
ಚಾಮರಾಜನಗರ: ಚುಮು– ಚುಮು ಚಳಿಯ ನಡುವೆ ಮಾರುಕಟ್ಟೆಯ ತುಂಬೆಲ್ಲ ಅವರೇಕಾಯಿ ಘಮಲು ಹರಡಿಕೊಂಡಿದೆ. ಚಳಿಗಾಲದ ವಿಶೇಷ ಖಾದ್ಯವಾದ ಅವರೇಕಾಯಿ ಖರೀದಿಸಲು ಗ್ರಾಹಕರು ಉತ್ಸಾಹ ತೋರುತ್ತಿದ್ದಾರೆ. ತರಕಾರಿ ಮಾರುಕಟ್ಟೆ ಮಾತ್ರವಲ್ಲದೆ, ತಳ್ಳುಗಾಡಿ ಹಾಗೂ ರಸ್ತೆ ಬದಿಗಳಲ್ಲೂ ಅವರೆಕಾಯಿ ಮಾರಾಟ ಭರ್ಜರಿಯಾಗಿ ಸಾಗಿದೆ.
ಸೂರ್ಯನ ಬಿಸಿಲು ನೆಲಕ್ಕೆ ತಾಗುವ ಮುನ್ನವೇ ರೈತರು ಹೊಲದಿಂದ ಅವರೇಕಾಯಿ ಬಿಡಿಸಿಕೊಂಡು ಮಾರುಕಟ್ಟೆಗೆ ಹಾಕುತ್ತಿದ್ದು ತಾಜಾ ಅವರೇಕಾಯಿ ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಅವರೆಯ ಘಮಲಿಗೆ ಗ್ರಾಹಕರು ಮನಸೋತಿದ್ದು ಇತರೆ ತರಕಾರಿಗಳಿಗೆ ಬೇಡಿಕೆ ಕುಸಿದಿದೆ ಎನ್ನುತ್ತಾರೆ ವ್ಯಾಪಾರಿಗಳು.
ದರ ಅಲ್ಪ ಏರಿಕೆ:
ಕಳೆದ ವರ್ಷ ಕೆ.ಜಿ ಅವರೇಕಾಯಿಗೆ ₹ 40 ರಿಂದ ₹ 50 ದರ ಇತ್ತು. ಈ ವರ್ಷ ತುಸು ಹೆಚ್ಚಾಗಿದ್ದು ಕೆ.ಜಿಗೆ 50 ರಿಂದ 60ರವರೆಗೆ ಮಾರಾಟವಾಗುತ್ತಿದೆ. ಗುಣಮಟ್ಟದ ಕಾಯಿಗಳು ಮಾರುಕಟ್ಟೆಗೆ ಬಂದಿವೆ ಎನ್ನುತ್ತಾರೆ ತರಕಾರಿ ಮಾರಾಟ ಮಾಡುವ ಲಕ್ಷ್ಮಮ್ಮ.
ಚಳಿಗಾಲದಲ್ಲಿ ಸಿಗುವ ಅವರೇಕಾಯಿಗೆ ಸಾಮಾನ್ಯವಾಗಿ ವಿಶೇಷ ಬೇಡಿಕೆ ಇರುತ್ತದೆ. ಸಾರ್ವಜನಿಕರು ತರಹೇವಾರಿ ಅವರೇಕಾಯಿ ಖಾದ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಉಪ್ಸಾರು, ಸಾರು, ಉಪ್ಪಿಟ್ಟು, ರೊಟ್ಟಿ, ಚಪಾತಿ ಜೊತೆಗೆ ಪಲ್ಯವಾಗಿಯೂ ಅವರೇಕಾಳು ಸ್ವಾದಿಷ್ಟ ರುಚಿ ನೀಡುತ್ತದೆ ಎನ್ನುತ್ತಾರೆ ಗೃಹಿಣಿ ಮಂಜುಳಾ.
ಚಳಿಗಾಲದಲ್ಲಿ ಸಿಗುವ ತಾಜಾ ಅವರೇಕಾಯಿಯ ಘಮಲು ಮೂಗಿಗೆ ಬಡಿದ ಕೂಡಲೇ ಖರೀದಿಸುವ ಮನಸ್ಸಾಗುತ್ತದೆ. ಕಾಯಿ ಬಿಡಿಸುವುದು, ಹುಳು ಬಾಧೆ ತುಸು ಕಿರಿಕಿರಿ ಎನಿಸಿದರೂ ಮನೆಯ ಮಂದಿಯೆಲ್ಲ ಇಷ್ಟಪಟ್ಟು ಸವಿಯುವುದರಿಂದ ವಾರಕ್ಕೆ ಕನಿಷ್ಠ ಮೂರು ಬಾರಿ ಅವರೇಕಾಯಿ ಖಾದ್ಯ ತಯಾರಿಸುತ್ತೇವೆ ಎನ್ನುತ್ತಾರೆ ಅವರು.
