ADVERTISEMENT

ಚಾಮರಾಜನಗರ: ವಾರ್ಡ್‌ ರಸ್ತೆ ಕಿರಿದು, ಕಸದ ಸಮಸ್ಯೆ ಹಿರಿದು

11ನೇ ವಾರ್ಡ್‌ನಲ್ಲಿ ಕಾಣದ ಅಭಿವೃದ್ಧಿ, ನಗರೋತ್ಥಾನದ ಅಡಿ ಪ್ರಗತಿಯ ನಿರೀಕ್ಷೆ

ಸೂರ್ಯನಾರಾಯಣ ವಿ
Published 22 ಜೂನ್ 2022, 19:30 IST
Last Updated 22 ಜೂನ್ 2022, 19:30 IST
ವಾರ್ಡ್‌ನ ಗಲ್ಲಿ ರಸ್ತೆಯೊಂದರ ಬದಿ ರಾಶಿ ಬಿದ್ದಿರುವ ಕಸದಲ್ಲಿ ಮೇವನ್ನು ಹುಡುಕುತ್ತಿರುವ ಹಸುಗಳು
ವಾರ್ಡ್‌ನ ಗಲ್ಲಿ ರಸ್ತೆಯೊಂದರ ಬದಿ ರಾಶಿ ಬಿದ್ದಿರುವ ಕಸದಲ್ಲಿ ಮೇವನ್ನು ಹುಡುಕುತ್ತಿರುವ ಹಸುಗಳು   

ಚಾಮರಾಜನಗರ: ಇಲ್ಲಿನ ನಗರಸಭೆಯ 11ನೇ ವಾರ್ಡ್‌ ಚಾಮರಾಜನಗರದ ಹಳೆಯ ಜನವಸತಿ ಪ್ರದೇಶಗಳಲ್ಲೊಂದು. ಈ ವಾರ್ಡ್‌ನಲ್ಲಿ ಇರುವುದು ಮೂರೇ ಬೀದಿಗಳು. 31 ವಾರ್ಡ್‌ಗಳ ಪೈಕಿ ಅತ್ಯಂತ ಸಣ್ಣ ವಾರ್ಡ್‌. ಹಾಗಿದ್ದರೂ ಅಭಿವೃದ್ಧಿಯಾಗಿಲ್ಲ.

ದೇವಾಂಗ, ಜಟ್ಟಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ವಾರ್ಡ್‌ನಲ್ಲಿ ಸುಮಾರು 600 ಮನೆಗಳಿವೆ. 1,500 ಮತದಾರರಿದ್ದಾರೆ.

ಈ ವಾರ್ಡ್‌ಗೆ ಸಂಪರ್ಕ ಕಲ್ಪಿಸುವ ಬೀದಿಗಳು ಒಂದು ಬದಿಯಲ್ಲಿ ದೊಡ್ಡಂ ಗಡಿ ಬೀದಿಯಿಂದ ಆರಂಭವಾದರೆ, ಇನ್ನೊಂದು ಬದಿ ಡೀವಿಯೇಷನ್‌ ರಸ್ತೆಯಲ್ಲಿ ಆರಂಭವಾಗುತ್ತದೆ.

ADVERTISEMENT

ಎರಡು ಪ್ರಮುಖ ಬೀದಿಗಳ ನಡುವೆ ಇರುವ ಈ ವಾರ್ಡ್‌ನಲ್ಲಿ ಕಣ್ಣಿಗೆ ಕಾಣಿಸುವಂತಹ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಬೀದಿಗಳು ಕಿರಿದಾಗಿದ್ದು ಕಿತ್ತು ಬಂದಿವೆ. ಕಸದ ರಾಶಿ ಎಲ್ಲೆಂದರಲ್ಲಿ ಬಿದ್ದಿದೆ. ಸ್ವಚ್ಛತೆ ಕಾಣುವುದಿಲ್ಲ. ಹಲವು ಮನೆಗಳು ಪಾಳು ಬಿದ್ದಿವೆ. ಅವು ಕ್ರಿಮಿ ಕೀಟ, ವಿಷ ಜಂತುಗಳ ಆಶ್ರಯತಾಣವಾಗಿದೆ.

