ADVERTISEMENT

ಚಾಮರಾಜನಗರ: ಹಾಸ್ಟೆಲ್‌, ಅಂಗನವಾಡಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ

ಸರ್ಕಾರಿ ಆಸ್ಪತ್ರೆ, ಕಟ್ಟಡಗಳ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 8:33 IST
Last Updated 27 ಫೆಬ್ರುವರಿ 2026, 8:33 IST
ಚಾಮರಾಜನಗರ ತಾಲ್ಲೂಕಿನ ಬಂದಿಗೌಡನಹಳ್ಳಿಯಲ್ಲಿ ಮೀನುಗಾರಿಕೆ ಇಲಾಖೆ ಸಹಾಯಧನದಿಂದ ನಿರ್ಮಾಣ ಮಾಡಿರುವ ಸಿಹಿ ನೀರಿನ ಬಯೋಫ್ಲಾಕ್ ಮೀನು ಸಾಕಾಣಿಕೆ ಕೊಳವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿನೋತ್ ಪ್ರಿಯಾ ವೀಕ್ಷಣೆ ಮಾಡಿ ಮಾಹಿತಿ ಪಡೆದರು
ಚಾಮರಾಜನಗರ ತಾಲ್ಲೂಕಿನ ಬಂದಿಗೌಡನಹಳ್ಳಿಯಲ್ಲಿ ಮೀನುಗಾರಿಕೆ ಇಲಾಖೆ ಸಹಾಯಧನದಿಂದ ನಿರ್ಮಾಣ ಮಾಡಿರುವ ಸಿಹಿ ನೀರಿನ ಬಯೋಫ್ಲಾಕ್ ಮೀನು ಸಾಕಾಣಿಕೆ ಕೊಳವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿನೋತ್ ಪ್ರಿಯಾ ವೀಕ್ಷಣೆ ಮಾಡಿ ಮಾಹಿತಿ ಪಡೆದರು   

ಚಾಮರಾಜನಗರ: ಯಳಂದೂರು, ಕೊಳ್ಳೇಗಾಲ, ಸಂತೆಮರಹಳ್ಳಿ ಹಾಗೂ ಚಾಮರಾಜನಗರಕ್ಕೆ ಗುರುವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿನೋತ್ ಪ್ರಿಯಾ ಸರ್ಕಾರಿ ಆಸ್ಪತ್ರೆ, ಶಾಲೆ, ಅಂಗನವಾಡಿ, ಹಾಸ್ಟೆಲ್‌ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಹಾಗೂ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಕೊಳ್ಳೇಗಾಲ ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿನೀಡಿ ವಿದ್ಯಾರ್ಥಿಗಳು ತಂಗುವ ಕೊಠಡಿ, ಶೌಚಾಲಯ, ಸ್ನಾನದ ಗೃಹ, ಅಡುಗೆ ಕೋಣೆ, ಊಟದ ಹಾಲ್‌ ವೀಕ್ಷಿಸಿ ಆಹಾರದ ಮೆನು ಚಾರ್ಟ್ ಪರಿಶೀಲಿಸಿದರು.

ನಂತರ ₹ 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿ ತ್ವರಿತ ಕಾಮಗಾರಿ ಪೂರ್ಣಗೊಳಿಸಿ ಏಪ್ರಿಲ್‌ನೊಳಗೆ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿದರು. ತಾಲ್ಲೂಕಿನ ಟಗರಪುರ ಗ್ರಾಮದ ಗ್ರಂಥಾಲಯ ಕಟ್ಟಡ ವೀಕ್ಷಿಸಿದರು.

ADVERTISEMENT

ಯಳಂದೂರು ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕಾಮಗಾರಿ ಪರಿಶೀಲಿಸಿ ಎಲ್ಲಾ ವಿಭಾಗಗಳು ಕಾರ್ಯ ನಿರ್ವಹಿಸುವಂತೆ ಕಾಮಗಾರಿ ಮಾಡಬೇಕು. ಒ.ಪಿ.ಡಿ ಹಾಗೂ ತುರ್ತು ವಿಭಾಗಗಳಿಗೆ ರೋಗಿಗಳು ಸರಾಗವಾಗಿ ಬರಲು ಅನುಕೂಲವಾಗುವಂತೆ ಸ್ಥಳಾವಕಾಶ ಬಿಡಬೇಕು. ಗುಣಮಟ್ಟದ ಕೆಲಸ ನಡೆಯಬೇಕು ಎಂದು ತಿಳಿಸಿದರು.

