ಚಾಮರಾಜನಗರ: ಜಿಲ್ಲೆಯಾದ್ಯಂತ ಗಣೇಶೋತ್ಸವ ಸಂಭ್ರಮ ರಂಗೇರುತ್ತಿದ್ದು ವಿಘ್ನ ವಿನಾಯಕನ ಪ್ರತಿಷ್ಠಾಪನೆಗೆ ಅದ್ಧೂರಿ ವೇದಿಕೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕಣ್ಮನ ಸೆಳೆಯುವ ಬೃಹತ್ ಪೆಂಡಾಲ್‌ಗಳು ಸಿದ್ಧಗೊಳ್ಳುತ್ತಿವೆ. ಬಗೆಬಗೆಯ ಗಣೇಶ ಮೂರ್ತಿಗಳನ್ನು ತಯಾರಿಸಿರುವ ಕಲಾವಿದರು ನಗರ, ಪಟ್ಟಣಗಳ ಪ್ರಮುಖ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಪರಿಸರಕ್ಕೆ ಮಾರಕವಾದ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣಪತಿ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ಕಠಿಣ ನಿರ್ಬಂಧ ಹೇರಿರುವ ಪರಿಣಾಮ ಮಾರುಕಟ್ಟೆಯಲ್ಲಿ ಪಿಒಪಿ ಮೂರ್ತಿಗಳಿಗೆ ಕಡಿವಾಣ ಬಿದ್ದಿದೆ. ಆಯೋಜಕರು ಹಾಗೂ ಸಾರ್ವಜನಿಕರು ಕೂಡ ಮಣ್ಣಿನ ಮೂರ್ತಿಗಳ ಪ್ರತಿಷ್ಠಾಪನೆಗೆ ಹೆಚ್ಚು ಒಲವು ತೋರುತ್ತಿರುವುದು ಕಂಡುಬಂದಿದೆ.
ಹಬ್ಬ ಹತ್ತಿರವಾಗುತ್ತಿದ್ಧಂತೆ ಚಾಮರಾಜನಗರದಲ್ಲಿ ಗಣಪತಿ ಮೂರ್ತಿಗಳ ಮಾರಾಟ ಚುರುಕುಗೊಂಡಿದೆ. ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಸ್ಥಾನದ ಬದಿಯಲ್ಲಿ ನೂರಾರು ಗಣಪನ ಮೂರ್ತಿಗಳನ್ನು ಮಾರಾಟಕ್ಕೆ ಇರಿಸಲಾಗಿದ್ದು ಆಯೋಜಕರು ಮುಂಗಡ ಹಣ ನೀಡಿ ಬುಕ್ಕಿಂಗ್ ಮಾಡುತ್ತಿದ್ದಾರೆ.
ದೇವಸ್ಥಾನಕ್ಕೆ ಹೊಂದಿಕೊಂಡಂತೆ ರಸ್ತೆಬದಿಯ ಉದ್ದಕ್ಕೂ ಗಣಪತಿ ಮೂರ್ತಿಗಳನ್ನು ಇರಿಸಲಾಗಿದ್ದು ದಾರಿಹೋಕರ ಕಣ್ಮನ ಸೆಳೆಯುತ್ತಿವೆ. ಅರ್ಧ ಅಡಿಯಿಂದ ಐದಾರು ಅಡಿಯವರೆಗಿನ ಮೂರ್ತಿಗಳನ್ನು ಮಾರಾಟಕ್ಕೆ ಇರಿಸಲಾಗಿದ್ದು, ಗಾತ್ರ ಹಾಗೂ ಮಾದರಿಗೆ ಅನುಗುಣವಾಗಿ ಬೆಲೆ ನಿಗದಿಗೊಳಿಸಲಾಗಿದೆ. ಗಣೇಶ ಮೂರ್ತಿಗಳ ಜೊತೆಗೆ ಗೌರಿಯ ವಿಗ್ರಹಗಳನ್ನೂ ಇಡಲಾಗಿದೆ.
ಈ ಬಾರಿ ನಗರಸಭೆಯ ವತಿಯಿಂದ ಗಣಪತಿ ಮೂರ್ತಿಗಳ ವಿಸರ್ಜನೆಗೆ ಪೂರಕ ವ್ಯವಸ್ಥೆ ಮಾಡಲಾಗಿದೆ. ಇತಿಹಾಸ ಪ್ರಸಿದ್ಧ ದೊಡ್ಡರಸಿನಕೊಳದ ಹೂಳು ತೆಗೆಸಿ ನೀರು ತುಂಬಿಸಲಾಗುತ್ತಿದೆ. ಪ್ರತಿವರ್ಷ ಕೊಳದೊಳಗೆ ಗಣಪತಿ ಮೂರ್ತಿಗಳನ್ನು ವಿಸರ್ಜಿಸಲು ಭಕ್ತರು ಪ್ರಯಾಸ ಪಡಬೇಕಿತ್ತು.
