ADVERTISEMENT

ಚಾಮರಾಜನಗರ: ವಾಹನ ಸವಾರರಿಗೆ ಗುಂಡಿ ಗಂಡಾಂತರ

ಹದಗೆಟ್ಟ ನಗರ ಹಾಗೂ ಗ್ರಾಮೀಣ ಭಾಗದ ರಸ್ತೆಗಳು; ವಾಹನಗಳ ಸಂಚಾರಕ್ಕೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 3:04 IST
Last Updated 17 ನವೆಂಬರ್ 2025, 3:04 IST
ಚಾಮರಾಜನಗರದ ಸೇವಾಭಾರತಿ ಶಾಲೆಯ ರಸ್ತೆಯ ದುಸ್ಥಿತಿ
ಚಾಮರಾಜನಗರದ ಸೇವಾಭಾರತಿ ಶಾಲೆಯ ರಸ್ತೆಯ ದುಸ್ಥಿತಿ   

ಚಾಮರಾಜನಗರ: ನಗರ, ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ರಸ್ತೆಗಳ ಸ್ಥಿತಿ ಗಂಭೀರವಾಗಿದೆ. ಗುಂಡಿ ಬಿದ್ದ ರಸ್ತೆಗಳು ಸುಗಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು ನಿತ್ಯ ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿವೆ. ರಸ್ತೆ ನಿರ್ವಹಣೆಯ ಹೊಣೆ ಹೊತ್ತಿರುವ ಸ್ಥಳೀಯ ಆಡಳಿತಗಳು ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಹಲವು ಬಡಾವಣೆಗಳು ಇಂದಿಗೂ ಡಾಂಬಾರ್ ಮುಖವನ್ನೇ ಕಂಡಿಲ್ಲ. ಕೆಲವು ವಾರ್ಡ್‌ಗಳಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ರಸ್ತೆಗಳು ಗುಂಡಿಬಿದ್ದಿದ್ದು ಸಂಚಾರಕ್ಕೆ ಯೋಗ್ಯವಾಗಿಲ್ಲ. ನಾಗರಿಕರು ನಿತ್ಯ ಗುಂಡಿಗಳ ಮಧ್ಯೆ ವಾಹನಗಳನ್ನು ಓಡಿಸಬೇಕಾದ ಅನಿವಾರ್ಯತೆ ಇದೆ.

ಚಾಮರಾಜನಗರದಲ್ಲಿ ಸೇವಾಭಾರತಿ ಶಾಲೆಗೆ ಸಂಪರ್ಕಿಸುವ ಚೆನ್ನಾಪುರದ ಮೋಳೆ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ಮಧ್ಯೆ ಅಡಿಯುದ್ದದ ಗುಂಡಿಗಳು ಬಿದ್ದಿವೆ. ಕುಲುಮೆ ರಸ್ತೆಯಿಂದ ಸಂತೇಮರಹಳ್ಳಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಒಂದು ಕಿ.ಮೀ ಉದ್ದದ ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ.

ADVERTISEMENT

ವಿಎಚ್‌ಪಿ ಶಾಲೆಯ ರಸ್ತೆಯಲ್ಲಿ 20ಕ್ಕೂ ಹೆಚ್ಚು ಹಂಪ್‌ಗಳನ್ನು ಹಾಕಲಾಗಿದ್ದು, ಒಂದೆಡೆ ಗುಂಡಿಗಳು ಹಾಗೂ ಮತ್ತೊಂದೆಡೆ ಅವೈಜ್ಞಾನಿಕ ಹಂಪ್‌ಗಳಿಂದ ವಾಹನ ಸವಾರರು ಬೇಸತ್ತಿದ್ದಾರೆ. ನಿತ್ಯ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು, ಕೆಲಸ ಕಾರ್ಯಗಳಿಗೆ ನಗರಕ್ಕೆ ಹೋಗುವ ಸಾರ್ವಜನಿಕರು, ಹೂವಿನ ಮಾರುಕಟ್ಟೆಗೆ ಬರುವ ವ್ಯಾಪಾರಿಗಳು ಹಾಗೂ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ.

