
ಚಾಮರಾಜನಗರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು ಬಾಡಿಗೆದಾರರು ನೀರಿಗಾಗಿ ಮನೆಗಳನ್ನು ಖಾಲಿ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಕಾವೇರಿ ನೀರನ್ನೇ ನೆಚ್ಚಿಕೊಂಡಿರುವ ಕೊಳವೆ ಬಾವಿ (ಬೋರ್‌ವೆಲ್) ಸೌಲಭ್ಯ ಇಲ್ಲದ ಮನೆಗಳಲ್ಲಿ ವಾಸವಾಗಿರುವವರು ನಾಗರಿಕರು ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತು ಮನೆಗಳನ್ನು ತೊರೆಯುತ್ತಿದ್ದಾರೆ.
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಬೋರ್‌ವೆಲ್ ಸೌಲಭ್ಯ ಹೊಂದಿಲ್ಲದ ಮನೆಗಳಿಗೆ ಹೋಗಲು ಬಾಡಿಗೆದಾರರು ಆಸಕ್ತಿ ತೋರುತ್ತಿಲ್ಲ. ಕಡಿಮೆ ಬಾಡಿಗೆ ಹಾಗೂ ಮುಂಗಡ, ಶಾಲಾ ಕಾಲೇಜು, ಕಚೇರಿ, ಮಾರುಕಟ್ಟೆ ಸೇರಿದಂತೆ ದಿನನಿತ್ಯದ ಅಗತ್ಯತೆಗಳಿಗೆ ಹತ್ತಿರ ಎಂಬ ಕಾರಣಕ್ಕೆ ಕೊಳವೆ ಬಾವಿ ಸಂಪರ್ಕ ಹೊಂದಿಲ್ಲದಿದ್ದರೂ ಮನೆಗಳಿಗೆ ಹೋಗಿದ್ದವರೂ ಈಗ ಖಾಲಿ ಮಾಡುತ್ತಿದ್ದಾರೆ.
ಕಡಿಮೆ ಬಾಡಿಗೆ ಎಂಬ ಕಾರಣಕ್ಕೆ ಬೋರ್‌ವೆಲ್ ಸೌಲಭ್ಯ ಇಲ್ಲದ ಮನೆಗೆ ಬಂದೆವು. ಈಗ ಪ್ರತಿ ತಿಂಗಳು ಟ್ಯಾಂಕರ್ ನೀರಿಗೆ ಸಾವಿರಾರು ರೂಪಾಯಿ ವ್ಯಯ ಮಾಡಬೇಕಾಗಿದೆ. ದಿನಬಳಕೆಗೆ ನೀರಿಲ್ಲದೆ ಮಾನಸಿಕ ನೆಮ್ಮದಿಯೂ ಹಾಳಾಗಿದೆ. ನಿತ್ಯ ನೀರು ಹೊಂದಿಸುವುದೇ ಕಾಯಕವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಬಾಡಿಗೆದಾರರು.
ಬೋರ್‌ವೆಲ್‌ಗಳ ಅಬ್ಬರ: ಬೋರ್‌ವೆಲ್ ಸೌಲಭ್ಯ ಇಲ್ಲ ಎಂಬ ಕಾರಣಕ್ಕೆ ಬಾಡಿಗೆದಾರರು ಮನೆ ಖಾಲಿ ಮಾಡುತ್ತಿರುವುದರಿಂದ ಆದಾಯದ ಮೂಲಕ್ಕೆ ಪೆಟ್ಟು ಬೀಳುವ ಆತಂಕದಿಂದ ಮನೆಯ ಮಾಲೀಕರು ಅನಿವಾರ್ಯವಾಗಿ ಕೊಳವೆ ಬಾವಿ ಕೊರೆಸುತ್ತಿದ್ದಾರೆ. ನಗರದ ಬಹುತೇಕ ಬಡಾವಣೆಗಳಲ್ಲಿ ಬೋರ್‌ವೆಲ್ ಕೊರೆಯುವ ಯಂತ್ರಗಳು ಭಾರಿ ಸದ್ದು ಮಾಡುತ್ತಿರುವುದು ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆಯನ್ನು ಸಾರುತ್ತಿದೆ.
