ADVERTISEMENT

ಚಾಮರಾಜನಗರ: ತುರ್ತು ಓಡಾಟ, ಸಂಬಂಧಿಕರ ಭೇಟಿಗೆ ಕಷ್ಟ

ಅನ್‌ಲಾಕ್‌ ಅವಧಿಯಲ್ಲೂ ಮುಕ್ತ ಸಂಚಾರಕ್ಕೆ ತೆರೆಯದ ಅಂತರರಾಜ್ಯ ಗಡಿ

ಮಲ್ಲೇಶ ಎಂ.
Published 11 ಜೂನ್ 2020, 15:26 IST
Last Updated 11 ಜೂನ್ 2020, 15:26 IST
ಪುಣಜನೂರು ಚೆಕ್‌ಪೋಸ್ಟ್‌ ಸಂಗ್ರಹ ಚಿತ್ರ
ಪುಣಜನೂರು ಚೆಕ್‌ಪೋಸ್ಟ್‌ ಸಂಗ್ರಹ ಚಿತ್ರ   

ಗುಂಡ್ಲುಪೇಟೆ: ಕೋವಿಡ್ 19 ಕಾರಣಕ್ಕೆ ಮುಚ್ಚಲಾಗಿದ್ದ ಅಂತರರಾಜ್ಯ ಗಡಿಗಳು, ಅನ್‌ಲಾಕ್‌ನ ಮೊದಲ ಹಂತದಲ್ಲೂ ಇನ್ನೂ ಸಾರ್ವಜನಿಕರ ಮುಕ್ತ ಓಡಾಟಕ್ಕೆ ತೆರೆಯದಿರುವುದರಿಂದ ತಾಲ್ಲೂಕಿನ ಜನರ ಕೊಡು–ಕೊಳ್ಳು ವ್ಯವಹಾರ, ಸಂಬಂಧಿಕರ ಭೇಟಿ, ತುರ್ತು ಸಂದರ್ಭದ ಓಡಾಟಕ್ಕೂ ತೊಂದರೆಯಾಗುತ್ತಿದೆ.

ತಾಲ್ಲೂಕಿನ ಅನೇಕ ಮಂದಿತಮಿಳುನಾಡಿನ ನೀಲಗಿರಿ ಜಿಲ್ಲೆ (ಊಟಿ) ಹಾಗೂ ಕೇರಳದ ವಯನಾನಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಅಲ್ಲಿಯೂ ಗಮನಾರ್ಹ ಪ್ರಮಾಣದಲ್ಲಿ ಕನ್ನಡಿಗರಿದ್ದಾರೆ. ಎರಡು ಕಡೆಗಳಲ್ಲಿ ಸಂಬಂಧಿಕರು ಇದ್ದಾರೆ.

ಅಲ್ಲಿನ ಯುವಕರು ತಾಲ್ಲೂಕಿನ ಯುವತಿಯರನ್ನು ಮದುವೆಯಾಗುವುದು, ಇಲ್ಲಿನ ವರನಿಗೆ ಅಲ್ಲಿಂದ ವಧುವನ್ನು ತರುತ್ತಾರೆ. ಕೋವಿಡ್‌ –19 ಕಾರಣಕ್ಕೆ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ ಮೂರು ತಿಂಗಳುಗಳಿಂದ ತಾಲ್ಲೂಕಿನ ಮಂದಿ ತಮಿಳುನಾಡು ಹಾಗೂ ಕೇರಳದಲ್ಲಿ ಇರುವ ಸಂಬಂಧಿಕರ ಮನೆಗಳಿಗೆ ಹೋಗಿಲ್ಲ. ಅಲ್ಲಿನವರಿಗೂ ಇಲ್ಲಿಗೆ ಬರಲಾಗುತ್ತಿಲ್ಲ. ಸದ್ಯ ಕೇರಳದಿಂದ ಬರುವುದಕ್ಕೆ ಅವಕಾಶ ಇದೆಯಾದರೂ, ತಮಿಳುನಾಡಿನಿಂದ ಬಂದವರಿಗೆ ಇಲ್ಲಿ ಕ್ವಾರಂಟೈನ್‌ ಮಾಡಲಾಗುತ್ತಿದೆ.

ADVERTISEMENT

ತಮಿಳುನಾಡಿನ ಗೂಡಲೂರು, ಊಟಿಯ ಅನೇಕ ಕನ್ನಡಿಗರು ತಮ್ಮ ಮಕ್ಕಳನ್ನು ತಾಲ್ಲೂಕಿನ ಶಾಲೆಗಳಲ್ಲಿ ವ್ಯಾಸಂಗ ಮಾಡಿಸುತ್ತಿದ್ದಾರೆ. ಅನೇಕರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನೆಲೆಸಿದ್ದಾರೆ. ಸಾರಿಗೆ ವ್ಯವಸ್ಥೆ ಇರುವಾಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡುತ್ತಿದ್ದರು. ಇದೀಗ ಲಾಕ್ ಡೌನ್ ಆದಾಗಿನಿಂದ ಅನೇಕ ಮನೆಗಳ ಬಾಗಿಲು ಮುಚ್ಚಿದೆ.

