ADVERTISEMENT

ಚಾಮರಾಜನಗರ: ಪ್ರೊ.ಎಂ.ಡಿ.ಎನ್‌ ಸ್ಮರಣೆ, ರೈತ ಸಮಾವೇಶ 3ರಂದು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:39 IST
Last Updated 11 ಫೆಬ್ರುವರಿ 2026, 7:39 IST
ಎ. ಎಂ.ಮಹೇಶ್‌ಪ್ರಭು
ಎ. ಎಂ.ಮಹೇಶ್‌ಪ್ರಭು   

ಚಾಮರಾಜನಗರ: ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆಯ ವತಿಯಿಂದ ಫೆ.13ರಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆ ಹಾಗೂ ರೈತ ಸಮಾವೇಶವನ್ನು ಚಾಮರಾಜನಗರ ಹಾಗೂ ಗುಂಡ್ಲುಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎ.ಎಂ.ಮಹೇಶ್‌ ಪ್ರಭು ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕಿನ ಹೊಂಡರಬಾಳುವಿನ ಅಮೃತ ಭೂಮಿಯಲ್ಲಿರುವ ಪ್ರೊ.ನಂಜುಂಡಸ್ವಾಮಿ ಅವರ ಸ್ಮಾರಕಕ್ಕೆ ಬೆಳಿಗ್ಗೆ 8ಕ್ಕೆ ಪುಷ್ಪನಮನ ಸಲ್ಲಿಸಲಾಗುವುದು, ಬಳಿಕ ತೆಂಗು ಸಂಸ್ಕರಣಾ ಘಟಕದಲ್ಲಿರುವ ನಂಜುಂಡಸ್ವಾಮಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ಗುಂಡ್ಲುಪೇಟೆ ಹಯ ಬಸ್ ನಿಲ್ದಾಣದ ಆವರಣದಲ್ಲಿ ಬೆಳಿಗ್ಗೆ 11-30 ಗಂಟೆಗೆ ರೈತ ಸಮಾವೇಶ ನಡೆಯಲಿದೆ. ಈ ವೇಳೆ ಹಲವು ಬೇಡಿಕೆಗಳ ಈಡೇರಿಕೆಗೆ ಹಕ್ಕೋತ್ತಾಯ ಮಂಡಿಸಲಾಗುವುದು ಎಂದರು.

ರೈತ ಮುಖಂಡ ಹೆಗ್ಗವಾಡಿಪುರ ಮಹೇಶ್ ಕುಮಾರ್ ಮಾತನಾಡಿ, ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಾಸಮಾಲಿ ಪಾಟೀಲ್ ಪುಷ್ಪಾರ್ಚನೆ ಮಾಡಲಿದ್ದಾರೆ. ಕಾಯಾಧ್ಯಕ್ಷ ಎ.ಎಂ.ಮಹೇಶ್‌ ಪ್ರಭು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಭಾಗೀಯ ಕಾರ್ಯದರ್ಶಿ ಜ್ಯೋತಿಗೌಡನ ಪುರ ಸಿದ್ಧರಾಜು ಪ್ರಾಸಾವಿಕವಾಗಿ ಮಾತನಾಡಲಿದ್ದಾರೆ. ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ರೈತರು, ಪದಾಧಿಕಾರಿಗಳು, ಮಹಿಳೆಯರು, ಯುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ADVERTISEMENT

ರೈತ ಚೇತನ ಪ್ರೊ.ನಂಜುಂಡಸ್ವಾಮಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು, ದೇಶದ ಕೃಷಿ ಕ್ಷೇತ್ರದ ದಿಕ್ಕು ಬದಲಿಸಿದ ನಂಜುಂಡಸ್ವಾಮಿ ಅವರ ಕೊಡುಗೆಯನ್ನು ಗುರುತಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ರಾಜ್ಯ ಸರ್ಕಾರ ಪಠ್ಯಪುಸ್ತಕಗಳಲ್ಲಿ ನಂಜುಂಡಸ್ವಾಮಿ ಅವರ ಜೀವನ ಚರಿತ್ರೆಯನ್ನು ಸೇರಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಯುವ ಘಟಕದ ರಾಜ್ಯ ಸಂಚಾಲಕ ಜ್ಯೋತಿಗೌಡನಪುರ ಯಶವಂತ್‌, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಯ್ಯನಪುರ ಶಿವಣ್ಣ, ಗುಂಡ್ಲುಪೇಟೆ ಉಪಾಧ್ಯಕ್ಷ ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.