ADVERTISEMENT

ಕೃಷಿ ಕಾಯ್ದೆ: ಹೋರಾಟಕ್ಕೆ ಶಕ್ತಿ ತುಂಬಿದ್ದ ಗಡಿ ಜಿಲ್ಲೆ ಚಾಮರಾಜನಗರ

ರೈತ, ದಲಿತ, ಪ್ರಗತಿಪರ, ಕಾರ್ಮಿಕ ಸಂಘಟನೆಗಳು, ಕಾಂಗ್ರೆಸ್‌, ಬಿಎಸ್‌ಪಿ, ಎಸ್‌ಡಿಪಿಐನಿಂದಲೂ ತೀವ್ರ ವಿರೋಧ

ಸೂರ್ಯನಾರಾಯಣ ವಿ
Published 20 ನವೆಂಬರ್ 2021, 4:31 IST
Last Updated 20 ನವೆಂಬರ್ 2021, 4:31 IST
ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ನಡೆದಿದ್ದ ರೈತರ ರ‍್ಯಾಲಿಯಲ್ಲಿ ರಾಕೇಶ್‌ ಟಿಕಾಯತ್‌, ಯೋಗೇಂದ್ರ ಯಾದವ್‌ ಅವರೊಂದಿಗೆ ಚುಕ್ಕಿ ನಂಜುಂಡಸ್ವಾಮಿ ಅವರು ಭಾಗವಹಿಸಿದ್ದ ಕ್ಷಣ
ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ನಡೆದಿದ್ದ ರೈತರ ರ‍್ಯಾಲಿಯಲ್ಲಿ ರಾಕೇಶ್‌ ಟಿಕಾಯತ್‌, ಯೋಗೇಂದ್ರ ಯಾದವ್‌ ಅವರೊಂದಿಗೆ ಚುಕ್ಕಿ ನಂಜುಂಡಸ್ವಾಮಿ ಅವರು ಭಾಗವಹಿಸಿದ್ದ ಕ್ಷಣ   

ಚಾಮರಾಜನಗರ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳಾದ ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ–ಸೌಲಭ್ಯ) ಕಾಯ್ದೆ/ಕೃಷಿ ಮಾರುಕಟ್ಟೆ ಕಾಯ್ದೆ (ಎಪಿಎಂಸಿ ಕಾಯ್ದೆ),ಬೆಲೆ ಖಾತರಿ ಒಪ್ಪಂದ ಮತ್ತು ಕೃಷಿ ಸೇವೆಗಳ ( ಸಬಲೀಕರಣ ಮತ್ತು ರಕ್ಷಣೆ) ಕಾಯ್ದೆ ಹಾಗೂಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವದೆಹಲಿಯಲ್ಲಿ ಪ್ರತಿಭಟನೆ ಆರಂಭವಾಗುತ್ತಲೇ ಜಿಲ್ಲೆಯಲ್ಲೂ ಚಳವಳಿ ಶುರುವಾಗಿತ್ತು.

ರೈತ ಸಂಘಟನೆಗಳು ಪ್ರಬಲವಾಗಿರುವ ಗಡಿ ಜಿಲ್ಲೆಯಲ್ಲಿ ಸರ್ಕಾರಗಳ ರೈತ ವಿರೋಧಿ ನಿರ್ಧಾರಗಳ ವಿರುದ್ಧ ಪ್ರತಿಭಟನೆ ನಡೆಯುತ್ತಲೇ ಇರುತ್ತದೆ. ಕೇಂದ್ರ ಸರ್ಕಾರವು ಈ ಮಸೂದೆಗಳನ್ನು ಮಂಡಿಸುವಾಗಲೇ ಇದರ ವಿರುದ್ಧ ರೈತ ಸಂಘಟನೆಗಳು (ರೈತ ಸಂಘದ ಎರಡು ಬಣಗಳು, ಕಬ್ಬು ಬೆಳೆಗಾರರ ಸಂಘ, ರೈತರ ಹಿತರಕ್ಷಣಾ ವೇದಿಕೆ ಇತ್ಯಾದಿ) ಪ್ರತಿಭಟನೆ ನಡೆಸಿದ್ದವು. ಜಿಲ್ಲೆಯಲ್ಲಿ ಪ್ರಬಲವಾಗಿರುವ ದಲಿತ ಹಾಗೂ ಪ್ರಗತಿ ಪರ ಸಂಘಟನೆಗಳು, ರೈತ ಸಂಘಟನೆಗಳ ಹೋರಾಟಕ್ಕೆ ಬೆಂಬಲ ನೀಡಿದ್ದವು.

ಜೊತೆಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಎಸ್‌ಡಿಪಿಐ, ಬಿಎಸ್‌ಪಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ್ದವು. ಕೇಂದ್ರದ ಮಾದರಿಯಲ್ಲಿ ರಾಜ್ಯದಲ್ಲೂ ಎಪಿಎಂಸಿ ಕಾಯ್ದೆ ಜಾರಿಗೆ ತಂದಾಗ ಸಂಘಟನೆಗಳು ಹಾಗೂ ವಿರೋದ ಪಕ್ಷಗಳು ಪ್ರತಿಭಟಿಸಿದ್ದವು.

ADVERTISEMENT

ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ 2020ರ ಸೆ.28ರಂದು ಕರೆ ನೀಡಲಾಗಿದ್ದ ಸ್ವಯಂ ಪ್ರೇರಿತ ಕರ್ನಾಟಕ ಬಂದ್‌ನಲ್ಲಿರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ಸಕ್ರಿಯವಾಗಿ ಭಾಗವಹಿಸಿತ್ತು. ವಿರೋಧ ಪಕ್ಷಗಳೂ ಬಂದ್‌ಗೆ ಬೆಂಬಲ ನೀಡಿದ್ದವು. ಕಾಂಗ್ರೆಸ್‌ ಆಡಳಿತವಿರುವ ಎಪಿಎಂಸಿಗಳು ಕೂಡ ಬಂದ್‌ ಪರವಾಗಿದ್ದವು.