ಪ್ರತಿಷ್ಠಿತ ಬಡಾವಣೆ ಎಂದು ಕರೆಸಿಕೊಳ್ಳುವ ಭ್ರಮರಾಂಭ ಲೇಔಟ್ ಸ್ಥಿತಿಯೂ ಭಿನ್ನವಾಗಿಲ್ಲ. ಕಿರಿದಾದ ರಸ್ತೆಯಲ್ಲಿ ಏಕಾಏಕಿ ಎದುರಾಗುವ ಗುಂಡಿಗಳು ಹಾಗೂ ಹಂಪ್ಸ್‌ಗಳು ಕಿರಿಕಿರಿ ಉಂಟು ಮಾಡುತ್ತವೆ. ನಗರಕ್ಕೆ ಹೊಂದಿಕೊಂಡು ಬೆಳೆಯುತ್ತಿರುವ ಹೊಸ ಬಡಾವಣೆಗಳಲ್ಲಿ ರಸ್ತೆಗಳನ್ನೇ ನಿರ್ಮಾಣ ಮಾಡಿಲ್ಲ. ಧೀನಬಂಧು ಶಾಲೆಯ ಸುತ್ತಮುತ್ತಲಿನ ಬಡಾವಣೆಗಳು ಇದುವರೆಗೂ ಡಾಂಬಾರು ಮುಖ ಕಂಡಿಲ್ಲ. 

ಹಲವು ವರ್ಷಗಳಿಂದ ಜನರು ಕಾಲ್ನಡಿಗೆಯಲ್ಲಿ ಸಾಗಿ ಅಂಕುಡೊಂಕಾದ ಕಾಲುದಾರಿಗಳು ನಿರ್ಮಾಣವಾಗಿದ್ದು ನಿತ್ಯ ನಿವಾಸಿಗಳು ಸರ್ಕಸ್ ಮಾಡುತ್ತ ವಾಹನಗಳನ್ನು ಓಡಿಸಬೇಕಿದೆ. ನಿಯಮಿತವಾಗಿ ನೀರು, ನಿವೇಶನ ಹಾಗೂ ವಸತಿ ಕಂದಾಯ ಪಡೆಯುವ ನಗರಸಭೆ ರಸ್ತೆ ನಿರ್ಮಿಸಿಕೊಡುವುದನ್ನು ಮಾತ್ರ ಮರೆತಿದೆ. 

ಪ್ರಗತಿ ನಗರ, ಪ್ರಶಾಂತ್ ನಗರ, ಬುದ್ಧನಗರ, ರಾಮಸಮುದ್ರ, ಭೀಮಸಮುದ್ರ, ಭಗೀರಥ ನಗರ, ಹೌಸಿಂಗ್ ಬೋರ್ಡ್ ಕಾಲೊನಿ, ಗಾಳಿಪುರ, ಸೋಮವಾರ ಪೇಟೆ ಬಡಾವಣೆಯ ರಸ್ತೆಗಳು ಗುಂಡಿಬಿದ್ದು ಹಾಳಾಗಿವೆ. 

ಕೊಳ್ಳೇಗಾಲದಲ್ಲಿ ಪ್ರಯಾಸದ ಪ್ರಯಾಣ:

ಕೊಳ್ಳೇಗಾಲ ತಾಲ್ಲೂಕಿನಾದ್ಯಂತ ರಸ್ತೆಗಳು ಗುಂಡಿಗಳಿಂದ ಕೂಡಿದ್ದು ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ. ತಾಲ್ಲೂಕಿನ ಸತ್ತೇಗಾಲ, ಉಗನಿಯ, ಪಾಳ್ಯ, ಮುಳ್ಳೂರು, ಲೊಕ್ಕನಹಳ್ಳಿ, ಗುಂಡಾಲ್ ರಸ್ತೆ ಹಾಳಾಗಿದೆ. ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಿಗಾಗಲಿ ಪ್ರಯಾಣಿಕರ ನೋವು ಕೇಳುತ್ತಿಲ್ಲ.

ಪ್ರತಿನಿತ್ಯ ಗುಂಡಿಬಿದ್ದ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುತ್ತಿದ್ದು ಪ್ರಾಣಹಾನಿಯಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಳಜಿ ವಹಿಸಿ ಸುಗಮ ಸಂಚಾರಕ್ಕೆ ರಸ್ತೆಗಳ ನಿರ್ಮಾಣ ಮಾಡಿಕೊಡಬೇಕು ಎಂದು ಸತ್ತೇಗಾಲ ಗ್ರಾಮದ ಚೇತನ್ ಒತ್ತಾಯಿಸುತ್ತಾರೆ.