ಸಸ್ಯಹಾರಿ ಖಾದ್ಯಗಳ ತಯಾರಿಕೆ ಮಾತ್ರವಲ್ಲ; ಮಾಂಸಹಾರಕ್ಕೂ ಅವರೇಕಾಯಿ ಬಳಕೆ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಕೋಳಿ, ಕುರಿ ಮಾಂಸದ ಸಾರಿಗೆ ಅವರೇಕಾಯಿ ವಿಶೇಷ ರುಚಿ ನೀಡುತ್ತದೆ. ಸಂಜೆಯ ಕುರುಕಲು ತಿಂಡಿಯಾಗಿಯೂ ಬಳಕೆಯಾಗುತ್ತದೆ ಎನ್ನುತ್ತಾರೆ ಹೋಟೆಲ್ ಸಿಬ್ಬಂದಿ ರವಿರಾಜ್.
ಸೊನೆಯಾಡುವ ಅವರೇಕಾಯಿಗೆ ಹೆಚ್ಚು ಬೇಡಿಕೆಯಿದ್ದು ಕೆಲವರು ರೈತರ ಹೊಲಗಳಿಗೇ ತೆರಳಿ ಖರೀದಿ ಮಾಡುತ್ತಾರೆ. ಜನವರಿವರೆಗೂ ಅವರೇಕಾಯಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ ಎನ್ನುತ್ತಾರೆ ವ್ಯಾಪಾರಿ ವಿಶ್ವನಾಥ್.
ತೊಗರಿಕಾಯಿಗೂ ಬೇಡಿಕೆ:
ಅವರೇ ಜೊತೆಗೆ ತೊಗರಿಕಾಯಿಯೂ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು ಬೇಡಿಕೆ ಹೆಚ್ಚಾಗಿದೆ. ಕಾಳುಗಳ ಗಾತ್ರದ ಆಧಾರದ ಮೇಲೆ ಕೆ.ಜಿಗೆ 50 ರಿಂದ 60ಕ್ಕೆ ಮಾರಾಟವಾಗುತ್ತಿದೆ.
ತರಕಾರಿ ದರ ಸ್ಥಿರ:
ಬಹುತೇಕ ತರಕಾರಿಗಳ ದರ ಸ್ಥಿರವಾಗಿದೆ. ಟೊಮೆಟೊ ಕೆಜಿಗೆ 30, ಬೀನ್ಸ್, ಕ್ಯಾರೆಟ್, ಬೆಂಡೆಕಾಯಿ, ಆಲೂಗಡ್ಡೆ ತಲಾ ₹ 40 ದರ ಇದೆ. ಈರುಳ್ಳಿ ಗಾತ್ರದ ಆಧಾರದ ಮೇಲೆ ಕೆ.ಜಿಗೆ 20 ರಿಂದ 25 ದರ ಇದೆ. ಗುಣಮಟ್ಟದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ. ತೀರಾ ಸಣ್ಣಗಾತ್ರದ ಹಾಗೂ ಕಪ್ಪುಬಣ್ಣದ ಫಂಗಸ್ ತಾಗಿದ ಈರುಳ್ಳಿ ಹೆಚ್ಚಾಗಿದೆ. ದೊಡ್ಡಗಾತ್ರದ ಈರುಳ್ಳಿಯ ಒಳಪದರ ಕೊಳೆತು ಹೋಗಿರುತ್ತದೆ ಎಂದು ದೂರುತ್ತಾರೆ ಗ್ರಾಹಕರು.
ಇಳಿಯದ ತೆಂಗಿನಕಾಯಿ:
ಗಗನಕ್ಕೇರಿರುವ ತೆಂಗಿನ ಕಾಯಿ ದರ ಇಳಿಕೆಯಾಗಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 70ರವರೆಗೂ ಇದೆ. ಬಿಡಿಯಾಗಿ ಖರೀದಿಸಿದರೆ ಒಂದು ಕಾಯಿಗೆ ₹ 40 ರಿಂದ ₹ 50 ಇದೆ. ತೆಂಗಿನ ಕಾಯಿಗೆ ವಿಪರೀತ ಬೇಡಿಕೆ ಇರುವುದರಿಂದ ಸದ್ಯಕ್ಕೆ ಬೆಲೆ ಇಳಿಕೆಯಾಗುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ ವ್ಯಾಪಾರಿ ಶ್ರೀನಿವಾಸ್.0
ಹಣ್ಣಿನ ದರ;
ಗಾತ್ರ ಹಾಗೂ ಗುಣಮಟ್ಟದ ಆಧಾರದ ಮೇಲೆ ಸೇಬು ಹಾಗೂ ದಾಳಿಂಬೆ ಕೆ.ಜಿಗೆ ತಲಾ 100 ರಿಂದ 160, ಸೀಬೆ 80 ರಿಂದ 100, ಪಪ್ಪಾಯ 25, ಸಪೋಟ 60, ಸೀತಾಫಲ 100, ಕಿತ್ತಳೆ 50, ಮೋಸಂಬಿ 60, ಏಲಕ್ಕಿ ಬಾಳೆ 60, ಪಚ್ಚಬಾಳೆ 30 ದರ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.