ಚಾಮರಾಜನಗರ: ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದ್ದು, ಭಿಕ್ಷುಕರ ರಾಜ್ಯವಾಗುವತ್ತ ಸಾಗುತ್ತಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಬೊಕ್ಕಸ ಬರಿದಾಗಿದ್ದು ತುಂಬಿಸಿಕೊಳ್ಳಲು ಜನರ ಮೇಲೆ ತೆರಿಗೆ ಬರೆ ಹಾಕಲಾಗುತ್ತಿದೆ. ಅಬಕಾರಿ ಸುಂಕ ಹೆಚ್ಚಳ, ವಿದ್ಯುತ್, ಹಾಲಿನ ದರ, ಬಸ್ ಟಿಕೆಟ್ ದರ ಹೆಚ್ಚಳ, ನೋಂದಣಿ ಶುಲ್ಕ ಏರಿಕೆ ಮಾಡುವ ಮೂಲಕ ಜನರ ಮೇಲೆ ಆರ್ಥಿಕ ಹೊರೆ ಹಾಕುತ್ತಿದೆ ಎಂದು ಟೀಕಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧವಿಲ್ಲ; ಆದರೆ, ಬಜೆಟ್‌ನಲ್ಲಿ ಗ್ಯಾರಂಟಿಗಳ ಅನುಷ್ಠಾನಕ್ಕೆ ಪ್ರತ್ಯೇಕ ಅನುದಾನ ಮೀಸಲಿಡಬೇಕು. ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳಬಾರದು. ಮೂರು ವರ್ಷಗಳಲ್ಲಿ ₹ 40,000 ಕೋಟಿಗೂ ಹೆಚ್ಚು ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ಸರ್ಕಾರ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಶ್ರೀರಾಮುಲು ಆರೋಪಿಸಿದರು.
2023–24ನೇ ಸಾಲಿನಲ್ಲಿ ₹ 11,000 ಕೋಟಿ, 2024–25ನೇ ಸಾಲಿನಲ್ಲಿ ₹ 14,000 ಕೋಟಿ, ಈ ಬಾರಿಯ ಬಜೆಟ್‌ನಲ್ಲೂ ₹ 15,000 ಕೋಟಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಕೆ ಮಾಡಲು ಸರ್ಕಾರ ಉದ್ದೇಶಿಸಿದ್ದು ಬಿಜೆಪಿ ಅವಕಾಶ ನೀಡುವುದಿಲ್ಲ. ಸರ್ಕಾರದ ದಲಿತ ವಿರೋಧಿ ನೀತಿಯ ವಿರುದ್ಧ ರಾಜ್ಯಾದ್ಯಂತ ಬೃಹತ್ ಜನಾಂದೋಲನ ಹಮ್ಮಿಕೊಂಡಿದೆ ಎಂದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಕಡಿತವಾಗಿರುವುದರಿಂದ ದಲಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಸಿಗುತ್ತಿಲ್ಲ. ವಿದ್ಯಾರ್ಥಿ ವೇತನ ಬಿಡುಗಡೆ ಮಾಡುತ್ತಿಲ್ಲ, ಸಮುದಾಯ ಭವನಗಳ ಕಾಮಗಾರಿಗಳು ಅಪೂರ್ಣವಾಗಿವೆ, ರಸ್ತೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿಲ್ಲ, ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ಸಂಖ್ಯೆ ಕಡಿತಗೊಳಿಸಲಾಗಿದೆ, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಧನ ಸಿಗುತ್ತಿಲ್ಲ ಎಂದು ಶ್ರೀರಾಮುಲು ಆರೋಪಿಸಿದರು.
ಅಂಬೇಡ್ಕರ್ ಅವರ ಬಗ್ಗೆ ಕಾಂಗ್ರೆಸ್‌ಗೆ ನಿಜವಾದ ಗೌರವ ಇದ್ದರೆ ಬಜೆಟ್‌ನ ಒಟ್ಟು ಗಾತ್ರದಲ್ಲಿ ಶೇ 24.10ರಷ್ಟು ಅನುದಾನವನ್ನು ಪರಿಶಿಷ್ಟ ಜಾತಿ, ವರ್ಗಗಳ ಕಲ್ಯಾಣಕ್ಕೆ ಮೀಸಲಿಟ್ಟು ನಿರ್ದಿಷ್ಟ ಉದ್ದೇಶಗಳಿಗೆ ಮಾತ್ರ ವೆಚ್ಚ ಮಾಡಬೇಕು. ದಲಿತರ ಅಭಿವೃದ್ಧಿಗೆ ಮೀಸಲಿರಿಸಿದ ಅನುದಾನವನ್ನು ಅನ್ಯ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳಬಾರದು. ಗ್ಯಾರಂಟಿಗಳಿಗೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡದಿದ್ದರೆ ಬಿಜೆಪಿ ಹೋರಾಟ ತೀವ್ರಗೊಳಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಿರಂಜನಕುಮಾರ್ ಮಾತನಾಡಿ, ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಗಿದ್ದ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿದೆ. ಹಿಂದುಳಿದ ವರ್ಗಗಳ ಉನ್ನತ ಶಿಕ್ಷಣ ಪಡೆಯುವ ಕನಸಿಗೆ ತಣ್ಣೀರು ಎರಚಿದೆ. ಸರ್ಕಾರ ನಿರ್ಧಾರ ಹಿಂಪಡೆಯದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸುರೇಶ್, ಮುಖಂಡರಾದ ಬಾಲರಾಜ್, ಎಂ.ರಾಮಚಂದ್ರ, ಮುನಿಕೃಷ್ಣ, ಚಿದಾನಂದ ಛಲವಾದಿ, ಶ್ರೀನಿವಾಸ್, ನರೇಂದ್ರ, ಶ್ರೀನಿವಾಸ ದಾಸಕರಿಯಪ್ಪ, ನೂರೊಂದು ಶೆಟ್ಟಿ, ವೃಷಭೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಕಾಡಳ್ಳಿ ಕುಮಾರ್ ಸಹಿತ ಹಲವರು ಇದ್ದರು.
Highlights - ಲ್ಯಾಪ್‌ಟಾಪ್, ವಿದ್ಯಾರ್ಥಿ ವೇತನ ಬಿಡುಗಡೆ ಇಲ್ಲ ದಲಿತರ ಅಭಿವೃದ್ಧಿ ಮರೆತ ಸರ್ಕಾರ: ಶ್ರೀರಾಮುಲು ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಜನಾಂದೋಲನ
Quote - ರಾಮುಲು ಪಕ್ಷಕ್ಕೆ ಬಂದರೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಇತರ ಪಕ್ಷಗಳಲ್ಲಿ ಇದೆ. ಆದರೆ ಬಿಜೆಪಿ ಪಕ್ಷಕ್ಕೆ ನಿಷ್ಠನಾಗಿದ್ದು ತೊರೆಯುವ ಪ್ರಶ್ನೆ ಇಲ್ಲ. ಸಣ್ಣ ಪುಟ್ಟ ಗೊಂದಲಗಳಿದ್ದು ಶೀಘ್ರ ಬಗೆಹರಿಯಲಿವೆ –ಶ್ರೀರಾಮುಲು ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.