ADVERTISEMENT

ಚಾಮರಾಜನಗರ: ಏಪ್ರಿಲ್ 20ಕ್ಕೆ ಸಂಭವಿಸಿದ್ದ ಸಾವಿನ ಪ್ರಕರಣಕ್ಕೆ‌ ತಿರುವು

ಆಕಸ್ಮಿಕ ಸಾವಲ್ಲ, ಕೊಲೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 13:44 IST
Last Updated 14 ಜೂನ್ 2020, 13:44 IST
ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಆನಂದಕುಮಾರ್ ಅವರು ಮಾತನಾಡಿದರು. ಸಬ್ ಇನ್‌ಸ್ಪೆಕ್ಟರ್‌‌ ತಾಜುದ್ದೀನ್, ಇನ್‌ಸ್ಪೆಕ್ಟರ್‌‌ ಪುಟ್ಟಸ್ವಾಮಿ ಇದ್ದಾರೆ
ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಆನಂದಕುಮಾರ್ ಅವರು ಮಾತನಾಡಿದರು. ಸಬ್ ಇನ್‌ಸ್ಪೆಕ್ಟರ್‌‌ ತಾಜುದ್ದೀನ್, ಇನ್‌ಸ್ಪೆಕ್ಟರ್‌‌ ಪುಟ್ಟಸ್ವಾಮಿ ಇದ್ದಾರೆ   

ಚಾಮರಾಜನಗರ: ತಾಲ್ಲೂಕಿನ ನಾಗವಳ್ಳಿ ಗ್ರಾಮದಲ್ಲಿ ಒಂದೂವರೆ ತಿಂಗಳ ಹಿಂದೆ ಮಹಿಳೆಯೊಬ್ಬರು ಮೃತಪಟ್ಟ ಪ‍್ರಕರಣಕ್ಕೆ ತಿರುವು ಸಿಕ್ಕಿದ್ದು ಅದು ಕೊಲೆ ಎಂಬುದು ದೃಢಪಟ್ಟಿದೆ.

ಗ್ರಾಮದ ಅಬ್ದುಲ್‌ ಹಬೀಬ್‌ ಅವರ ಪತ್ನಿ ಹಾಜಿರಾ ಬಾನು (36) ಎಂಬುವವರು ಏಪ್ರಿಲ್‌ 20ರಂದು ಮೃತಪಟ್ಟಿದ್ದರು. ಜಮೀನಿನಲ್ಲಿರುವ ಕೆರೆಗೆ ಕಾಲು ಜಾರಿ ಬಿದ್ದು ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಬಿಂಬಿಸಿದ್ದರು. ಪೊಲೀಸರ ಗಮನಕ್ಕೂ ತಾರದೆ, ಅಂತ್ಯ ಸಂಸ್ಕಾರವನ್ನೂ ನೆರವೇರಿಸಿದ್ದರು. ಮಹಿಳೆಯ ಮಕ್ಕಳು ತಮ್ಮ ಅಜ್ಜನಿಗೆ (ತಾಯಿಯ ತಂದೆ) ನೀಡಿದ ಮಾಹಿತಿಯಿಂದ ಮಹಿಳೆಯದ್ದು ಆಕಸ್ಮಿಕ ಸಾವಲ್ಲ, ಕೊಲೆ ಎಂಬುದು ಬೆಳಕಿಗೆ ಬಂದಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಎಚ್.ಡಿ.ಆನಂದಕುಮಾರ್ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರಗಳನ್ನು ನೀಡಿದರು.

ADVERTISEMENT

‘ನಗರ ಠಾಣಾ ವ್ಯಾಪ್ತಿಯ ನಸ್ರುಲ್ಲಾ ಖಾನ್‌ ಎಂಬುವವರ ಮಗಳಾದ ಹಾಜಿರಾ ಬಾನು ಅವರನ್ನು ನಾಗವಳ್ಳಿಯ ಅಬ್ದುಲ್‌ ಹಬೀಬ್‌ ಅವರಿಗೆ ಮದುವೆ ಮಾಡಲಾಗಿತ್ತು. ದಂಪತಿಗೆ ನಾಲ್ಕು ಮಕ್ಕಳು ಇದ್ದಾರೆ. ಹಾಜಿರಾ ಮೇಲೆ ಪತಿಯ ಕುಟುಂಬದವರು ಯಾವಾಗಲೂ ಅನುಮಾನ ಪಡುತ್ತಿದ್ದರು. ಕುಟುಂಬದವರಿಗೆ ಮಾಟ ಮಾಡಿಸುತ್ತಾಳೆ ಎಂದು ದೂರುತ್ತಲೇ ಇದ್ದರು. ಅವರ ತೋಟದಲ್ಲಿದ್ದ ದೊಡ್ಡ ಬಾವಿಯಲ್ಲಿ ಏಪ್ರಿಲ್‌ 20ರಂದು ಹಾಜಿರಾ ಅವರ ಮೃತ ಶರೀರ ಪತ್ತೆಯಾಗಿತ್ತು. ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾಳೆ ಎಂಬಂತೆ ಕುಟುಂಬದವರು ಬಿಂಬಿಸಿದ್ದರು. ಮೃತದೇಹದ ದಫನವನ್ನೂ ಮಾಡಿದ್ದರು’ ಎಂದು ಅವರು ಹೇಳಿದರು.