ಸ್ಥಳೀಯವಾಗಿ ಕೊಳವೆ ಬಾವಿಗಳನ್ನು ಕೊರೆದಿರುವುದರಿಂದ, ನೀರಿನ ಸಮಸ್ಯೆ ಇಲ್ಲಿನ ನಿವಾಸಿಗಳನ್ನು ಅಷ್ಟಾಗಿ ಬಾಧಿಸುತ್ತಿಲ್ಲ.

ಕಿರಿದಾದ ರಸ್ತೆ: ವಾರ್ಡ್‌ನಲ್ಲಿ ಓಡಾಡುವುದಕ್ಕೂ ಕಷ್ಟ ಪಡಬೇಕು. ಸ್ಥಳೀಯರನ್ನು ಬಿಟ್ಟರೆ ಬೇರೆ ಯಾರೂ ಇಲ್ಲಿ ಓಡಾಡುವುದಿಲ್ಲ. ರಸ್ತೆಯೂ ಅದೇ ರೀತಿ ಇದೆ. ದ್ವಿಚಕ್ರ ವಾಹನಗಳಷ್ಟೇ ಇಲ್ಲಿ ಸಲೀಸಾಗಿ ಹೋಗಬಹುದು. ಕಷ್ಟದಲ್ಲಿ ನಾಲ್ಕು ಚಕ್ರಗಳ ವಾಹನ ಸಂಚರಿಸಬಹುದು. ರಸ್ತೆ ಬದಿಯ ಚರಂಡಿ, ಕಸದ ರಾಶಿಗಳ ಕಾರಣಕ್ಕೆ ರಸ್ತೆಯ ಹಲವು ಕಡೆಗಳಲ್ಲಿ ಆಟೊ ಸಲೀಸಾಗಿ ಹೋಗುವಷ್ಟೇ ಜಾಗ ಇದೆ.

ರಸ್ತೆಗೆ ಹೊಂದಿಕೊಂಡೆ ಎರಡೂ ಬದಿಯಲ್ಲಿ ಮನೆಗಳಿರುವುದರಿಂದ ಕಿರಿದಾಗಿರುವ ರಸ್ತೆಯನ್ನು ವಿಸ್ತರಿಸು ವುದು ಕಷ್ಟ. ಆದರೆ, ಇರುವ ರಸ್ತೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಅವಕಾಶ ಇದೆ. ಆದರೆ, ಆ ಕೆಲಸ ನಡೆದಿಲ್ಲ ಎಂದು ಹೇಳುತ್ತಾರೆ ಸ್ಥಳೀಯರು.

‘ಕಸ ಸಂಗ್ರಹಕ್ಕೆ ಪೌರ ಕಾರ್ಮಿಕರು ಬರುತ್ತಾರೆ. ಹಾಗಿದ್ದರೂ, ಬೀದಿ ಬದಿಯಲ್ಲಿ ಕಸಗಳ ರಾಶಿಯೇ ಇವೆ. ಅಲ್ಲಿಂದ ತೆಗೆಯುವ ಕೆಲಸ ನಡೆಯುತ್ತಿಲ್ಲ. ಚರಂಡಿ ಸ್ವಚ್ಛತೆ ನಿಯಮಿತವಾಗಿ ಆಗುತ್ತಿಲ್ಲ. ಕಾರ್ಮಿಕರು 20 ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ಬರುತ್ತಾರೆ’ ಎಂದು ಸ್ಥಳೀಯ ನಿವಾಸಿ ಕಾಂತರಾಜು ಅವರು ತಿಳಿಸಿದರು.

‘ಹಲವು ಮನೆಗಳಲ್ಲಿ ಜನರಿಲ್ಲ. ಅವುಗಳೆಲ್ಲ ಪಾಳು ಬಿದ್ದಿವೆ. ಮನೆಯ ಅವಶೇಷಗಳನ್ನು ಸ್ವಚ್ಛಗೊಳಿಸುವುದಕ್ಕೆ ಅವುಗಳು ಮಾಲೀಕರಿಗೆ ನಗರಸಭೆ ಅಧಿಕಾರಿಗಳು ಸೂಚನೆ ನೀಡಬೇಕು’ ಎಂದು ಹೇಳುತ್ತಾರೆ ಇಲ್ಲಿನ ನಿವಾಸಿಗಳು.

