ಚಾಮರಾಜನಗರ: ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹುಲಿ ಸೆರೆ ಹಿಡಿಯಲು ಇರಿಸಿದ್ದ ಬೋನಿನಲ್ಲಿ ಕೂಡಿ ಹಾಕಿ ದಿಗ್ಬಂಧನ ಹಾಕಿದ ಸಂಬಂಧ ಬೊಮ್ಮಲಾಪುರ ಗ್ರಾಮದ ನಿವಾಸಿಗಳಾದ ರಘು, ಪ್ರಸಾದ್, ದೀಪು, ಗಂಗಾಧರ ಸ್ವಾಮಿ ಹಾಗೂ ರೇವಣ್ಣ ಎಂಬುವರ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿದೆ.
ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಡಿರುವ ದೂರಿನಂತೆ ಗುಂಡ್ಲುಪೇಟೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದೂರಿನಲ್ಲಿ ಏನಿದೆ:
ಗುಂಡ್ಲುಪೇಟೆ ಬಫರ್ ವಲಯ ವ್ಯಾಪ್ತಿಗೆ ಬರುವ ಬೊಮ್ಮಲಾಪುರ ಗ್ರಾಮದಲ್ಲಿ ಕಾಡುಪ್ರಾಣಿಗಳ ಕೂಂಬಿಂಗ್ ಕಾರ್ಯಾಚರಣೆಗೆ ವಿಶೇಷ ಹುಲಿ ಸಂರಕ್ಷಣಾ ದಳದ ಪ್ಲಟೂನ್–1ರ ಸಿಬ್ಬಂದಿಗಳಾದ ಉಪ ವಲಯ ಅರಣ್ಯಾಧಿಕಾರಿಗಳಾದ ಜ್ಞಾನಶೇಖರ್, ಕಾರ್ತಿಕ್ ಯಾದವ್, ವಿನಯ್, ಗಸ್ತು ಪಾಲಕರಾದ ಬಸವೇಗೌಡ ಹಾಗೂ ಸುಚಿತ್ರಾ ಇಲಾಖೆಯ ವಾಹನದಲ್ಲಿ ಹೋಗುವಾಗ ಅವರನ್ನು ಅಡ್ಡಗಟ್ಟಿದ ಸ್ಥಳೀಯರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ವಾಹನದ ಚಕ್ರಗಳ ಗಾಳಿ ತೆಗೆದು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಲವಂತವಾಗಿ ಕೆಳಗಿಳಿಸಿ ಪ್ರಾಣಿಗಳ ಸೆರೆಗೆ ಇರಿಸಲಾಗಿದ್ದ ಬೋನಿನೊಳಗೆ ಕೂಡಿ ಹಾಕಿದ್ದಾರೆ. ಬಫರ್ ವಲಯದ ಸಿಬ್ಬಂದಿ ಸಂತೋಷ್, ಪ್ರವೀಣ್, ಸುಬ್ರಹ್ಮಣ್ಯ, ಮಣಿಕಂಠ, ಶಿವಣ್ಣ, ರಾಜಪ್ಪ, ಬಸವರಾಜು, ರಾಘವೇಂದ್ರ ಅವರನ್ನೂ ಬೋನಿನ ಒಳಗೆ ಕೂಡಿಹಾಕಿ ಸಜೀವವಾಗಿ ಸುಟ್ಟು ಹಾಕುವ ಬೆದರಿಕೆ ಹಾಕಿದ್ದಾರೆ.
ಈ ಘಟನೆಯಿಂದ ಇಲಾಖೆಯ ಸಿಬ್ಬಂದಿಯ ಮನೋಸ್ಥೈರ್ಯ ಕುಗ್ಗಿದ್ದು ಜೀವ ಭಯದಿಂದ ಕರ್ತವ್ಯ ನಿರ್ವಹಿಸುವಂತಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.