
ಚಾಮರಾಜನಗರ: ವಿಭಿನ್ನ ಸಂಸ್ಕೃತಿ, ಆಚಾರ–ವಿಚಾರಗಳ ನೆಲವಾಗಿರುವ ಕರ್ನಾಟಕದಲ್ಲಿ ಕನ್ನಡ ಅಳಿಯದಂತೆ ಉಳಿಸಿ ಬೆಳೆಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ ಹೇಳಿದರು.
ನಗರದ ವರನಟ ಡಾ.ರಾಜಕುಮಾರ್ ರಂಗಮಂದಿರದಲ್ಲಿ ಅಖಿಲ ಭಾರತ ಕನ್ನಡ ಮಹಾಸಭಾದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ಏಕೀಕರಣ ಅಮೃತ ಮಹೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ‘ಎಷ್ಟು ಭಾಷೆಗಳನ್ನು ಕಲಿತರೂ ಮಾತೃ ಭಾಷೆ ಕನ್ನಡಕ್ಕೆ ಹೆಚ್ಚು ಒತ್ತು ನೀಡಬೇಕು. ಕನ್ನಡ ಉಳಿಸಿ ಬೆಳೆಸಲು ಸಂಕಲ್ಪ ಮಾಡಬೇಕು’ ಎಂದು ಕರೆ ನೀಡಿದರು.
ಹೋರಾಟಗಾರರು ಕನ್ನಡ ಭಾಷೆಯ ಪರವಾಗಿ ಹೋರಾಟ ಮಾಡದಿದ್ದರೆ, ಪರಭಾಷೆಗಳ ಹಾವಳಿ ವಿರುದ್ಧ ದನಿ ಎತ್ತದಿದ್ದರೆ ಕನ್ನಡ ಭಾಷೆಗೆ ಕಂಟಕ ಎದುರಾಗುತ್ತಿತ್ತು. ಆದರೂ ಬೆಂಗಳೂರಿನಲ್ಲಿ ಶೇ70ರಷ್ಟು ಕನ್ನಡೇತರರು ಹಾಗೂ ಶೇ30ರಷ್ಟು ಮಾತ್ರ ಕನ್ನಡ ಭಾಷಿಕರು ಇರುವುದು ಬೇಸರದ ಸಂಗತಿ. ಕನ್ನಡ ಉಳಿಯಲು, ಬೆಳೆಯಲು ಕನ್ನಡ ಪರ ಹೋರಾಟಗಾರರ ಸಂಖ್ಯೆ ಹೆಚ್ಚಳವಾಗಬೇಕು. ಹೋರಾಟಗಾರರಿಗೆ ಸಮಾಜ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಮಾತನಾಡಿ, ಕನ್ನಡ ಸಂಘಟನೆಗಳು ನಿರಂತರ ಹೋರಾಟಗಳ ಮೂಲಕ ಸರ್ಕಾರವನ್ನು ಬಡಿದೆಚ್ಚರಿಸುವ ಕೆಲಸ ಮಾಡುತ್ತಿದ್ದು ನಿರಂತರವಾಗಿರಲಿ ಎಂದು ಆಶಿಸಿದರು.
ಕರ್ನಾಟಕ ಏಕೀಕರಣ ಪ್ರಶಸ್ತಿ ಸ್ವೀಕರಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಕನ್ನಡ ಸೇವೆಗೆ ಪ್ರತಿಯಾಗಿ ಸಂದಿರುವ ಪ್ರಶಸ್ತಿ ಹೋರಾಟಗಳಿಗೆ ಮತ್ತಷ್ಟು ಶಕ್ತಿ ಹಾಗೂ ಜವಾಬ್ದಾರಿ ನೀಡಿದಂತಾಗಿದೆ. ಕನ್ನಡದ ಅಗ್ರಗಣ್ಯ ಹೋರಾಟಗಾರರಾದ ವಾಟಾಳ್ ನಾಗರಾಜ್ ಈ ನೆಲದವರಾಗಿದ್ದಾರೆ. ಕನ್ನಡದ ಪರವಾಗಿ ನಡೆಯುವ ಹೋರಾಟ ಸದಾ ಸತ್ಯ, ನ್ಯಾಯ, ಧರ್ಮದ ಹೋರಾಟವಾಗಿದೆ ಎಂದರು.
ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ದತ್ತೇಶ್ ಕುಮಾರ್ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿಯನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಕನ್ನಡ ನುಡಿಗಳೇ ರೋಮಾಂಚನಕಾರಿ ಅನುಭವ ನೀಡುತ್ತವೆ ಎಂದರು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 40 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿ ಮಹದೇವ ಶಂಕನಪುರ, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್, ಉದ್ಯಮಿ ಶ್ರೀನಿಧಿ ಕುದರ್, ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಲಿಂಗರಾಜು, ಪಣ್ಯದಹುಂಡಿ ರಾಜು, ಆಟೊ ಲಿಂಗರಾಜು, ಶಿವಣ್ಣ, ರಾಚಪ್ಪ, ಸುರೇಶ್ ವಾಜಪೇಯಿ, ಅಣಗಳ್ಳಿ ಬಸವರಾಜು, ಮಹೇಶ್ ಗೌಡ, ಜಿಲ್ಲಾಧ್ಯಕ್ಷ ಮೋಹನ್, ರವಿಚಂದ್ರ ಪ್ರಸಾದ್, ಚಿನ್ನುಮುತ್ತು, ಹೊಮ್ಮ ಲೋಕೇಶ್ ಇದ್ದರು.
ಕನ್ನಡ ಪರ ಹೋರಾಟಗಾರರ ಕಾರ್ಯಕ್ಕೆ ಶ್ಲಾಘನೆ | ಹೋರಾಟಗಾರರಿಗೆ ಸಮಾಜದ ಪ್ರೋತ್ಸಾಹ ಅಗತ್ಯ |ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಶೇ30 ಮಾತ್ರ
‘ಹೋರಾಟದ ನೆಲ ಚಾ.ನಗರ’
ರಾಜ್ಯದ ಯಾವುದೇ ಮೂಲೆಯಲ್ಲಿ ಕನ್ಕಡ ಭಾಷೆ ನೆಲ–ಜಲದ ವಿಚಾರ ಭುಗಿಲೆದ್ದರೂ ಮೊದಲ ಹೋರಾಟದ ಕಹಳೆ ಚಾಮರಾಜನಗರ ಜಿಲ್ಲೆಯಲ್ಲಿ ಮೊಳಗುತ್ತದೆ. ವಾಟಾಳ್ ನಾಗರಾಜ್ ಅವರ ಕನ್ನಡಪರ ಹೋರಾಟಗಳ ಫಲವಾಗಿ ಈ ಭಾಗದಲ್ಲಿ ಇಂದಿಗೂ ಕನ್ನಡ ಗಟ್ಟಿಯಾಗಿ ಉಳಿದಿದೆ. ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಹಲವರ ತ್ಯಾಗ ಬಲಿದಾನವಾಗಿದ್ದು ಆಲೂರು ವೆಂಕಟರಾಯರು ದೊಡ್ಡ ಕೊಡುಗೆ ನೀಡಿದ್ದಾರೆ. ಕುವೆಂಪು ಕೆಂಗಲ್ ಹನುಮಂತಯ್ಯ ಹೋರಾಟದ ಶಕ್ತಿಯಾಗಿದ್ದರು ಎಂದು ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.