ಜಾನುವಾರು
ಚಾಮರಾಜನಗರ: ‘ಹುಲಿಗಳ ಸಾವಿನ ವಿಚಾರವನ್ನೇ ನೆಪವಾಗಿಸಿಕೊಂಡು ಅರಣ್ಯಕ್ಕೆ ಜಾನುವಾರುಗಳ ಪ್ರವೇಶ ನಿರ್ಬಂಧಿಸಲು ಮುಂದಾಗಿರುವ ರಾಜ್ಯ ಸರ್ಕಾರ ಕಾಡಂಚಿನ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದೆ’ ಎಂದು ರೈತರು ಹಾಗೂ ಅರಣ್ಯವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ರೈತರು ಹಾಗೂ ಕಾಡು ಜೊತೆಯಾಗಿ ಬೆಳೆಯಬೇಕೇ ಹೊರತು ನಿರ್ಬಂಧ ವಿಧಿಸುವುದು ಸಲ್ಲದು’ ಎಂದು ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
‘ಕಾಡಂಚಿನ ರೈತರು ಜೀವನೋಪಾಯಕ್ಕಾಗಿ ಕುರಿ, ಮೇಕೆ, ದನ ಸಾಕುತ್ತಿದ್ದಾರೆ. ತುಂಡು ಭೂಮಿಯಲ್ಲಿ ಜಾನುವಾರುಗಳಿಗೆ ಮೇವು ಒದಗಿಸಲಾಗದೆ ಕಾಡಿನೊಳಗೆ ಮೇಯಿಸುವುದು ರೂಢಿ. ಅರಣ್ಯದೊಳಗೆ ಜಾನುವಾರುಗಳ ಪ್ರವೇಶ ನಿರ್ಬಂಧಿಸಿದರೆ ದನ–ಕರುಗಳು ಮೇವಿಲ್ಲದೆ ಸಾಯಬೇಕಾಗುತ್ತದೆ’ ಎಂದಿದ್ದಾರೆ.
‘ಅರಣ್ಯ ಉಳಿಸುವ ಕಾಳಜಿ ಇದ್ದರೆ ಸರ್ಕಾರ ಪ್ರಾಣಿ ಬೇಟೆ ಹಾಗೂ ಮರಗಳ ಕಳ್ಳಸಾಗಾಟ ತಡೆಯಲಿ. ‘ಪರಿಸರ ವಾದಿ’ಗಳ ಮುಖವಾಡ ಹಾಕಿಕೊಂಡವರ ಒತ್ತಡಕ್ಕೆ ಮಣಿದು ರೈತರ ಜೀವನದ ಜೊತೆ ಚೆಲ್ಲಾಟವಾಡಬಾರದು’ ಎಂದಿದ್ದಾರೆ.
‘ಹೂಗ್ಯಂ ವಲಯದಲ್ಲಿ ಇತ್ತೀಚೆಗೆ ಐದು ಹುಲಿಗಳ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಚಿವ ಈಶ್ವರ ಖಂಡ್ರೆ ನೇರ ಹೊಣೆಗಾರರು. ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಸ್ಥಳೀಯ ರೈತರ ಮೇಲೆ ಗದಾಪ್ರಹಾರ ಮಾಡುತ್ತಿದೆ’ ಎಂದು ರೈತ ಮಾದೇಶ್ ಹೇಳಿದರು.
‘ತಮಿಳುನಾಡಿನಿಂದ ಅಕ್ರಮವಾಗಿ ಜಾನುವಾರುಗಳು ರಾಜ್ಯದ ಕಾಡಿನೊಳಗೆ ಪ್ರವೇಶಿಸುತ್ತಿದ್ದರೆ ಕಡಿವಾಣ ಹಾಕಲಿ, ಗಡಿ ಭಾಗದಲ್ಲಿ ಬೇಲಿ ಅಳವಡಿಕೆ ಮಾಡಲಿ, ಬದಲಾಗಿ ಕಾಡಿನೊಳಗೆ ಸ್ಥಳೀಯರ ಜಾನುವಾರುಗಳ ಪ್ರವೇಶಕ್ಕೆ ನಿರ್ಬಂಧ ಹೇರಬಾರದು’ ಎಂದು ರಂಗೇಗೌಡ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.