ಇನ್ನೊಂದು ತಿಂಗಳಲ್ಲಿ ಬೇಸಗೆ ಆರಂಭವಾಗುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸ್ಪಷ್ಟ ಲಕ್ಷಣಗಳು ಕಾಣುತ್ತಿವೆ. ಜೊತೆಗೆ ಏಪ್ರಿಲ್ ಹಾಗೂ ಮೇನಲ್ಲಿ ಶಾಲಾ ಕಾಲೇಜುಗಳಿಗೆ ದಾಖಲಾತಿ ಆರಂಭ ಹಾಗೂ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಾವಣೆ ಹೆಚ್ಚಾಗಿ ನಡೆಯುವುದರಿಂದ ಬಾಡಿಗೆ ಮನೆಗಳಿಗೆ ಬೇಡಿಕೆ ಸೃಷ್ಟಿಯಾಗುತ್ತದೆ. ಕೊಳವೆ ಬಾವಿ ಸೌಲಭ್ಯ ಇಲ್ಲದಿದ್ದರೆ ಬಾಡಿಗೆದಾರರು ಬರಲು ಒಪ್ಪದ ಕಾರಣಕ್ಕೆ ಬೋರ್‌ವೆಲ್ ಕೊರೆಸುವುದು ಅನಿವಾರ್ಯವಾಗಿದೆ ಎಂದು ಹಳೆ ಹೌಸಿಂಗ್ ಬೋರ್ಡ್ ನಿವಾಸಿ ಮಹೇಶ್.
ಸಮಸ್ಯೆಗೆ ಕಾರಣ: ನಗರಸಭೆ ನಿಯಮಿತವಾಗಿ ಕುಡಿಯುವ ನೀರು ಸರಬರಾಜು ಮಾಡದಿರುವುದು ಸಮಸ್ಯೆಗೆ ಕಾರಣ. ತಿ.ನರಸೀಪುರ ಸಮೀಪ ಹರಿಯುವ ಕಾವೇರಿ ನೀರನ್ನು ಮೋಟಾರ್ ಪಂಪ್‌ಗಳ ಮೂಲಕ ಮೇಲೆತ್ತಿ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಿಗೆ ಪೂರೈಕೆ ಮಾಡಲಾಗುತ್ತಿದೆ. ನೀರು ಪೂರೈಕೆ ಕೇಂದ್ರದಲ್ಲಿ ಆಗಾಗ ಮೋಟಾರ್‌ಗಳು ಕೆಟ್ಟು ಹೋಗುತ್ತಿರುವುದು ಹಾಗೂ ನೀರು ಸರಬರಾಜು ಪೈಪ್‌ಲೈನ್ ವ್ಯವಸ್ಥೆ ಸಂಪೂರ್ಣ ಹಾಳಾಗಿರುವುದರಿಂದ ನಿಯಮಿತವಾಗಿ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
ನೀರಿಗಾಗಿ ಅಲೆದಾಟ: ಆರ್ಥಿಕ ಹೊರೆ, ಹೆಚ್ಚು ಬಾಡಿಗೆ ಪಾವತಿಸಲು ಶಕ್ತಿ ಇಲ್ಲದವರ ಪಾಡಂತೂ ಹೇಳತೀರದು. ಇತ್ತ ಮನೆ ಖಾಲಿ ಮಾಡಲೂ ಸಾಧ್ಯವಾಗದೆ, ಅತ್ತ ನೀರಿನ ವ್ಯವಸ್ಥೆಯೂ ಇಲ್ಲದೆ ಪರಿತಪಿಸುತ್ತಿದ್ದಾರೆ ನಿವಾಸಿಗಳು.
