
ಚಾಮರಾಜನಗರ: ಕೊಳ್ಳೇಗಾಲದ ಮೋಳೆ ಗ್ರಾಮದ ಪ್ರಭುಸ್ವಾಮಿ, ನಾಗರಾಜಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ಸುದ್ದಿ ಸುಳ್ಳು ಎಂದು ಗ್ರಾಮದ ಮುಖಂಡ ಪರಮೇಶ್ ಸ್ಪಷ್ಟಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋಳೆ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಊರಿನ ಯಜಮಾನರು ಸಾಮಾಜಿಕ ಬಹಿಷ್ಕಾರ ಹಾಕಿ ಕಿರುಕುಳ ನೀಡುತ್ತಿದ್ದಾರೆ ಎಂದು ಈಚೆಗೆ ಮೋಳೆ ಗ್ರಾಮದ ಪ್ರಭುಸ್ವಾಮಿ ಹಾಗೂ ನಾಗರಾಜಮ್ಮ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಆರೋಪದಲ್ಲಿ ಹುರುಳಿಲ್ಲ ಎಂದರು.
ಉಪ್ಪಾರ ಸಮಾಜದ ಘನತೆಗೆ ಕುಂದು ತರುವ ಕೆಲಸ ಇದಾಗಿದ್ದು ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಪದ್ಧತಿ ಅಸ್ತಿತ್ವದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆರೋಪ ಮಾಡಿರುವ ಪ್ರಭುಸ್ವಾಮಿ ಗ್ರಾಮಸ್ಥರ ಜೊತೆ ಹೊಂದಾಣಿಕೆಯಲ್ಲಿ ಇಲ್ಲ, ಗ್ರಾಮದಲ್ಲಿ ನಡೆಯುವ ಎಲ್ಲ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಅವರಿಂದ ಗ್ರಾಮದ ದೇವರಿಗೆ ಪೂಜೆಯನ್ನೂ ಪಡೆಯಲಾಗುತ್ತಿದೆ. ಅವರೂ ಗ್ರಾಮಸ್ಥರೊಂದಿಗೆ ಸರಿಯಾಗಿ ಬೆರೆಯುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿನೀಡಿ ಪರಿಶೀಲಿಸಿ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪರಮೇಶ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮದ ಕೃಷ್ಣ, ಬಸವರಾಜು, ನಟರಾಜು, ಧರಣೀಶ್, ಚಂದ್ರು, ನಂಜುಂಡಸ್ವಾಮಿ, ಪ್ರಭುಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.