ಮೆಟ್ಟಿಲುಗಳ ಮೇಲಿಂದ ಕೊಳದವರೆಗೂ ಗಣಪತಿ ಮೂರ್ತಿಗಳನ್ನು ತರುವಷ್ಟರಲ್ಲಿ ಒಂದೆರಡು ಗಂಟೆಗಳು ವ್ಯರ್ಥವಾಗುತ್ತಿತ್ತು. ಮೆಟ್ಟಿಲು ಇಳಿಯುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅವಘಡಗಳು ಸಂಭವಿಸುವ ಅಪಾಯವೂ ಎದುರಾಗುತ್ತಿತ್ತು. ಈ ವರ್ಷ ಕೊಳದವರೆಗೂ ವಾಹನಗಳು ಇಳಿಯಲು ಭದ್ರವಾದ ಏರಿ ನಿರ್ಮಾಣ ಮಾಡಲಾಗಿದೆ. ಗಣಪತಿ ಮೂರ್ತಿಗಳನ್ನು ಕೊಳದ ಬಳಿಯೇ ತಂದು ವಿಸರ್ಜಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಪೌರಾಯುಕ್ತ ಎಸ್.ಎ.ರಾಮದಾಸ್ ತಿಳಿಸಿದರು.
8ನೇ ವಾರ್ಡ್ ಸದಸ್ಯ ರಾಘವೇಂದ್ರ ಉಸ್ತುವಾರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಕೊಳದೊಳಗೆ 25 ವರ್ಷಗಳಿಂದ ತುಂಬಿಕೊಂಡಿದ್ದ ಹೂಳನ್ನು ತೆಗೆಸಿ ನೀರು ತುಂಬಿಸಲಾಗುತ್ತಿದೆ. ರಾತ್ರಿಯ ಹೊತ್ತು ಗಣೇಶ ವಿಸರ್ಜನೆಗೆ ಅನುಕೂಲವಾಗುವಂತೆ 17 ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಲಾಗುತ್ತಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.
ಸುಮಾರು 20 ಅಡಿಯಷ್ಟು ಕೊಳದ ಹೂಳು ತೆಗೆಸಿರುವುದರಿಂದ ಮಕ್ಕಳು, ಈಜು ಬಾರದವರು ಸೇರಿದಂತೆ ಯಾರೂ ಕೊಳದೊಳಗೆ ಇಳಿಯದಂತೆ ಆಯೋಜಕರು ಎಚ್ಚರ ವಹಿಸಬೇಕು. ನಗರಸಭೆಯಿಂದಲೂ ಅಲ್ಲಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗುತ್ತಿದೆ. ಈ ಬಾರಿ ಗಣಪತಿಗಳ ವಿಸರ್ಜನೆಗೆ ಕ್ರೇನ್ ಬಳಕೆ ಮಾಡಿಕೊಳ್ಳಲಾಗಿದ್ದು ಸುರಕ್ಷತೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
‘ಪ್ರತಿವರ್ಷದಂತೆ ಈ ಬಾರಿಯೂ ಚಾಮರಾಜನಗರದ ಶ್ರೀ ವಿದ್ಯಾಗಣಪತಿ ಮಂಡಳಿಯಿಂದ ವಿಜೃಂಭಣೆಯ ಉತ್ಸವ ಆಚರಿಸಲಾಗುತ್ತಿದೆ. 63ನೇ ವರ್ಷದ ಗಣೇಶೋತ್ಸವ ಸರ್ವರ ಸಹಕಾರದಿಂದ ನಡೆಯುತ್ತಿದೆ, 60ಕ್ಕೂ ಹೆಚ್ಚು ವಿವಿಧ ಕೋಮುಗಳ ಮುಖಂಡರ ಉಸ್ತುವಾರಿಯಲ್ಲಿ ಗಣೇಶೋತ್ಸವ ನಡೆಯುತ್ತಿದೆ. ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದು ಮಂಡಳಿ ಅಧ್ಯಕ್ಷ ಶಿವಣ್ಣ ಮಾಹಿತಿ ನೀಡಿದರು.
