ADVERTISEMENT

ಚಾಮರಾಜನಗರ: ಅದ್ಧೂರಿ ಚಾಮರಾಜೇಶ್ವರ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 13:30 IST
Last Updated 20 ಜುಲೈ 2024, 13:30 IST
   

ಚಾಮರಾಜನಗರ: ಐತಿಹಾಸಿಕ ಚಾಮರಾಜೇಶ್ವರಸ್ವಾಮಿಯ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಆಷಾಢ ಮಾಸದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ವಿಶೇಷತೆ ಹೊಂದಿರುವ ಉತ್ಸವದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿ ಚಾಮರಾಜೇಶ್ವರನ ದರ್ಶನ ಪಡೆದು ರಥೋತ್ಸವವನ್ನು ಕಣ್ತುಂಬಿಕೊಂಡರು.

ಇದಕ್ಕೂ ಮೊದಲು ದೇವಸ್ಥಾನದಲ್ಲಿ ಚಿನ್ನಾಭರಣಗಳಿಂದ ಅಲಂಕೃತ ಕೆಂಪನಂಜಾಂಬ ಅಮ್ಮನವರ ಸಹಿತ ಚಾಮರಾಜೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಗಣೇಶ, ಸುಬ್ರಹ್ಮಣ್ಯ, ಜಯಚಾಮರಾಜೇಂದ್ರ ಒಡೆಯರ್ ಉತ್ಸವಮೂರ್ತಿಗಳನ್ನು ದೇವಸ್ಥಾನ ಸುತ್ತಲೂ ಪ್ರದಕ್ಷಿಣೆ ತರಲಾಯಿತು.

ADVERTISEMENT

ಬಣ್ಣ ಬಣ್ಣದ ಬಾವುಟಗಳಿಂದ, ಬೃಹತ್ ಹೂವಿನ ಹಾರಗಳಿಂದ ಕಂಗೊಳಿಸುತ್ತಿದ್ದ ರಥದಲ್ಲಿ ಅಲಂಕೃತ ಕೆಂಪನಂಜಾಬ ಸಹಿತ ಚಾಮರಾಜೇಶ್ವರ ದೇವರ ಉತ್ಸವ ಮೂರ್ತಿಯನ್ನು ಪ್ರತಿಷ್ಟಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ರಥಕ್ಕೆ ಈಡುಗಾಯಿ ಹೊಡೆಯುತ್ತಿದ್ದಂತೆ ಶುಭ ಮುಹೂರ್ತದಲ್ಲಿ ಭಕ್ತರ ಉದ್ಘೋಷಗಳ ನಡುವೆ ಚಾಮರಾಜೇಶ್ವರ ಸ್ವಾಮಿಯನ್ನು ಹೊತ್ತ ಮುಖ್ಯ ರಥ ಮುಂದೆ ಸಾಗಿತು. ಭಕ್ತರು ಭಕ್ತಿ ಭಾವಗಳಿಂದ ರಥ ಎಳೆದು ಬಾಳೆಹಣ್ಣು–ಜವನಗಳನ್ನು ತೂರಿ ಭಕ್ತಿ ಸಮರ್ಪಿಸಿದರು.

ಮುಖ್ಯರಥದ ಮುಂದೆ ಗಣಪತಿ, ಸುಬ್ರಹ್ಮಣ್ಯ ರಥಗಳು, ಮೈಸೂರು ಮಹಾರಾಜದ ಚಾಮರಾಜ ಒಡೆಯರ್ ಉತ್ಸವ ಮೂರ್ತಿಯ ರಥ ಮುಂದೆ ಸಾಗಿದವು.

ಮುಖ್ಯರಥವು ದೇವಸ್ಥಾನದ ಮುಂಭಾಗದಿಂದ ದಕ್ಷಿಣಾಭಿಮುಖವಾಗಿ ಸಾಗುತ್ತ ರಥದ ಬೀದಿ, ಎಸ್‌ಬಿಎಂ ರಸ್ತೆ, ವೀರಭದ್ರೇಶ್ವರ ಸ್ವಾಮಿ ದೇವಾಲಯದ ವೃತ್ತ, ಮಾರಮ್ಮ ದೇವಸ್ಥಾನದ ರಸ್ತೆ, ಹಳೆ ತರಕಾರಿ ಮಾರುಕಟ್ಟೆ ರಸ್ತೆಯ ಮಾರ್ಗವಾಗಿ ಸಾಗಿತು.

ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ವಾಣಿಜ್ಯ ಮಳಿಗೆಗಳ ಮೇಲೆ ನಿಂತು ರಥೋತ್ಸವವನ್ನು ವೀಕ್ಷಣೆ ಮಾಡಿದರು. ರಥ ಸಾಗುವಾಗ ಕೈಮುಗಿದು ಪ್ರಾರ್ಥಿಸಿದರು. ಮತ್ತೊಂದೆಡೆ ಮಾರ್ಗದುದ್ದಕ್ಕೂ ಭಕ್ತರು ಹಣ್ಣುಕಾಯಿ ಸಮರ್ಪಿಸಿ ಪೂಜೆ ಮಾಡಿಸಿದರು.

ರಥವು ಅನತಿ ದೂರ ಸಾಗುತ್ತಿದ್ದಂತೆ ಭಕ್ತರಿಗೆ ಪೂಜೆಗೆ ಅನುವು ಮಾಡಿಕೊಡಲು ಬಂಡಿಗಾರರು ಗೊದಮಗಳನ್ನು ರಥದ ಚಕ್ರಕ್ಕೆ ಅಡ್ಡಲಾಗಿ ಇರಿಸಿ ವೇಗವನ್ನು ತಗ್ಗಿಸಿ ನಿಲ್ಲಿಸುತ್ತಿದ್ದರು. ಬಳಿಕ ರಥದ ಹಿಂಬದಿಯಿಂದ ಚಕ್ರ ಸರಾಗವಾಗಿ ಮುಂದೆ ಸಾಗಲು ಬಲ ಹಾಕುತ್ತಿದ್ದರು. ಹೀಗೆ ಮುಖ್ಯರಸ್ತೆಗಳಲ್ಲಿ ಸಾಗಿದ ರಥ ಅಂತಿಮವಾಗಿ ದೇವಸ್ಥಾನದ ಸ್ವಸ್ಥಾನ ತಲುಪಿ ರಥೋತ್ಸವಕ್ಕೆ ತೆರಬಿತ್ತು.

ನವದಂಪತಿಗಳ ಕಲರವ:

ಚಾಮರಾಜೇಶ್ವರಸ್ವಾಮಿ ರಥೋತ್ಸವದಲ್ಲಿ ನವದಂಪತಿಗಳ ಕಲರವ ತುಂಬಿತ್ತು. ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಆಷಾಢಮಾಸದಲ್ಲಿ ದೂರವಿದ್ದ ದಂಪತಿಗಳನ್ನು ರಥೋತ್ಸವ ಒಂದು ಗೂಡಿಸಿತ್ತು. ಸಂಪ್ರದಾಯದಂತೆ ಈ ವರ್ಷವೂ ನೂರಾರು ಜೋಡಿಗಳು ರಥೋತ್ಸವದಲ್ಲಿ ಭಾಗವಹಿಸಿ ತೇರಿಗೆ ಹಣ್ಣು ಜವನ ಎಸೆದು ಇಷ್ಟಾರ್ಥ ನೆರವೇರಿಸಲು ಪ್ರಾರ್ಥಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.