ಕಾಯ್ದೆ ವಿರೋಧಿಸಿ ಪತ್ರಿಕಾಗೋಷ್ಠಿಗಳು,ರಾಷ್ಟ್ರೀಯ ಹೆದ್ದಾರಿ ಚಳವಳಿ, ಜಾಥಾ, ಮೆರವಣಿಗೆ, ತಮಟೆ, ಪೊರಕೆ ಚಳವಳಿ, ಉಪವಾಸ ಸತ್ಯಾಗ್ರಹ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆ, ಹೋರಾಟ ನಡೆದಿದ್ದವು.

ರೈತ ಸಂಘ, ಎಸ್‌ಡಿಪಿಐ ಪದಾಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಕಾಯ್ದೆಗಳ ಬಗ್ಗೆ ಹಾಗೂ ಅದರಿಂದ ರೈತರಿಗೆ ಆಗಲಿರುವ ತೊಂದರೆಗಳ ಬಗ್ಗೆ ಜನರಿಗೆ ತಿಳಿಹೇಳುವ ಪ್ರಯತ್ನವೂ ನಡೆದಿತ್ತು.

ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ರೈತ ಸಂಘದ ಹಲವು ಪ್ರತಿನಿಧಿಗಳು ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಾಗೂ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಕಾಯ್ದೆಗಳನ್ನು ಖಂಡಿಸಿ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಹಲವು ಹೋರಾಟಗಳಲ್ಲೂ ಜಿಲ್ಲೆಯ ರೈತ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಸಾಮಾನ್ಯ ರೈತರು ಭಾಗವಹಿಸಿ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಎಂಎಸ್‌ಪಿ ಕಾಯ್ದೆ ಜಾರಿ ಮಾಡಲಿ

ಮೋದಿ ನಿರ್ಧಾರ ಸ್ವಾಗತಾರ್ಹ. ರೈತರ ಹೋರಾಟಕ್ಕೆ ಮಣಿದಿದ್ದಾರೆ. ಆದರೆ, ನಮ್ಮ ಎಲ್ಲ ಬೇಡಿಕೆಗಳು ಇನ್ನೂ ಈಡೇರಿಲ್ಲ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಪಡಿಸುವ ಕಾಯ್ದೆಯನ್ನು ಜಾರಿಗೆ ತರಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಇದಲ್ಲದೇ, ನಮ್ಮ ರಾಜ್ಯದಲ್ಲೂ ಎಪಿಎಂಸಿ ಕಾಯ್ದೆ ಜಾರಿಗೆ ತರಲಾಗಿದೆ. ಅದನ್ನೂ ವಾಪಸ್‌ ಪಡೆಯಬೇಕು

–ಎಂ.ಮಹೇಶ್‌ ಪ್ರಭು, ರೈತ ಸಂಘ ಮತ್ತು ಹಸಿರು ಸೇನೆಯರಾಜ್ಯ ಉಪಾಧ್ಯಕ್ಷ

₹ 25 ಲಕ್ಷ ಪರಿಹಾರ ಕೊಡಲಿ

ರೈತರ ಹೋರಾಟಕ್ಕೆ ಕೇಂದ್ರ ಸರ್ಕಾರ ತಲೆಬಾಗಿರುವುದು ಸಂತಸ ತಂದಿದೆ. ಮೂರು ಕಾಯ್ದೆಗಳಲ್ಲದೇ, ರೈತ ವಿರೋಧಿಯಾಗಿರುವ ಇತರ ಮಸೂದೆಗಳನ್ನೂ ಕೇಂದ್ರ ಸರ್ಕಾರ ವಾಪಸ್‌ ಪಡೆಯಬೇಕು. ಎಂಎಸ್‌ಪಿ ಕಾಯ್ದೆ ಜಾರಿಗೆ ತರಬೇಕು. ರಾಜ್ಯದಲ್ಲೂ ಎಪಿಎಂಸಿ ಕಾಯ್ದೆ ರದ್ದುಪಡಿಸಬೇಕು. ದೆಹಲಿಯಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ತಲಾ ₹ 25 ಲಕ್ಷ ಪರಿಹಾರ ನೀಡಬೇಕು.

–ಹೊನ್ನೂರು ಪ್ರಕಾಶ್‌, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ (ಕೋಡಿಹಳ್ಳಿ ಚಂದ್ರಶೇಖರ್‌ ಬಣ)

––

ದೇಶದಾದ್ಯಂತ ರೈತರು ಹಾಗೂ ಕಾಂಗ್ರೆಸ್‌ ನಿರಂತರವಾಗಿ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ಮೋದಿ, ಕಾಯ್ದೆಗಳ ವಿರುದ್ಧದ ಜನಾಕ್ರೋಶಕ್ಕೆ ತಲೆಬಾಗಿದ್ದಾರೆ

- ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

––

ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಬೇಕಾಗಿಲ್ಲ. ಪ್ರಧಾನಿ ಮೋದಿ ದೇಶದ ಭದ್ರತೆಗೆ ಗಮನ ನೀಡುವುದರ ಜೊತೆಗೆ ರೈತರ ಸಮಸ್ಯೆಗಳಿಗೂ ಸ್ಪಂದಿಸಿದ್ದಾರೆ

- ಆರ್‌.ಸುಂದರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.