ಭರ್ಜರಿ ಸಿದ್ಧತೆ: ಕೊಳ್ಳೇಗಾಲ ತಾಲ್ಲೂಕಿನ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗೌರಿ ಗಣೇಶ ಹಬ್ಬದ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಪ್ರತಿ ಬಡಾವಣೆಯಲ್ಲೂ ಗಣಪತಿ ಪ್ರತಿಷ್ಠಾಪನೆ ನಡೆಯುತ್ತಿದೆ. ಪಿಒಪಿ ಗಣಪತಿ ಮಾರಾಟಕ್ಕೆ ಕಡಿವಾಣ ಬಿದ್ದಿದ್ದು ಮಣ್ಣಿನ ಗಣಪತಿಗೆ ಒಲವು ಹೆಚ್ಚಾಗಿದೆ. ಗಣಪತಿ ಕೂರಿಸಲು ಅನುಮತಿ ಕಡ್ಡಾಯ ಮಾಡಲಾಗಿದ್ದು ಏಕಗವಾಕ್ಷಿ ವ್ಯವಸ್ಥೆ ಮೂಲಕ ಪರವಾನಗಿ ವಿತರಿಸಲಾಗುತ್ತಿದೆ.
ಹಬ್ಬಕ್ಕೂ ಮುನ್ನವೇ ಪೊಲೀಸ್ ಠಾಣೆಗಳಲ್ಲಿ ಪೂರ್ವಭಾವಿ ಸಭೆಗಳು ನಡೆದಿದ್ದು ಶಾಂತಿ ಪಾಲನೆಗೆ ಸೂಚನೆ ನೀಡಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಚಪ್ಪರ ಹಾಗೂ ವೇದಿಕೆ ನಿರ್ಮಿಸಲಾಗಿದೆ.
ಕಾವೇರಿ ನದಿಯಲ್ಲಿ ವಿಸರ್ಜನೆ: ತಾಲ್ಲೂಕಿನ ದಾಸನಪುರ ಗ್ರಾಮದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಗಣಪತಿ ಮೂರ್ತಿಗಲ ವಿಸರ್ಜನೆಗೆ ಸ್ಥಳ ನಿಗದಿಮಾಡಲಾಇಗದೆ. ರಾತ್ರಿ 7 ಗಂಟೆಯ ಒಳಗೆ ವಿಸರ್ಜನೆ ಮಾಡಬೇಕು, ನಿಗದಿತ ಸ್ಥಳದಲ್ಲೇ ಮೂರ್ತಿಗಳನ್ನು ವಿಸರ್ಜಿಸಬೇಕು, ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಧರ್ಮೇಂದ್ರ ಪ್ರಜಾವಾಣಿಗೆ ತಿಳಿಸಿದರು.
ಮಣ್ಣಿನ ಮೂರ್ತಿಗಳಿಗೆ ಆದ್ಯತೆ:
ಯಳಂದೂರು ಪಟ್ಟಣದಲ್ಲಿ ಪಿಒಪಿ ರಹಿತ ಪರಿಸರ ಸ್ನೇಹಿ ಮಣ್ಣಿನ ಗಣೇಶ–ಗೌರಿಯ ವಿಗ್ರಹಗಳು ಹೆಚ್ಚು ಮಾರಾಟವಾಗುತ್ತಿವೆ. ಬಣ್ಣವನ್ನೇ ಬಳಿಯದ ಮಣ್ಣಿನ ಮೂರ್ತಿಗಳಿಗೂ ಬೇಡಿಕೆ ಕಂಡುಬಂದಿದೆ. ತಾಲ್ಲೂಕು ಆಡಳಿತ ಹಲವು ನಿರ್ಬಂಧಗಳನ್ನು ಹೇರಿದ್ದು, ಪ್ಲಾಸ್ಟಿಕ್ ಬ್ಯಾನರ್ ಹಾಗೂ ಪಿಒಪಿ ಮೂರ್ತಿಗಳ ನಿಷೇಧದ ಫಲವಾಗಿ ಪರಿಸರ ಸ್ನೇಹಿ ವಾತಾವರಣ ಸೃಷ್ಟಿಯಾಗಿದೆ.
