ಮಹದೇಶ್ವರ ಬೆಟ್ಟ: ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಭೀಮನ ಅಮಾವಾಸ್ಯೆಯ ಪ್ರಯುಕ್ತ ನಡೆಯುತ್ತಿರುವ ಎಣ್ಣೆ ಮಜ್ಜನ ಸೇವೆ ಕಣ್ತುಂಬಿಕೊಳ್ಳಲು ಬುಧವಾರ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ನುಸುಕಿನ ವೇಳೆಗೆ ಮಾದೇಶ್ವರ ಸ್ವಾಮಿ ಸನ್ನಿಧಿಯ ಗರ್ಭ ಗುಡಿಯನ್ನು ಹಲ ಬಗೆಯ ಫಲಪುಷ್ಪಗಳಿಂದ ಶೃಂಗರಿಸಲಾಗಿತ್ತು. ಮಾದೇಶ್ವರ ಸ್ವಾಮಿಗೆ ಮಹಾ ಮಂಗಳಾರತಿ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಗಂಧಾಭಿಷೇಕ, ಕ್ಷೀರಾಭಿಷೇಕ, ಕುಂಕುಮಾಭಿಷೇಕ ನೆರವೇರಿಸಿ, ಎಣ್ಣೆ ಮಜ್ಜನ ಸೇವೆ ಮಾಡಲಾಯಿತು. ನಂತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಧಾರ್ಮಿಕ ಪವಾಡ ಪುರುಷನನ್ನು ಕಾಣಲು ನೆರೆಯ ತಮಿಳುನಾಡಿನಿಂದಲೂ ಸಾವಿರಾರು ಭಕ್ತಾದಿಗಳು ಬಂದಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಸುರಿದ ತುಂತುರು ಮಳೆಯನ್ನು ಲೆಕ್ಕಿಸದೆ ಉರುಳು ಸೇವೆ, ಪಂಜಿನ ಸೇವೆ, ದೂಪದ ಸೇವೆ, ರುಧ್ರಾಕ್ಷಿ ಮಂಟಪ, ಬಸವ ವಾಹನ, ಹುಲಿ ವಾಹನ, ಬೆಳ್ಳಿ ರಥೋತ್ಸವ ಹಾಗೂ ಚಿನ್ನದ ರಥೋತ್ಸವಗಳಲ್ಲಿ ಪಾಲ್ಗೊಂಡರು.
ಧರ್ಮ ದರ್ಶನವಲ್ಲದೆ, ಅಂಗವಿಕಲರು ಮತ್ತು ವೃದ್ಧರಿಗೆ ವಿಶೇಷ ಸರತಿ ಸಾಲಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ₹200, ₹500 ಪಾವತಿಸಿ ವಿಶೇಷ ಸಾಲಿನಲ್ಲಿ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.
ಭಕ್ತರಿಗೆ ನಿರಂತರ ಅನ್ನ ದಾಸೋಹ, ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಪ್ರಾಧಿಕಾರದ ವತಿಯಿಂದ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.