‘ಇತ್ತೀಚೆಗೆ ಅಜ್ಜನ ಮನೆಗೆ ಬಂದಿದ್ದ ಹಾಜಿರಾ ಅವರ ಮಕ್ಕಳು, ಮನೆಯಲ್ಲಿ ನಡೆದ ಘಟನೆಯನ್ನು ವಿವರಿಸಿದರು. ಹೊತ್ತುಕೊಂಡು ಹೋಗಿ ಬಾವಿಗೆ ಎಸೆಯಲಾಗಿದೆ ಎಂದು ತಿಳಿಸಿದ್ದರು. ನಂತರ ನಸ್ರುಲ್ಲಾ ಖಾನ್‌ ಅವರು ಠಾಣೆಯಲ್ಲಿ ದೂರು ನೀಡಿದರು.ಪ್ರಕರಣ ದಾಖಲಿಸಿಕೊಂಡ ನಂತರ ಸಿಬ್ಬಂದಿ ಕೂಲಂಕಷವಾಗಿ ತನಿಖೆ ನಡೆಸಿದರು. ಹಾಜಿರಾ ಬಾನು ಹಾಗೂ ಪತಿಯ ಮನೆಯವರೊಂದಿಗೆ ಜಗಳು ನಡೆಯುತ್ತಿದ್ದವು ಎಂಬ ಸಂಗತಿ ಬಯಲಾಯಿತು.ಇದು ಆಕಸ್ಮಿಕ ಸಾವಲ್ಲ, ಕೊಲೆ ಎಂಬುದು ದೃಢಪಟ್ಟಿತು. ನಂತರ ದಫನ ಮಾಡಿದ್ದ ಶವವನ್ನು ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವರದಿ ಇನ್ನೂ ಬರಬೇಕಷ್ಟೆ’ ಎಂದು ಎಸ್‌ಪಿ ಎಚ್‌.ಡಿ.ಆನಂದಕುಮಾರ್‌ ಅವರು ಮಾಹಿತಿ ನೀಡಿದರು.

‘ಎರಡು ದಿನಗಳ ಹಿಂದೆ ಮಹಿಳೆಯ ಪತಿ ಅಬ್ದುಲ್‌ ಹಬೀಬ್‌ ಅವರನ್ನು ಬಂಧಿಸಲಾಗಿದೆ. ಅವರ ಕುಟುಂಬದ ಇನ್ನೂ ಆರೇಳು ಮಂದಿಯನ್ನು ಬಂಧಿಸಬೇಕಾಗಿದ್ದು, ಪರಾರಿಯಾಗಿದ್ದಾರೆ. ಅವರನ್ನು ಶೀಘ್ರವಾಗಿ ಪತ್ತೆಹಚ್ಚಲಾಗುವುದು’ ಎಂದು ಅವರು ಹೇಳಿದರು.

ವಾಸ್ತವ ಬಿಚ್ಚಿಟ್ಟ ಮಕ್ಕಳು

‘ಹಾಜಿರಾ ಅವರಿಗೆ ಇಬ್ಬರು ಗಂಡು (ಎಂಟು ವರ್ಷ, ನಾಲ್ಕು ವರ್ಷ) ಮತ್ತು ಇಬ್ಬರು ಹೆಣ್ಣು (ಆರು ವರ್ಷ, ಮೂರು ವರ್ಷ) ಮಕ್ಕಳಿದ್ದಾರೆ. ಮೇ ತಿಂಗಳ ಅಂತ್ಯದಲ್ಲಿ ಚಾಮರಾಜನಗರದಲ್ಲಿರುವ ಅಜ್ಜ ನಸ್ರುಲ್ಲಾ ಖಾನ್‌ ಅವರ ಮನೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡುವಾಗ, ತಾಯಿ ಬಾವಿಗೆ ಬಿದ್ದಿಲ್ಲ. ಮನೆಯಲ್ಲೇ ಇದ್ದರು, ಕೊಠಡಿಯಲ್ಲಿ ತಲೆ ದಿಂಬನ್ನು ಅವರ ಮುಖಕ್ಕೆ ಒತ್ತಿ ಹಿಡಿದಿದ್ದರು ಎಂದೆಲ್ಲಾ ಹೇಳಿದ್ದರು. ಇದರಿಂದ ಅನುಮಾನಗೊಂಡ ನಸ್ರುಲ್ಲಾ ಖಾನ್‌ ಅವರು ಜೂನ್‌ 2ರಂದು ರಾಮಸಮುದ್ರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದರ ಆಧಾರದಲ್ಲಿ ತನಿಖೆ ಆರಂಭಿಸಲಾಗಿತ್ತು’ ಎಂದು ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕರೆ ರೆಕಾರ್ಡ್: ಕುಟುಂಬ ಸದಸ್ಯರು ಮೊಬೈಲ್‌ನಲ್ಲಿ ಮಾಡಿದ್ದ ಕರೆಗಳೆಲ್ಲೇ ರೆಕಾರ್ಡ್‌ ಆಗಿದ್ದು, ಇವೆಲ್ಲವೂ ಕೊಲೆ ಎಂಬುದನ್ನು ದೃಢಪಡಿಸುತ್ತಿದೆ. ಎಂಟು ಆರೋಪಿಗಳು ತಲೆಮರೆಸಿಕೊಂಡಿದ್ದು ಕೆಲವೇ ದಿನಗಳಲ್ಲಿ ಎಲ್ಲರನ್ನೂ ಬಂಧಿಸಲಾಗುವುದು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.