ADVERTISEMENT

ಚಾಮರಾಜನಗರ: ಪ್ರವಾಸೋದ್ಯಮ ಉತ್ತೇಜನಕ್ಕೆ ವಿಡಿಯೊ

ಜಿಲ್ಲಾಡಳಿತದಿಂದ ಚೆಲುವ ಚಾಮರಾಜನಗರ ಅಭಿಯಾನ, ಶೀಘ್ರ ವಿಡಿಯೊ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 12:58 IST
Last Updated 11 ನವೆಂಬರ್ 2020, 12:58 IST
ಚೆಲುವ ಚಾಮರಾಜನಗರ ಟೀಸರ್‌ ಚಿತ್ರ
ಚೆಲುವ ಚಾಮರಾಜನಗರ ಟೀಸರ್‌ ಚಿತ್ರ   

ಚಾಮರಾಜನಗರ: ಜಿಲ್ಲಾಡಳಿತ ಆರಂಭಿಸಿರುವ ಚೆಲುವ ಚಾಮರಾಜನಗರ ಅಭಿಯಾನದ ಅಡಿಯಲ್ಲಿ ಜಿಲ್ಲೆಯ ಪ್ರವಾಸಿತಾಣಗಳು, ಧಾರ್ಮಿಕ ಕೇಂದ್ರಗಳು ಹಾಗೂ ಜಾನಪದ ಸಂಸ್ಕೃತಿಯ ಕುರಿತಾಗಿ ಪ್ರಚಾರ ವಿಡಿಯೊವನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

‘4.15 ನಿಮಿಷಗಳ ವಿಡಿಯೊದಲ್ಲಿ ಜಿಲ್ಲೆಯ ರಾಯಭಾರಿಯಾಗಿರುವ ಖ್ಯಾತ ಚಿತ್ರನಟ ಪುನೀತ್‌ ರಾಜ್‌ಕುಮಾರ್‌ ಅವರು ಸಂದೇಶ ನೀಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು.

ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ 28 ಸೆಕೆಂಡುಗಳ ಟೀಸರ್‌ ಅನ್ನು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದರು.

ADVERTISEMENT

ವಿಡಿಯೊ ಅಧಿಕೃತವಾಗಿ ಬಿಡುಗಡೆಯಾಗುವ ಮೊದಲೇ4.18 ನಿಮಿಷಗಳ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಜಿಲ್ಲಾಡಳಿತದ ಹೆಸರು ಹಾಗೂ ಪ್ರವಾಸಿತಾಣಗಳ ಸುಂದರ ದೃಶ್ಯಾವಳಿಗಳಿವೆ. ಜಿಲ್ಲಾಡಳಿತ ಸಿದ್ಧಪಡಿಸಿರುವ ವಿಡಿಯೊ ಇದುವೆಯೇ ಎಂಬುದು ದೃಢಪಟ್ಟಿಲ್ಲ.

ಶೀಘ್ರ ಬಿಡುಗಡೆ: ‘ಚಾಮರಾಜನಗರ ಜಿಲ್ಲೆಯು ಪ್ರಕೃತಿ ಹಾಗೂ ಸಂಸ್ಕೃತಿಯ ಅದ್ಭುತ ಸಮಾಗಮ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇದೆ. ಪ್ರಾಕೃತಿಕ ಸಂಪತ್ತು, ಜಾನಪದ ಸಿರಿಯನ್ನು ತೋರಿಸುವ ಹಾಗೂ ಬಹಳಷ್ಟು ಜನರ ಕಣ್ಣಿಗೆ ಬೀಳದ ಅಸೀಮ ಚೆಲುವನ್ನು ತೋರಿಸುವ ವಿಡಿಯೊವನ್ನು ಸಿದ್ಧಪಡಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಹೇಳಿದರು.

‘ನಟ ಪುನೀತ್‌ ರಾಜ್‌ಕುಮಾರ್‌ ಅವರು ನಮ್ಮ ಮನವಿಗೆ ಸ್ಪಂದಿಸಿ ವಿಡಿಯೊದಲ್ಲಿ ಸಂದೇಶ ನೀಡಿದ್ದಾರೆ. ಅದಕ್ಕಾಗಿ ಅವರು ಒಂದು ರೂಪಾಯಿ ಸಂಭಾವನೆಯನ್ನು ಪಡೆದಿಲ್ಲ. ಜಿಲ್ಲಾಡಳಿತ ಅವರಿಗೆ ಕೃತಜ್ಞವಾಗಿದೆ’ ಎಂದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇದೇ 25 ಅಥವಾ 26ರಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಸಾಧ್ಯತೆ ಇದೆ. ಅವರಿಂದ ವಿಡಿಯೊ ಬಿಡುಗಡೆ ಮಾಡಿಸಬೇಕು ಎಂಬ ಯೋಚನೆ ಇದೆ. ಅಂದು ಆಗದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆ ಮಾಡಲಿದ್ದಾರೆ. ಸಾಧ್ಯವಾದರೆ ವರ್ಚ್ಯುವಲ್‌ ಕಾರ್ಯಕ್ರಮದಲ್ಲಿ ಭಾಗವಹಿಸುವ ಭರವಸೆಯನ್ನು ಪುನೀತ್‌ ರಾಜ್‌ಕುಮಾರ್‌ ನೀಡಿದ್ದಾರೆ’ ಎಂದು ಡಾ.ಎಂ.ಆರ್.ರವಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.