ಬಿಗಿ ಭದ್ರತೆ: ಗುಂಡ್ಲುಪೇಟೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮದಲ್ಲಿ ಗಣೇಶ ಗೌರಿ ವಿಗ್ರಹ ಪ್ರತಿಷ್ಠಾಪನೆ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿದ್ದು ಸೌಹಾರ್ದ ಸಭೆ ನಡೆಸಿದ್ದಾರೆ. ಪಟ್ಟಣದ ಚಾಮುಂಡೇಶ್ವರಿ ದೇವಸ್ತಾನ, ಹಳೆ ಬಸ್ ನಿಲ್ದಾಣ, ನಾಯಕನ ಬಡಾವಣೆ, ಅಂಬೇಡ್ಕರ್ ಬಡಾವಣೆ, ಪೊಲೀಸ್ ಸ್ಟೇಷನ್ ಎದುರು ಬೃಹತ್ ಗಾತ್ರದ ಗಣೇಶ ವಿಗ್ರಹ ಪ್ರತಿಷ್ಠಾಪಿಸಲಾಗುತ್ತದೆ.
ಪೂರಕ ಮಾಹಿತಿ: ಅವಿನ್ ಪ್ರಕಾಶ್ ವಿ, ನಾ.ಮಂಜುನಾಥಸ್ವಾಮಿ, ಮಲ್ಲೇಶ, ಮಹದೇವ್ ಹೆಗ್ಗವಾಡಿಪುರ
ಆಪರೇಷನ್ ಸಿಂಧೂರ ‘ಗಣಪತಿ’ ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ಅಡಗುದಾಣಗಳನ್ನು ಧ್ವಂಸಗೊಳಿಸಿದ ರೂಪಕವಾಗಿ ‘ಆಪರೇಷನ್ ಸಿಂಧೂರ’ ಮಾದರಿಯ ಗಣಪತಿಯನ್ನು ಚಾಮರಾಜನಗರದ ಪ್ರಸಿದ್ಧ ಶ್ರೀವಿದ್ಯಾಗಣಪತಿ ಮಂಡಳಿಯಿಂದ ಪ್ರತಿಷ್ಠಾಪಿಸಲಾಗುತ್ತಿದೆ. ಯುದ್ಧ ವಿಮಾನದ ಮೇಲೆ ಕುಳಿತ ಮಾದರಿಯ ಗಣಪನ ಮೂರ್ತಿ ತಯಾರಾಗುತ್ತಿದ್ದು ಸೇನೆಯ ಶೌರ್ಯವನ್ನು ಬಿಂಬಿಸಲಾಗುತ್ತಿದೆ. ಮಳೆ ಹಾಗೂ ತಡವಾಗಿ ಮೂರ್ತಿಯ ನಿರ್ಮಾಣ ಕಾರ್ಯ ಆರಂಭವಾಗಿರುವುದರಿಂದ ಹಬ್ಬದ ದಿನದ ಬದಲಾಗಿ ಸೆ.5ರಂದು ಗಣಪನ ಪ್ರತಿಷ್ಠಾಪನೆ ಮಾಡಲಾಗುವುದು. ಅಲ್ಲಿಯವರೆಗೂ ಸಣ್ಣ ವಿನಾಯಕನ ಮೂರ್ತಿಯನ್ನು ಇರಿಸಿ ಪೂಜಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಶಿವಣ್ಣ ತಿಳಿಸಿದರು.
ಯಾರು ಏನಂತಾರೆ ಪ್ರತಿವರ್ಷ ದೊಡ್ಡರಸಿನಕೆರೆ ಕೊಳದಲ್ಲಿ ಗಣೇಶ ವಿಸರ್ಜನೆ ಮಾಡುವುದು ಕಷ್ಟವಾಗುತ್ತಿತ್ತು. ಈ ವರ್ಷ ಕೊಳದ ಹೂಳೆತ್ತಿ ಏರಿ ನಿರ್ಮಿಸಿರುವುದರಿಂದ ಸಮಸ್ಯೆ ಬಗೆಹರಿದಿದೆ. ಕೊಳದವರೆಗೂ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು ರಾತ್ರಿಯ ಹೊತ್ತು ವಿಸರ್ಜನೆಗೆ ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಲಾಗಿದೆ. ದೇವರ ಅಲಂಕಾರಕ್ಕೆ ಬಳಸುವ ವಸ್ತುಗಳ ವಿಸರ್ಜನೆಗೆ ಪತ್ಯೇಕ ಡ್ರಮ್‌ಗಳನ್ನು ಇರಿಸಲಾಗಿದೆ. ಕೊಳದ ಸಮಗ್ರ ಅಭಿವೃದ್ಧಿಗೆ ಅಮೃತ್–2 ಯೋಜನೆಯಡಿ ₹ 1.20 ಕೋಟಿ ಅನುದಾನ ಬಿಡುಗಡೆಯಾಗಿದ್ದು ಅಭಿವೃದ್ಧಿ ಕಾರ್ಯ ನಡೆಯಲಿದೆ –ಎಸ್.