ಚಾಮರಾಜನಗರ: ‘ರೈತರ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಗಬೇಕಿದ್ದ ಸದನದಲ್ಲಿ ‘ಧರ್ಮಸ್ಥಳದಲ್ಲಿ ಬುರುಡೆ’ ಶೋಧ ವಿಚಾರವನ್ನು ಚರ್ಚಿಸಿದ್ದು ನಾಚಿಕೆಗೇಡು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ನರಸಮಂಗಲ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಭೂಸ್ವಾಧೀನ, ರೈತರ ಸಾಲ ಮನ್ನಾ, ರಸಗೊಬ್ಬರ ಕೊರತೆಯ ಬಗ್ಗೆ ಸದನದಲ್ಲಿ ಚರ್ಚೆ ನಡೆಸದ ಜನಪ್ರತಿನಿಧಿಗಳು ಮತ ರಾಜಕಾರಣ ಮಾಡಲು ಬುರುಡೆ ವಿಚಾರವನ್ನು ಚರ್ಚಿಸಿರುವುದು ಖಂಡನೀಯ’ ಎಂದರು.
‘ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಸಂಬಂಧ ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು, ಕಬ್ಬಿನ ಇಳುವರಿ ಪ್ರಮಾಣವನ್ನು 10.5ರ ಬದಲಾಗಿ 9.5ಕ್ಕೆ ಇಳಿಸಬೇಕು, ಅರಿಶಿನ, ರಾಗಿ, ಜೋಳ, ಭತ್ತ, ಬಾಳೆ, ತೆಂಗು ಸೇರಿದಂತೆ ಎಲ್ಲ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಿ ವರ್ಷಪೂರ್ತಿ ಖರೀದಿ ಕೇಂದ್ರಗಳನ್ನು ತೆರೆಯಬೇಕು, ರೈತ ವಿರೋಧ ಕಾಯ್ದೆಗಳನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.
‘ರೈತರ ಪರವಾಗಿ ಕಾಯ್ದೆ ಕಾನೂನುಗಳನ್ನು ರೂಪಿಸದ ಸರ್ಕಾರಗಳು ಬಂಡವಾಳ ಶಾಹಿಗಳ ಪರ ಕಾನೂನುಗಳನ್ನು ರೂಪಿಸುತ್ತಿವೆ. ಗ್ರಾಮೀಣ ಭಾಗದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವ ಬದಲು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲು ಹೊರಟಿವೆ’ ಎಂದು ಟೀಕಿಸಿದರು.
‘ಪ್ರಧಾನಿ ನರೇಂದ್ರ ಮೋದಿ ರೈತರ ಆದಾಯವನ್ನು 2025ಕ್ಕೆ ದ್ವಿಗುಣಗೊಳಿಸುವುದಾಗಿ ಹೇಳಿ, ರಸಗೊಬ್ಬರ ಕೀಟನಾಶಕ ಮತ್ತು ಕೃಷಿ ಯಂತ್ರೋಪಕರಣಗಳ ಮೇಲೆ ಜಿಎಸ್‌ಟಿ ವಿಧಿಸಿ ಬೆಲೆ ದ್ವಿಗುಣಗೊಳಿಸಿದ್ದಾರೆ. ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಮಾರುಕಟ್ಟೆ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ರೈತರ ಸಾಲ ಮನ್ನಾ ಮಾಡದೆ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಅಂಡುವಿನಹಳ್ಳಿ ರಾಜು, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ವಳಗೆರೆ ಗಣೇಶ್, ನಾಗಮಲ್ಲಪ್ಪ, ಮಲಿಯೂರು ಮಹೇಂದ್ರ, ಪ್ರಕಾಶ್ ಗಾಂಧಿ, ಸ್ಯಾನಡ್ರಹಳ್ಳಿ ಮಲ್ಲು, ಬಸವರಾಜು,ಗುರುವಿನಪುರ ಮೋಹನ್, ಚಂದ್ರು, ಹೊನ್ನಗೌಡನಹಳ್ಳಿ ಮಹೇಶ್, ಮುಕಡಹಳ್ಳಿ ರಾಜು, ಪುಟ್ಟಮಲ್ಲೇಗೌಡ ಇದ್ದರು.
