ADVERTISEMENT

ಚಾಮರಾಜನಗರ: ಕಾನೂನು ಕಾಲೇಜು ಉದ್ಘಾಟಿಸಿದ ಶಾಸಕ ಪುಟ್ಟರಂಗಶೆಟ್ಟಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 8:14 IST
Last Updated 27 ಡಿಸೆಂಬರ್ 2025, 8:14 IST
ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಶುಕ್ರವಾರ ಸರ್ಕಾರಿ ಕಾನೂನು ಕಾಲೇಜು ಉದ್ಘಾಟಿಸಿದರು
ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಶುಕ್ರವಾರ ಸರ್ಕಾರಿ ಕಾನೂನು ಕಾಲೇಜು ಉದ್ಘಾಟಿಸಿದರು   

ಚಾಮರಾಜನಗರ: ನಿರಂತರ ಪ್ರಯತ್ನ ಹಾಗೂ ಪರಿಶ್ರಮದ ಫಲವಾಗಿ ಜಿಲ್ಲೆಯಲ್ಲಿ ಮೊದಲ ಕಾನೂನು ಕಾಲೇಜು ಉದ್ಘಾಟನೆಯಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಕಾನೂನು ಕಾಲೇಜು ಉದ್ಘಾಟನೆ ಮತ್ತು ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿವಿಧ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ, ಕಾನೂನು ಪದವಿ ಪಡೆಯಬೇಕು ಎಂಬ ಹಂಬಲ ಹೊಂದಿರುವ ವಿದ್ಯಾರ್ಥಿಗಳು ಕಾನೂನು ಕಾಲೇಜಿಗೆ ಪ್ರವೇಶ ಪಡೆದು ಪರಿಶ್ರಮದಿಂದ ಅಧ್ಯಯನ ನಡೆಸಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಹಲವು ವರ್ಷಗಳ ಹಿಂದೆಯೇ ಕಾನೂನು ಕಾಲೇಜು ಸ್ಥಾಪನೆಯ ಪ್ರಕ್ರಿಯೆ ಆರಂಭಗೊಂಡಿತ್ತು. ಸಂಸದ ದಿ.ಧ್ರುವನಾರಾಯಣ್ ಕಾನೂನು ಕಾಲೇಜು ಆರಂಭಕ್ಕೆ ಹೆಚ್ಚು ಪರಿಶ್ರಮ ಹಾಕಿದ್ದರು. ಅವರ ಸತತ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ಮೊದಲ ಸರ್ಕಾರಿ ಕಾನೂನು ಕಾಲೇಜು ಕಾರ್ಯಾರಂಭ ಮಾಡಿದೆ ಎಂದರು.

ADVERTISEMENT

ಜಿಲ್ಲೆಯಲ್ಲಿ ಈಗಾಗಲೇ ಎಂಜಿನಿಯರಿಂಗ್, ವೈದ್ಯಕೀಯ, ಐಟಿಐ, ಪದವಿ ಕಾಲೇಜು, ಮಹಿಳಾ ಪದವಿ ಕಾಲೇಜು, ಆದರ್ಶ ಶಾಲೆ, ಚಾಮರಾಜನಗರ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕಾಲೇಜುಗಳು ಇದ್ದು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿವೆ. ಇದೀಗ ಕಾನೂನು ಕಾಲೇಜು ಕೂಡ ಆರಂಭವಾಗಿರುವುದು ಸಂತಸದ ವಿಚಾರ ಎಂದು ಹೇಳಿದರು. 

ಜಿಲ್ಲೆ ಶೈಕ್ಷಣಿಕವಾಗಿ ಮುಂದುವರಿಯಲು ಮತ್ತಷ್ಟು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಶ್ರಮ ವಹಿಸಲಾಗುವುದು. ಮುಂದೆ ವಿಜ್ಞಾನ ತರಬೇತಿ ಕೇಂದ್ರ ಆರಂಭಿಸಲಾಗುವುದು. ಒಂದೆರಡು ವರ್ಷಗಳಲ್ಲಿ ಕಾನೂನು ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ನಗರಕ್ಕೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ₹143 ಕೋಟಿ ವೆಚ್ಚದಲ್ಲಿ ಟೆಂಡರ್ ಅಂತಿಮವಾಗಿದೆ. ನಗರ ವ್ಯಾಪ್ತಿಯಲ್ಲಿ ಸುಸಜ್ಜಿತ ಒಳ ಚರಂಡಿ ವ್ಯವಸ್ಥೆ ನಿರ್ಮಾಣ ಮಾಡಲು ₹163 ಕೋಟಿ, ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ₹15 ಕೋಟಿ ವ್ಯಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು.

ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ಜಿಲ್ಲೆಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿರುವುದು ಸಂತಸದ ವಿಚಾರ. ಮೆಡಿಕಲ್, ಎಂಜನಿಯರಿಂಗ್ ಜೊತೆಗೆ ಕಾನೂನು ಕಾಲೇಜು ಕೂಡ ಸ್ಥಾಪನೆ ಆಗಿರುವುದರಿಂದ ಕಾನೂನು ವಿಷಯ ವ್ಯಾಸಾಂಗ ಮಾಡಲು ಹೊರ ಜಿಲ್ಲೆಗಳ ಕಾನೂನು ಕಾಲೇಜುಗಳಿಗೆ ಹೋಗಬೇಕಾದ ಅವಶ್ಯಕತೆ ಇರುವುದಿಲ್ಲ. ವಿದ್ಯಾರ್ಥಿಗಳು ದೊರೆತಿರುವ ಅವಕಾಶವನ್ನು ಬಳಸಿಕೊಂಡು ಸುಭದ್ರ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ.ಕೆ.ಎಸ್.ಲಲಿತಾಬಾಯಿ ಮಾತನಾಡಿ, ಕಾನೂನು ಕಾಲೇಜು ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಸಿ.ಪುಟ್ಟರಂಗಶೆಟ್ಟಿ ₹ 13 ಲಕ್ಷ ವೆಚ್ಚದಲ್ಲಿ ಪೀಠೋಪಕರಣಗಳನ್ನು ನೀಡಿದ್ದಾರೆ. ಸಂಸದರಾದ ಸುನೀಲ್ ಬೋಸ್ ₹ 5 ಲಕ್ಷ ಮೌಲ್ಯದ ಕಾನೂನು ಪುಸ್ತಕಗಳನ್ನು ಕಾಲೇಜಿಗೆ ಕೊಡುಗೆಯಾಗಿ ನೀಡಿದ್ದಾರೆ. ಜನಪ್ರತಿನಿಧಿಗಳ ಸಹಕಾರ ಹಾಗೂ ಕಾಳಜಿಯಿಂದ ಕಾನೂನು ಕಾಲೇಜು ಆರಂಭ ಸಾಕಾರಗೊಂಡಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ, ಪ್ರಸ್ತುತ 3 ವರ್ಷದ ಕಾನೂನು ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು, ಮುಂಬರುವ ವರ್ಷಗಳಲ್ಲಿ 5 ವರ್ಷದ ಕಾನೂನು ಪದವಿ ಪ್ರಾರಂಭ ಮಾಡಲಾಗುವುದು. ಜಿಲ್ಲೆಯಲ್ಲಿ ಸರ್ಕಾರಿ ಕಾನೂನು ಕಾಲೇಜು ಮಾದರಿಯಾರಿ ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕುಮಾರ್ ನಾಯಕ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.