15 ದಿನಗಳಿಗೊಮ್ಮೆ ಬಿಡುವ ನೀರನ್ನು ಸಂಪ್‌ನಲ್ಲಿ ಸಂಗ್ರಹಿಸಿಕೊಂಡು ಎಚ್ಚರಿಕೆಯಿಂದ ಬಳಸಬೇಕು. ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು ಧಾರಾಳವಾಗಿ ಬಳಸಿದರೆ ನಾಲ್ಕರಿಂದ ಐದು ದಿನಗಳಲ್ಲಿ ಖಾಲಿಯಾಗುತ್ತದೆ. ಬಳಿಕ ಹಣಕೊಟ್ಟು ಟ್ಯಾಂಕರ್ ನೀರು ಖರೀದಿಸಬೇಕು ಎಂದು ಹಳೆ ಹೌಸಿಂಗ್ ಬಡಾವಣೆಯ ಲಕ್ಷ್ಮಣ್ ಅಳಲು ತೋಡಿಕೊಂಡರು.
ಕಾವೇರಿ ನೀರನ್ನು ಆಹಾರ ಪದಾರ್ಥಗಳಂತೆ ಮಿತವಾಗಿ ಬಳಕೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ಹಾಗೂ ನಗರಸಭೆಯ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಸಮಸ್ಯೆ ಅನುಭವಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯೆ ಪಡೆಯಲು ಅಧಿಕಾರಿಗಳನ್ನು ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.
ನಗರಸಭೆ ವಿರುದ್ಧ ಆಕ್ರೋಶ
ನಗರಸಭೆ ವ್ಯಾಪ್ತಿಯ 31 ಬಡಾವಣೆಗಳಿಗೆ ನಗರಸಭೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ನಗರಕ್ಕೆ 15 ರಿಂದ 20 ದಿನಗಳಿಗೊಮ್ಮೆಯೂ ನೀರು ಬಿಡುತ್ತಿಲ್ಲ. ಬೇಸಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ನಗರಸಭೆ ಆಡಳಿತ ಸಂಪೂರ್ಣವಾಗಿ ಹಳಿತಪ್ಪಿದೆ ಎಂದು ನಾಗರಿಕರು ದೂರುತ್ತಾರೆ.
‘ಸ್ಥಳೀಯ ಆಡಳಿತ ಸಂಪೂರ್ಣ ವಿಫಲ’
ಜನರಿಂದ ನೀರಿನ ಕಂದಾಯ ವಸೂಲಿ ಮಾಡುವ ನಗರಸಭೆ ಕಾವೇರಿ ನೀರು ಸರಬರಾಜು ಮಾಡುವುದರಲ್ಲಿ ಸಂಪೂರ್ಣ ವಿಫಲರಾಗಿದೆ. 20 ದಿನಕ್ಕೆ ಒಮ್ಮೆಯೂ ನೀರು ಬಿಡುತ್ತಿಲ್ಲ. ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಬತ್ತುತ್ತಿರುವುದು ಸಮಸ್ಯೆಯ ಗಂಭೀರತೆಗೆ ಕಾರಣವಾಗಿದೆ. ಜನರಿಗೆ ನೀರು ಕೊಡಲಾಗದಿದ್ದರೆ ದಯಾ ಮರಣಕ್ಕೆ ಅನುಮತಿ ಕೊಡಲಿ. ನೀರಿಲ್ಲ ಎಂಬ ಕಾರಣಕ್ಕೆ ಬಾಡಿಗೆದಾರರು ಮನೆ ಖಾಲಿ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಮನೆ ಮಾಲೀಕರು ಕೂಡ ಸ್ವಂತ ಊರು ಹಾಗೂ ನಗರಗಳತ್ತ ಮುಖ ಮಾಡುತ್ತಿದ್ದಾರೆ.–ಭಾನುಪ್ರಕಾಶ್m ಸಾಮಾಜಿಕ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.