ನೋಂದಣಿ ಕಡ್ಡಾಯ: ಹೊರ ರಾಜ್ಯಗಳಿಂದ ಜಿಲ್ಲೆಗೆ ಬರಬೇಕಾದರೆ, ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯ. ತಮಿಳುನಾಡಿನಿಂದ ಬರುವವರು ಕಡ್ಡಾಯ ಕ್ವಾರಂಟೈನ್‌ಗೂ ಒಳಗಾಗಬೇಕು.

ತಮಿಳುನಾಡಿನಿಂದ ಚಾಮರಾಜನಗರಕ್ಕೆ ಪ್ರವೇಶಿಸಬೇಕಾದರೆ, ಪೋರ್ಟಲ್‌ನಲ್ಲಿ ಪುಣಜನೂರು ಚೆಕ್‌ಪೋಸ್ಟ್‌ ಮಾತ್ರ ತೋರಿಸುತ್ತದೆ. ಊಟಿ, ಗೂಡಲೂರು ಭಾಗದವರು ಜಿಲ್ಲೆಗೆ ಬರಬೇಕಾದರೆ ಸತ್ಯಮಂಗಲವಾಗಿ ಸುತ್ತಿಕೊಂಡು ಬರಬೇಕು.

‘ಊಟಿಯ ಹುಡುಗಿಯನ್ನು ಮದುವೆಯಾಗಿದ್ದ ವರ್ಷದ ನಂತರ ಬಾಣಂತನಕ್ಕೆ ಕಳುಹಿಸಲಾಗಿತ್ತು. ಇದೀಗ ಮಗುವಿಗೆ ವರ್ಷವಾಗುತ್ತಿದೆ. ಮಗುವನ್ನು ತಾಲ್ಲೂಕಿನಲ್ಲಿರುವ ನಮ್ಮ ಮನೆಗೆ ಕರೆದುಕೊಂಡು ಬರಬೇಕು. ಆದರೆ ಗಡಿಯಲ್ಲಿ ಬಿಡುತ್ತಿಲ್ಲ. ಸತ್ಯಮಂಗಲ ಮೂಲಕವೇ ಬರಬೇಕು’ ಎಂದು ಕುಮಾರ್ ಎಂಬುವವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ವಾರಂಟೈನ್‌ ಭಯ, ಬಾರದ ವ್ಯಾಪಾರಿಗಳು

‘ಕೇರಳ, ತಮಿಳುನಾಡಿನ ಅನೇಕರು ತಾಲ್ಲೂಕಿನಲ್ಲಿ ಟೀ ಅಂಗಡಿ, ಹೋಟೆಲ್‌ಗಳನ್ನು ಮಾಡಿದ್ದರು, ಅವರು ಬರಲಾಗದೆ ಅಂಗಡಿಗಳೆಲ್ಲ ಬಂದ್ ಆಗಿದೆ. ಆಕಸ್ಮಿಕವಾಗಿ ಬಂದರೆ ಗ್ರಾಮದ ಜನರು ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಗೆ ಹೇಳಿ ಕ್ವಾರೈಂಟನ್ ಮಾಡಿಸುತ್ತಾರೆ ಎಂಬ ಭಯದಿಂದ ಸಂಚಾರ ಮಾಡಲು ಹೆದರುತ್ತಿದ್ದಾರೆ. ಜೊತೆಗೆ ಗಡಿ ಭಾಗದಲ್ಲಿ ವಾಹನಗಳನ್ನು ಬಿಡುತ್ತಿಲ್ಲ , ಸುಮ್ಮನೆ ಬಾಡಿಗೆ ಕಟ್ಟಬೇಕು’ ಎಂದು ವ್ಯಾಪಾರಿ ಕಣ್ಣನ್ ತಿಳಿಸಿದರು.

‘ತಾಲ್ಲೂಕಿನಿಂದ ನೂರಕ್ಕೂ ಹೆಚ್ಚಿನ ವ್ಯಾಪಾರಿಗಳು ಇಲ್ಲಿಂದ ಸೊಪ್ಪು ತರಕಾರಿಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಮಾರಾಟ ಮಾಡುತ್ತಿದ್ದರು. ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಎಲ್ಲವೂ ಬಂದ್‌ ಆಗಿದೆ. ಹೇಗೂ ನಮ್ಮ ತುತ್ತಿನ ಚೀಲ ತುಂಬುತ್ತಿತ್ತು. ಕೋವಿಡ್‌ನಿಂದಾಗಿ ಅದಕ್ಕೂ ಮಣ್ಣು ಬಿತ್ತು’ ಎಂದು ಸೊಪ್ಪುಗಳನ್ನು ಮಾರಾಟ ಮಾಡುತ್ತಿದ್ದ ಸುಂದರಮ್ಮ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.