ಯಳಂದೂರು ಪಟ್ಟಣದ 1ನೇ ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಮಕ್ಕಳಿಗೆ ನೀಡಲಾಗುವ ಪೌಷ್ಠಿಕ ಆಹಾರ, ಆಟೋಪಕರಣಗಳನ್ನು ವೀಕ್ಷಿಸಿ ಆತ್ಮೀಕವಾಗಿ ಮಕ್ಕಳೊಂದಿಗೆ ಬೆರೆತರು. ಮಿಲೆಟ್ ಲಡ್ಡು ಪರಿಶೀಲಿಸಿ, ಮಕ್ಕಳ ವಯಸ್ಸಿನ ಮಾಹಿತಿ ಪಡೆದು ತೂಕ ಪರಿಶೀಲಿಸಿದರು. ಯಳಂದೂರು ಪಟ್ಟಣದ ಕೆ.ಪಿ.ಎಸ್ ಶಾಲೆಗೆ ಭೇಟಿ ನೀಡಿ ಹಾಜರಾತಿ, ಕಲಿಕಾ ವಿವರಗಳ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದರು.

ಸಂತೇಮರಹಳ್ಳಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಿ ವಾರ್ಡ್‌, ನಿರೀಕ್ಷಣಾ ಘಟಕ ಹಾಗೂ ಇತರ ವಿಭಾಗಗಳನ್ನು ಪರಿಶೀಲಿಸಿದರು. ಗ್ರಾಮ ಪಂಚಾಯಿತಿ ಅವರಣದಲ್ಲಿರುವ ಕೂಸಿನ ಮನೆಯಲ್ಲಿ ಮಕ್ಕಳಿಗೆ ತಯಾರಿಸಿದ್ದ ಆಹಾರದ ಗುಣಮಟ್ಟ ಪರಿಶೀಲಿಸಿದರು. ಸಮೀಪದ ಡಿಜಿಟಲ್ ಗ್ರಂಥಾಲಯ, ಪಶುಪಾಲನಾ ಆಸ್ಪತ್ರೆ ಕಟ್ಟಣ ಕಾಮಗಾರಿ ವೀಕ್ಷಿಸಿದರು.

ಚಾಮರಾಜನಗರ ಪಟ್ಟಣದಲ್ಲಿರುವ ಪಶು ಆಸ್ಪತ್ರೆಯ ಕಟ್ಟಡ ಕಾಮಗಾರಿ ಪರಿಶೀಲಿಸಿ ಬಂದಿಗೌಡನಹಳ್ಳಿಯಲ್ಲಿ ಮೀನುಗಾರಿಕೆ ಇಲಾಖೆ ಸಹಾಯಧನದಿಂದ ಫಲಾನುಭವಿ ನಟರಾಜು ನಿರ್ಮಾಣ ಮಾಡಿರುವ ಸಿಹಿ ನೀರಿನ ಬಯೋಫ್ಲಾಕ್ ಮೀನು ಸಾಕಾಣಿಕೆ ಕೊಳ ವೀಕ್ಷಿಸಿದರು. ಮೀನು ಸಾಕಾಣಿಕೆ ವಿಧಾನ, ರಫ್ತು, ವಹಿವಾಟು ಮಾಹಿತಿ ಪಡೆದರು.

ಜಿಲ್ಲಾ ಪಂಚಾಯಿತಿ ಮೌಲ್ಯಮಾಪನ ಅಧಿಕಾರಿ ದೀಪಾ, ಸಮಾಜ ಕಲ್ಯಾಣ ಇಲಖೆ ಉಪನಿರ್ದೇಶಕ ಮುನಿರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ಸುರೇಶ್, ಡಿಎಚ್‌ಒ ಡಾ.ಎಸ್.ಚಿದಂಬರ, ಪಶು ಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಮಂಜುನಾಥ್, ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಮೇಶ್, ತಾಲ್ಲೂಕು ಪಂಚಾಯಿತಿ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಕೊಳ್ಳೇಗಾಲ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.