡರ್ ವಹಿಸಿಕೊಂಡಿದೆ. ಜರ್ಮನಿಯಿಂದ ಬ್ಯಾಟರಿಗಳು ಬರಬೇಕಾಗಿದೆ. ಅದಕ್ಕಾಗಿ ಸ್ವಲ್ಪ ವಿಳಂಬವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.