ADVERTISEMENT

ಚಾಮರಾಜನಗರ | ‘ಕ್ರೀಡೆ ಬದುಕಿನ ಭಾಗವಾಗಲಿ’

ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಮ್ಯಾರಥಾನ್‌, ಹಗ್ಗ-ಜಗ್ಗಾಟ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:18 IST
Last Updated 30 ಆಗಸ್ಟ್ 2025, 5:18 IST
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಜನ್ಮದಿನ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಮ್ಯಾರಥಾನ್ ಹಾಗೂ ಹಗ್ಗ-ಜಗ್ಗಾಟ ಸ್ಪರ್ಧಾ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೃತ್ಯ ಯೋಗ ಪ್ರದರ್ಶಿಸಿದರು
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಜನ್ಮದಿನ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಮ್ಯಾರಥಾನ್ ಹಾಗೂ ಹಗ್ಗ-ಜಗ್ಗಾಟ ಸ್ಪರ್ಧಾ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೃತ್ಯ ಯೋಗ ಪ್ರದರ್ಶಿಸಿದರು   

ಚಾಮರಾಜನಗರ: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಜನ್ಮದಿನ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಶುಕ್ರವಾರ ನಗರದಲ್ಲಿ 5 ಕಿ.ಮೀ ಮ್ಯಾರಥಾನ್ ಹಾಗೂ ಹಗ್ಗ-ಜಗ್ಗಾಟ ಸ್ಪರ್ಧೆ ನಡೆಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಮರಾಜೇಶ್ವರ ದೇವಸ್ಥಾನದ ಆವರಣದ ಬಳಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಸಿರು ನಿಶಾನೆ ತೋರಿದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಎಸ್‌ಪಿ ಬಿ.ಟಿ.ಕವಿತಾ ಹಾಗೂ ಗಣ್ಯರು ವ್ಯಾಯಾಮ ಮಾಡುವ ಮೂಲಕ ಉತ್ಸಾಹ ತುಂಬಿದರು.

ADVERTISEMENT

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರ ಶಾಸಕ ಸಿ.ಪುಟ್ಟರಂಗಶೆಟ್ಟಿ ‘ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಬೇಕು, ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವ ಅಭಿರುಚಿ ಬೆಳೆಸಿಕೊಳ್ಳಲು ಪೋಷಕರು ಪ್ರೋತ್ಸಾಹ ನೀಡಬೇಕು ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ ಮೇಜರ್ ಧ್ಯಾನ್‍ಚಂದ್ ಜನ್ಮದಿನ ಸ್ಮರಿಸಲು ರಾಷ್ಟ್ರದಾದ್ಯಂತ ಕ್ರೀಡಾ ದಿನಾಚರಣೆ ಆಚರಿಸಲಾಗುತ್ತಿದೆ. ನಗರದಲ್ಲಿಯೂ ಮ್ಯಾರಥಾನ್, ಹಗ್ಗ-ಜಗ್ಗಾಟ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರೆತಿದೆ. ಆರೋಗ್ಯವಂತರಾಗಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅವಶ್ಯವಾಗಿದ್ದು ಚೆಲುವ ಚಾಮರಾಜನಗರ, ಹಸಿರು ಚಾಮರಾಜನಗರದಂತೆ ಕ್ರೀಡಾ ಚಾಮರಾಜನಗರ ನಿರ್ಮಾಣ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ನಗರಸಭೆ ಸದಸ್ಯೆ ಚಿನ್ನಮ್ಮ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಎಎಸ್‌ಪಿ ಎಂ.ಎನ್. ಶಶಿಧರ್, ಡಿಎಚ್‌ಒ ಡಾ.ಎಸ್.ಚಿದಂಬರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಂಕರ್, ಜಿಲ್ಲಾ ಕ್ರೀಡಾಂಗಣ ಸಮಿತಿ ಸದಸ್ಯ ಶ್ರೀನಿವಾಸ ಪ್ರಸಾದ್, ಉಪನ್ಯಾಸಕ ಸುರೇಶ್ ಋಗ್ವೇದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚಾಮರಾಜೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮ್ಯಾರಥಾನ್ ಭುವನೇಶ್ವರಿ ವೃತ್ತ, ಬಿ. ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ರಾಮಸಮುದ್ರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿ ಮರಳಿ ಅದೇ ಮಾರ್ಗವಾಗಿ ಚಾಮರಾಜೇಶ್ವರ ದೇವಸ್ಥಾನದ ಬಳಿ ಸಮಾಪನಗೊಂಡಿತು.