ಎ.ರಾಮದಾಸ್ ಚಾಮರಾಜನಗರ ಪೌರಾಯುಕ್ತ ವ್ಯಾಪಾರ ಕಡಿಮೆ ಗುಂಡ್ಲುಪೇಟೆಯಲ್ಲಿ ಪಿಒಪಿ ಮೂರ್ತಿಗಳ ತಯಾರಿಕೆ ಮಾರಾಟ ನಡೆಯುತ್ತಿದ್ದು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಈ ವರ್ಷ ಮಣ್ಣಿನ ನಿರೀಕ್ಷೆಯಷ್ಟು ಬೇಡಿಕೆ ಬಂದಿಲ್ಲ. ಹಬ್ಬಕ್ಕೆ ಇನ್ನೆರಡು ದಿನ ಬಾಕಿ ಇದ್ದರೂ ನೂರಾರು ಮೂರ್ತಿಗಳು ಮಾರಾಟವಾಗದೆ ಉಳಿದುಕೊಂಡಿವೆ. ಸಿದ್ದಪ್ಪಾಜಿ ಗಣಪತಿ ತಯಾರಕ ಚಾಮರಾಜನಗರ ವ್ಯಾಪಾರಕ್ಕೆ ನಿಯಮಗಳು ಅಡ್ಡಿ ಈ ವರ್ಷ ಮಣ್ಣಿನ ಗಣೇಶನ ಮೂರ್ತಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ಗಣಪತಿ ಪ್ರತಿಷ್ಠಾಪನೆಗೆ ನಿಯಮಗಳು ಹೆಚ್ಚಾಗಿರುವುದರಿಂದ ಗಣಪತಿ ಮೂರ್ತಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹಾಕಿದ ಬಂಡವಾಳ ಸಹ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಂದ್ರು ವ್ಯಾಪಾರಿ ನೈಸರ್ಗಿಕ ಬಣ್ಣದ ಮೂರ್ತಿ ಮಾರಾಟ ಪರಿಸರಸ್ನೇಹಿ ಜೇಡಿ ಮಣ್ಣಿನ ವಿಗ್ರಹಗಳನ್ನು ತಯಾರಿಸಿದ್ದು ಜಲಮೂಲಗಳಿಗೆ ಹಾನಿ ಮಾಡದ ರಸಾಯನಿಕ ಬಣ್ಣಗಳ ಲೇಪನ ಮಾಡಿಲ್ಲ. ಸರ್ಕಾರದ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ. ವೇಣು ಮಾರಾಟಗಾರ ಯಳಂದೂರು ಮಾಲಿನ್ಯ ವಿರುದ್ಧ ಜಾಗೃತಿ ಪಿಒಪಿ ಗಣಪತಿಗಳಿಂದ ಪರಿಸರ ಮಾಲಿನ್ಯ ಉಂಟಾಗುವುದರಿಂದ ಪರಿಸರಕ್ಕೆ ಪೂರಕವಾದ ಮಣ್ಣಿನ ಗಣಪತಿಗಳಿಗೆ ಆದ್ಯತೆ ನೀಡಲಾಗಿದೆ. ಪರಿಸರ ಸ್ನೇಹಿ ಗಣಪತಿ ಹಬ್ಬಕ್ಕ ಜಾಗೃತಿ ಮೂಡಿಸಿ ಗಣಪತಿ ಹಬ್ಬಕ್ಕೆ ಪ್ರೇರೇಪಿಸಲಾಗುತ್ತಿದೆ. ರಾಜೇಶ್ ಉಮ್ಮತ್ತೂರು
ಗಣಪತಿ ಪ್ರತಿಷ್ಠಾಪನೆಗೆ ಪರವಾನಗಿ ಪೊಲೀಸ್ ಠಾಣೆ ;ಪರವಾನಗಿ ಸಂಖ್ಯೆ ಚಾಮರಾಜನಗರ ಟೌನ್;22 ಚಾಮರಾಜನಗರ ಪೂರ್ವ;14 ಸಂತೇಮರಹಳ್ಳಿ:08 ಕುದೇರು;05 ಗುಂಡ್ಲುಪೇಟೆ;06 ಬೇಗೂರು;08 ತೆರಕಣಾಂಬಿ;18 ಮಾಂಬಳ್ಳಿ;2 ಹನೂರು;31 ರಾಮಾಪುರ;5 ಮಲೆ ಮಹದೇಶ್ವರ ಬೆಟ್ಟ;3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.