ADVERTISEMENT

ಚಾಮರಾಜನಗರ | ಹನೂರು ಪಟ್ಟಣ ಪಂಚಾಯಿತಿ: ಬಿಜೆಪಿ -ಕಾಂಗ್ರೆಸ್ ಮೈತ್ರಿ!

ವೈರಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದ ಸಂಸದ, ಶಾಸಕ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 9:36 IST
Last Updated 7 ನವೆಂಬರ್ 2020, 9:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹನೂರು (ಚಾಮರಾಜನಗರ): ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಮತ್ತು‌ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು‌ ಅಧಿಕಾರದ ಚುಕ್ಕಾಣಿ ಹಿಡಿದಿವೆ.

13 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಯ ಚಂದ್ರಮ್ಮ ಅಧ್ಯಕ್ಷೆಯಾಗಿ ಹಾಗೂ ಕಾಂಗ್ರೆಸ್‌ನ‌ ಹರೀಶ್ ಕುಮಾರ್ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಶನಿವಾರ ನಡೆದ ಚುನಾವಣೆಯಲ್ಲಿ ಸ್ಥಳೀಯ ಶಾಸಕ ಕಾಂಗ್ರೆಸ್ ನ ನರೇಂದ್ರ ಅವರು ಬಿಜೆಪಿಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಬೆಂಬಲಿಸಿದರೆ, ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ನ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಬೆಂಬಲಿಸಿದರು.

ADVERTISEMENT

ಕಳೆದ ವರ್ಷ ನಡೆದಿದ್ದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಆರು ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್ ದೊಡ್ಡ ಪಕ್ಷವಾಗಿತ್ತು. ಕಾಂಗ್ರೆಸ್ ನಾಲ್ಕು ವಾರ್ಡ್ ಗಳಲ್ಲಿ ಬಿಜೆಪಿ ಮೂರು ವಾರ್ಡ್ ಗಳಲ್ಲಿ ಜಯಗಳಿಸಿತ್ತು.

ಸ್ಪಷ್ಟಬಹುಮತಕ್ಕೆ ಏಳು ಸದಸ್ಯರ ಬೆಂಬಲದ ಅವಶ್ಯಕತೆ ಇದೆ. ಶಾಸಕರು ಹಾಗೂ ಸಂಸದರಿಗೂ ಮತದಾನದ ಹಕ್ಕು ಇರುವುದರಿಂದ ಎಂಟು ಸದಸ್ಯರ ಬೆಂಬಲ ಬೇಕು.

ಬಿಜೆಪಿ‌ ಮೂರು ಸ್ಥಾನ ಗೆದ್ದಿದ್ದರೂ, ಒಬ್ಬ ಸದಸ್ಯ ಇತ್ತೀಚೆಗೆ‌ ನಿಧನರಾಗಿದ್ದಾರೆ. ಸದ್ಯ ಪಂಚಾಯಿತಿಯ ಸದಸ್ಯ ಬಲ 12 ಇದೆ.

ಜೆಡಿಎಸ್ ಅನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿ ಕಾಂಗ್ರೆಸ್, ಬಿಜೆಪಿ ಒಂದಾಗಿವೆ. ಹೆಚ್ಚು ಸ್ಥಾನಗಳನ್ನು‌ ಗಳಿಸಿದ್ದರೂ ಜೆಡಿಎಸ್ ಗೆ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಜೆಡಿಎಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ಮಮ್ತಾಜ್ ಬಾನು, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಆನಂದ ಕುಮಾರ್ ಅವರು ಸೋತಿದ್ದಾರೆ.

'ಪಟ್ಟಣದ ಅಭಿವೃದ್ಧಿಗಾಗಿ ಅನಿವಾರ್ಯವಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ. ಇದು ಸ್ಥಳೀಯವಾಗಿ ಮಾಡಿಕೊಂಡ‌ ವ್ಯವಸ್ಥೆ' ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಹೇಳಿದರೆ, 'ನಾವು ಮೈತ್ರಿಗೆ ಹೋಗಿಲ್ಲ. ಅವರಾಗಿಯೇ ಬಂದಿದ್ದಾರೆ' ಎಂದು ಶಾಸಕ ಆರ್.ನರೇಂದ್ರ ಅವರು ಹೇಳಿದ್ದಾರೆ.

ಬಿಜೆಪಿ, ಕಾಂಗ್ರೆಸ್ ದು ಅಪವಿತ್ರ‌ ಮೈತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಮುಖಂಡ ಮಂಜುನಾಥ್ ಅವರು, ಸೈದ್ಧಾಂತಿಕ ವಿರೋಧಿ‌ ಪಕ್ಷಗಳು ಅಧಿಕಾರದ ಆಸೆಯಿಂದ ಒಟ್ಟಾಗಿವೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.