ಜನ ಸಹಕರಿಸಬೇಕು: ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾರ್ಡ್‌ ಸದಸ್ಯ ಮಂಜುನಾಥ್‌ ಅವರು, ‘ವಾರ್ಡ್‌ನ ಒಂದು ಬೀದಿಯಲ್ಲಿ ನೀರಿನ ಕೊರತೆ ಇತ್ತು. ಕೊಳವೆ ಬಾವಿ ಕೊರೆಸಿ ನೀರು ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಮನೆ ಮನೆಗಳಿಂದ ಕಸ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಹಾಗಿದ್ದರೂ, ಕೆಲವು ಮನೆಯವರು, ಅಂಗಡಿಯ ಮಾಲೀಕರು ಕಸವನ್ನು ರಸ್ತೆ ಬದಿಯಲ್ಲಿ ಹಾಕುತ್ತಿದ್ದಾರೆ. ಜನರು ರಸ್ತೆಯಲ್ಲಿ ಎಸೆಯುವುದನ್ನು ಬಿಟ್ಟು, ಮನೆ ಮನೆಯಿಂದ ಸಂಗ್ರಹಿಸುವ ಸಂದರ್ಭದಲ್ಲಿ ನೀಡಬೇಕು’ ಎಂದು ಹೇಳಿದರು.

‘ಇನ್ನಷ್ಟು ಅಭಿವೃದ್ಧಿಯಾಗಬೇಕು’

‘ನಗರದ ಅತ್ಯಂತ ಹಳೆಯ ವಾರ್ಡ್‌ ಇದು. ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಒಳಚರಂಡಿ ವ್ಯವಸ್ಥೆ ಇದೆ. ಆದರೆ ಬಹುತೇಕ ಮನೆಗಳು ತಮ್ಮ ಮನೆಯ ಶೌಚಾಲಯ, ಸ್ನಾನಗೃಹದ ಸಂಪ‍ರ್ಕವನ್ನು ಒಳಚರಂಡಿಗೆ ನೀಡಿಲ್ಲ. ಮನೆಯವರೇ ಸ್ವಂತ ಖರ್ಚಿನಿಂದ ಸಂಪರ್ಕ ಕೊಡಿಸಬೇಕಾದರೆ ₹ 8,000 ದಿಂದ ₹ 10 ಸಾವಿರದವರೆಗೂ ಖರ್ಚಾಗುತ್ತದೆ. ಈಗ ಮನೆಯವರು ತಮ್ಮ ಮನೆಯಿಂದ ದೂರದಲ್ಲಿರುವ ಮ್ಯಾನ್‌ಹೋಲ್‌ವರೆಗೂ ಪೈಪ್‌ ಹಾಕಿ ಸಂಪರ್ಕ ಕಲ್ಪಿಸಬೇಕು. ಇದು ದುಬಾರಿ. ನಗರಸಭೆಯು ಅಲ್ಲಲ್ಲಿ ಚೇಂಬರ್‌ಗಳನ್ನು ನಿರ್ಮಿಸಿ ಅಲ್ಲಿಗೆ ಸಂಪರ್ಕ ಕಲ್ಪಿಸಲು ವ್ಯವಸ್ಥೆ ಮಾಡಬೇಕು’ ಎಂದು ಕಾಂತರಾಜು ಅವರು ಹೇಳಿದರು.

----

ವಾರ್ಡ್‌ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆ ಅಡಿಯಲ್ಲಿ ₹70 ಲಕ್ಷ ಅನುದಾನ ಸಿಗಲಿದೆ. ಬಹುತೇಕ ಎಲ್ಲ ಕೆಲಸಗಳೂ ಆಗಲಿವೆ

-ಮಂಜುನಾಥ್‌, 11ನೇ ವಾರ್ಡ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.