ಯಳಂದೂರು: ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣ ಸ್ಥಳ ಪರಿಶೀಲನೆ ಸೇರಿದಂತೆ, ಅಸ್ಪತ್ರೆ, ಹಾಸ್ಟೆಲ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕೈಗೊಂಡಿರುವ ಬಗ್ಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಭಾನುವಾರ ಅಧಿಕಾರಿಗಳಿಂದ ಮಾಹಿತಿ ಪಡೆದರು.
ತಾಲ್ಲೂಕಿನ ಹೊನ್ನೂರು ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ವಹಿಸುವ ವಸತಿ ನಿಲಯಕ್ಕೆ ಭೇಟಿ ನೀಡಿ ಇಲ್ಲಿನ ನೈರ್ಮಲ್ಯ, ಸ್ವಚ್ಛತೆ ಪರಿಶೀಲಿಸಿದರು. ಮಕ್ಕಳ ಜೊತೆ ಸಂವಾದ ನಡೆಸಿದರು.
ಶಿಲ್ಪಾನಾಗ್ ಮಾತನಾಡಿ, ‘ವಸತಿ ನಿಲಯಗಳಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಸವಲತ್ತು ಒದಗಿಸಬೇಕು. ಡೆಂಗಿ ಸಾಂಕ್ರಾಮಿಕದ ವಿರುದ್ಧ.ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳ ವಿಶ್ರಾಂತಿ ಕೊಠಡಿಯಲ್ಲಿ ಸೊಳ್ಳೆ ನಿಯಂತ್ರಣ, ಬಿಸಿನೀರು ವ್ಯವಸ್ಥೆ, ಗುಣಮಟ್ಟದ ಆಹಾರ ವಿತರಿಸಿ ಆರೋಗ್ಯದ ಮೇಲೆ ನಿಗಾ ಇಡಬೇಕು. ಪಟ್ಟಣದಲ್ಲಿ ಕ್ರೀಡಾಂಗಣಕ್ಕೆ 2 ಎಕರೆ 8 ಗುಂಟೆ ಸ್ಥಳ ಇದೆ. ಈ ಬಗ್ಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.
ವಸತಿ ನಿಲಯದ ಮಕ್ಕಳ ಜೊತೆ ಸಂವಾದ ನಡೆಸಿದ ಜಿಲ್ಲಾಧಿಕಾರಿ, ಮಕ್ಕಳ ಕನ್ನಡ ಮತ್ತು ಇಂಗ್ಲಿಷ್ ಕಾಗುಣಿತ ಮತ್ತು ಕೈಬರಹಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಚಿಣ್ಣರ ಕಲಿಕೆ, ಆಸಕ್ತಿಗಳ ಬಗ್ಗೆ ಚರ್ಚಿಸಿದರು. ಹಾಸ್ಟೆಲ್‌ನಲ್ಲಿ ಮಕ್ಕಳಿಗೆ ಹೊಸ ಹಾಸಿಗೆ ನೀಡಲು ಕ್ರಮ ವಹಿಸುವಂತೆ ಎಚ್ಚರಿಸಿದರು.
ಶಾಸಕ ಕೃಷ್ಣಮೂರ್ತಿ ಮಾತನಾಡಿ, ‘ಪಟ್ಟಣದ ಕಾಲೇಜು ಮೈದಾನದಲ್ಲಿ ಕ್ರೀಡಾಂಗಣ ನಿರ್ಮಿಸಲು ಹೆಚ್ಚಿನ ಸ್ಥಳಾವಕಾಶ ಅಗತ್ಯವಿದೆ. ಕಾಲೇಜಿಗೆ ಹೊಂದಿಕೊಂಡ ನಿವೇಶನ ಸಿಕ್ಕರೆ ವಿಸ್ತಾರವಾದ ಗುಣಮಟ್ಟದ ಕ್ರೀಡಾಂಗಣ ನಿರ್ಮಿಸಬಹುದು. ಈ ದಿಸೆಯಲ್ಲಿ ಪರಿಶೀಲಿಸಿ ವರದಿ ನೀಡುವಂತೆ’ ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ. ತಹಶೀಲ್ದಾರ್ ಆರ್.ಜಯಪ್ರಕಾಶ್, ಕಂದಾಯ ನಿರೀಕ್ಷಕ ಎಂ.ಎಸ್.ಯದುಗಿರಿ ಹಾಗೂ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.