ಗುಂಡ್ಲುಪೇಟೆಯಲ್ಲೂ ಗುಂಡಿಗಳ ಕಾರುಬಾರು:

ಗುಂಡ್ಲುಪೇಟೆ ತಾಲೂಕಿನ ಮೇಲೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. ಹೆದ್ದಾರಿಗಳ ಮೂಲಕ ಕೇರಳ, ತಮಿಳುನಾಡು, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಿಗೆ ಸಂಚರಿಸುತ್ತಾರೆ. ಹೆದ್ದಾರಿಗಳಲ್ಲಿ ಕಳಪೆ ಕಾಮಗಾರಿ ಹಾಗೂ ಅಲ್ಲಲ್ಲಿ ಗುಂಡಿಗಳು ಬಿದ್ದಿರುವುದು ಸಂಚಾರಕ್ಕೆ ಅಡ್ಡಿಯಾಗಿದೆ.

ತಾಲ್ಲೂಕಿನ ಚಿಕ್ಕತೂಪೂರು ಬಳಿ ಡಾಂಬರ್ ಮೇಲೆದ್ದಿದೆ. ತಾಲೂಕಿನ ಬೊಮ್ಮಲಾಪುರ ರಸ್ತೆ ಹಲವು ವರ್ಷಗಳಿಂದ ಡಾಂಬರು ಕಂಡಿಲ್ಲ. ಮಳೆಗಾಲದಲ್ಲಿ ಸಂಚಾರ ದುಸ್ತರವಾಗುತ್ತದೆ. 

ಗುಂಡಿ ಬಿದ್ದ ರಸ್ತೆ:

ಯಳಂದೂರು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆ ಮತ್ತು ಪಟ್ಟಣದ ನಡುವೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಕಡೆ ಗುಂಡಿಗಳು ಬಿದ್ದಿವೆ. ಪಟ್ಟಣದ ನಡುವೆ ಹಾದು ಹೋಗಿರುವ ರಸ್ತೆಗಳಲ್ಲಿ ಸವಾರರು ತಗ್ಗು ಪ್ರದೇಶಗಳನ್ನು ತಪ್ಪಿಸಿ ಸಂಚರಿಸಬೇಕಾದ ಸ್ಥಿತಿ ಇದ್ದರೆ, ಗ್ರಾಮೀಣ ಪ್ರದೇಶದ ರಸ್ತೆಗಳು ಮಳೆ ಸುರಿದ ನಂತರ ಹಳ್ಳ ಬಿದ್ದು ಸಂಚಾರಕ್ಕೆ ಸಂಚಕಾರ ತಂದಿತ್ತಿದೆ.

ಕೆಲವು ವರ್ಷಗಳ ಹಿಂದೆ ಪಟ್ಟಣದ ನಡುವೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಗುಂಡಿಗಳನ್ನು ಮುಚ್ಚಿ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು. ಆದರೆ, ಬೈಪಾಸ್ ರಸ್ತೆ ನಿರ್ಮಾಣ ನಂತರ ಗುಂಡಿ ಬಿದ್ದ ರಸ್ತೆಗಳು ಅನಾಥ ಸ್ಥಿತಿಗೆ ತಲುಪಿವೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಹದಗೆಟ್ಟ ಗ್ರಾಮೀಣ ರಸ್ತೆಗಳು:

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಧುವನ ಹಳ್ಳಿಯಿಂದ ಲೊಕ್ಕನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು ಸವಾರರಿಗೆ ಸಮಸ್ಯೆಯಾಗಿದೆ. ರಾಜ್ಯ ಹೆದ್ದಾರಿಯಾಗಿರುವುದರಿಂದ ಅಂತರ ರಾಜ್ಯ ವಾಹನಗಳು ಸೇರಿದಂತೆ ನೂರಾರು ಸ್ಥಳೀಯ ವಾಹನಗಳು ನಿತ್ಯ ಸಂಚರಿಸುತ್ತವೆ. ರಸ್ತೆಯ ದುಸ್ಥಿತಿಗೆ ಬೇಸತ್ತಿರುವ ಜನರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮಧುವನಹಳ್ಳಿಯಿಂದ ಕಾಮಗೆರೆ ಅಡ್ಡರಸ್ತೆವರೆಗೆ ಹಾಗೂ ದೊಡ್ಡ ಮಲ್ಲಾಪುರದಿಂದ ಲೊಕ್ಕನಹಳ್ಳಿವರೆಗೆ ರಸ್ತೆಯ ಸ್ಥಿತಿಯಂತೂ ಹೇಳತೀರದು. ಭಾರಿ ಗಾತ್ರದ ಗುಂಡಿಗಳು ಬಿದ್ದಿದ್ದು ಮಳೆಗಾಲದಲ್ಲಿ ಹೊಂಡಗಳಂತೆ ಭಾಸವಾಗುತ್ತದೆ. ವಾಹನ ಸವಾರು ಗಂಡಿಗಳ ಆಳ ತಿಳಿಯದೆ ಬಿದ್ದು ಪೆಟ್ಟುಮಾಡಿಕೊಂಡಿದ್ದಾರೆ.