ಪುರುಷ ಹಾಗೂ ಮಹಿಳೆಯರಿಗಾಗಿ ಹಗ್ಗ-ಜಗ್ಗಾಟ ಸ್ಪರ್ಧೆ ನಡೆಯಿತು. ಕ್ರೀಡಾಪಟುಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಯ ಪದಾಧಿಕಾರಿಗಳು ಸಹಿತ ಸಾರ್ವಜನಿಕರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಿಲ್ಪಾ ನಾಗ್, ಮೋನಾ ರೋತ್ ನಗದು ಬಹುಮಾನ, ಪ್ರಮಾಣಪತ್ರ ವಿತರಿಸಿದರು. ಗುಂಡ್ಲುಪೇಟೆಯ ಸದ್ದಾಂ ನೃತ್ಯ ತಂಡ ದೇಶ ಭಕ್ತಿಗೀತೆಗಳ ನೃತ್ಯ ಕಾರ್ಯಕ್ರಮ ಪ್ರದರ್ಶಿಸಿತು.

5 ಕಿಮೀ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು 
ಮ್ಯಾರಥಾನ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು

ಮ್ಯಾರಥಾನ್‌ನಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗಿ ಓಟದ ಮೂಲಕ ಜಾಗೃತಿ ಮೂಡಿಸಿದ ಸ್ಪರ್ಧಿಗಳು ವಿಜೇತರಿಗೆ ಬಹುಮಾನ ನಗದು ಪುರಸ್ಕಾರ

ಮ್ಯಾರಥಾನ್ ವಿಜೇತರು

ಮ್ಯಾರಥಾನ್‌ ಪುರುಷರ ವಿಭಾಗದಲ್ಲಿ ಗುಂಡ್ಲುಪೇಟೆಯ ಮಣಿಕಂಠ ಪ್ರಥಮ ಚಾಮರಾಜನಗರದ ಯೋಗೇಶ್ ದ್ವಿತೀಯ ಚಂದು ತೃತೀಯ ನವೀನ್ ಕುಮಾರ್–4 ಕೃಷ್ಣಪ್ಪ–5 ಹಾಗೂ ಬಿ.ಅಭಿಷೇಕ್–6ನೇ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಕೊಳ್ಳೇಗಾಲ ತಾಲ್ಲೂಕು ತೆಳ್ಳನೂರಿನ ನದಿಯಾ ಪ್ರಥಮ ಪ್ರಭಾವತಿ ದ್ವಿತೀಯ ರಾಮಸಮುದ್ರದ ಸರಸ್ವತಿ ತೃತೀಯ ಕೀರ್ತನಾ–4 ರಂಜಿತಾ–5 ಹಾಗೂ ಮೇಘನಾ–6ನೇ ಸ್ಥಾನ ಪಡೆದರು.

ಹಗ್ಗ ಜಗ್ಗಾಟ ಸ್ಪರ್ಧೆಯ ವಿಜೇತರು

ಹಗ್ಗ ಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಚಾಮರಾಜನಗರದ ಪೊಲೀಸ್ ಇಲಾಖೆಯ ಸುರೇಶ್ ನೇತೃತ್ವದ ತಂಡ ಪ್ರಥಮ ಹಾಗೂ ವಿ.ಎಚ್.ಪಿ ಕಾಲೇಜಿನ ವೇದಾಂತ್ ನೇತೃತ್ವದ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳಾ ವಿಭಾಗದಲ್ಲಿ ನಗರದ ಜೆ.ಎಸ್.ಎಸ್ ಕಾಲೇಜಿನ ಮೋಹಿತ ನೇತೃತ್ವದ ತಂಡ ಪ್ರಥಮ ಹಾಗೂ ಜಿ.ಟಿ.ಜಿ.ಸಿ ತಂಡದ ದೀಪಿಕಾ ದ್ವಿತೀಯ ಸ್ಥಾನ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.