ನರಸಮಂಗಲದಲ್ಲಿ ಗ್ರಾಮ ಘಟಕ ಉದ್ಘಾಟನೆ ‘ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸಿ’ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಗೆ ಕರೆ
‘ಬೆಳೆ ವಿಮೆ ನೀತಿ ಬದಲಾಗಲಿ’
ಬೆಳೆ ನಷ್ಟ ಅನುಭವಿಸಿದ ರೈತನಿಗೆ ಸೂಕ್ತ ಪರಿಹಾರ ಸಿಗಬೇಕು ಬೆಳೆ ವಿಮೆಯ ಮಾನದಂಡವನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಬೇಕು. ಶಾಸಕರು ಮತ್ತು ಸಂಸದರು ಅಧಿಕಾರಿಗಳಿಗೆ ನಿಯಮಿತವಾಗಿ ವೇತನ ಸಾರಿಗೆ ಭತ್ಯೆ ಪರಿಷ್ಕರಣೆಗೆ ವೇತನ ಆಯೋಗ ರಚನೆ ಮಾಡಿರುವಂತೆ ಕೃಷಿ ಉತ್ಪನ್ನಗಳ ಸ್ಥಿರ ಬೆಲೆ ಕಾಯ್ದುಕೊಳ್ಳಲು ಕೃಷಿ ಆವರ್ತನಿಧಿ ಸ್ಥಾಪಿಸಬೇಕು ಎಂದು ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಒತ್ತಾಯಿಸಿದರು.
‘ಆನ್‌ಲೈನ್ ಗೇಮ್: ಹಣಕಾಸು ಅವ್ಯವಹಾರ ತನಿಖೆ ನಡೆಸಿ’
‘ಹಣಕಟ್ಟಿ ಆಡುವ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿರುವುದು ಸ್ವಾಗತಾರ್ಹ ಆದರೆ ಆನ್‌ಲೈನ್‌ಲ್ಲಿ ನಡೆದಿರುವ ಹಣಕಾಸು ಅವ್ಯವಹಾರದ ಬಗ್ಗೆಯೂ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು’ ಎಂದು ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದರು. ‘ದೇಶದಲ್ಲಿ 50 ಕೋಟಿಗೂ ಹೆಚ್ಚು ಮಂದಿ ಆನ್‌ಲೈನ್ ಗೇಮ್‌ಗಳ ವ್ಯಸನದಲ್ಲಿ ಹಣ ಕಳೆದುಕೊಂಡಿದ್ದಾರೆ. ವಾರ್ಷಿಕ ₹ 30 ಸಾವಿರ ಕೋಟಿ ಮೀರುವ ವ್ಯವಹಾರ ಹೊಂದಿರುವ ಆನ್‌ಲೈನ್ ಗೇಮ್‌ಗಳ ಚಟಕ್ಕೆ ಬಿದ್ದು ಬಹಳಷ್ಟು ಕುಟುಂಬಗಳು ಬೀದಿಗೆ ಬಂದಿವೆ. ಆಸ್ತಿ ಕಳೆದುಕೊಂಡು ಸಾಲದ ಹೊರೆ ತಾಳದೆ ಹಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆನ್‌ಲೈನ್ ಗೇಮ್‌ಗಳು ಆರಂಭವಾಗಿ ಇಲ್ಲಿಯವರೆಗೂ ನಡೆದಿರುವ ಹಣಕಾಸಿನ ವ್ಯವಹಾರವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕು. ಹಣ ಕಳೆದುಕೊಂಡಿರುವಂತಹ ಕುಟುಂಬಗಳಿಗೆ ಹಣ ಮರಳಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.