ನಿರ್ವಹಣೆ: ಬಾಲಚಂದ್ರ.ಎಚ್‌

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಅವಿನ್ ಪ್ರಕಾಶ್‌ ವಿ, ಬಸವರಾಜು ಬಿ, ಮಲ್ಲೇಶ ಎಂ., ಮಹದೇವ್ ಹೆಗ್ಗವಾಡಿಪುರ

ಚಾಮರಾಜನಗರದ ಕುಲುಮೆ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು
ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಅಗ್ರಹಾರ ಬೀದಿಯ ಮುಖ್ಯರಸ್ತೆ ಗುಂಡಿಗಳಿಂದ ಕೂಡಿರುವುದು
ಪ್ರಕಾಶ್ ನಗರಸಭೆ ಪ್ರಭಾರ ಪೌರಾಯುಕ್ತ
ಮಂಜುನಾಥ್ ಸಂತೇಮರಹಳ್ಳಿ

ನಗರಸಭೆಯಲ್ಲಿ ಅನುದಾನ ಇಲ್ಲ ಕಳೆದ ವರ್ಷ ನಗರಸಭೆಗೆ ಕೇವಲ ₹ 5.22 ಕೋಟಿ ತೆರಿಗೆ ಸಂಗ್ರಹವಾಗಿತ್ತು ಖರ್ಚು ₹ 6 ಕೋಟಿ ಮೀರಿತ್ತು. ಹಾಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಇಲ್ಲವಾಗಿದ್ದು ಸರ್ಕಾರದಿಂದ ಪ್ರತ್ಯೇಕ ಅನುದಾನ ದೊರೆತರೆ ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳ ಸೂಚನೆಯಂತೆ ನಗರದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.  ಪ್ರಕಾಶ್ ನಗರಸಭೆ ಪ್ರಭಾರ ಪೌರಾಯುಕ್ತ  ಗುಂಡಿ ಮುಚ್ಚಿಸಿ ಮೈಸೂರು ಮುಖ್ಯರಸ್ತೆಯ ಸಂತೇಮರಹಳ್ಳಿಯಿಂದ ಕಮರವಾಡಿ ಗೇಟ್‌ವರೆಗೆ ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನ ಚಲಾಯಿಸಲು ತುಂಬಾ ಕಷ್ಟಪಡಬೇಕು. ಎದುರುಗಡೆ ವಾಹನಗಳು ಬಂದಾಗ ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ದುರಸ್ತಿಗಾಗಿ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು.  ಮಂಜುನಾಥ್ ಹೆದ್ದಾರಿ ಸಂಚಾರ ದುಸ್ತರ ಗುಂಡ್ಲುಪೇಟೆ ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಹೊರತುಪಡಿಸಿ ಉಳಿದ ರಸ್ತೆಗಳು ಗುಂಡಿ ಬಿದ್ದಿವೆ. ತೆರಕಣಾಂಬಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಐದಾರು ಕಡೆಗಳಲ್ಲಿ ಗುಂಡಿ ಬಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಶಾಸಕರು ಬಗ್ಗೆ ಗಮನ ಹರಿಸಬೇಕು.  ಚಂದ್ರು ಪಟ್ಟಣ ನಿವಾಸಿ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಹೆಚ್ಚು ಯಳಂದೂರು ತಾಲ್ಲೂಕಿನ ಮದ್ದೂರು ಮಲರ ಪಾಳ್ಯ ರಸ್ತೆ ಗುಂಬಳ್ಳಿ ಕುಮಾರನಪುರ ವಡಗೆರೆ ರಸ್ತೆ ಹೊನ್ನೂರು ಕೆಸ್ತೂರು ಗ್ರಾಮೀಣ ರಸ್ತೆಗಳು ಹಾಳಾಗಿದ್ದು ದುರಸ್ತಿಪಡಿಸಬೇಕು.  ಕೆಸ್ತೂರು ಪ್ರಸನ್ನ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.