ADVERTISEMENT

ಚಾಮರಾಜನಗರ: ಸರಳ ಸ್ವಾತಂತ್ರ್ಯದಿನ; ತ್ರಿವರ್ಣದ್ವಜಕ್ಕೆ ನಮನ

ಕೋವಿಡ್‌ ನಡುವೆ ಜಿಲ್ಲೆಯಾದ್ಯಂತ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ, ರಾಷ್ಟ್ರ ಸೇನಾನಿಗಳ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 12:35 IST
Last Updated 15 ಆಗಸ್ಟ್ 2021, 12:35 IST
75ನೇ ಸ್ವಾತಂತ್ರ್ಯದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೇರಿದಂತೆ ಗಣ್ಯರು ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು
75ನೇ ಸ್ವಾತಂತ್ರ್ಯದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೇರಿದಂತೆ ಗಣ್ಯರು ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು   

ಚಾಮರಾಜನಗರ: ಜಿಲ್ಲೆಯಾದ್ಯಂತ 75ನೇ ಸ್ವಾತಂತ್ರ್ಯೋತ್ಸವ ದಿನವನ್ನು ಭಾನುವಾರ ಸರಳವಾಗಿ ಸಂಭ್ರಮದಿಂದ ಆಚರಿಸಲಾಯಿತು.

ತ್ರಿವರ್ಣಧ್ವಜ ಆರೋಹಣ ಮಾಡಿ, ಗೌರವ ನಮನ ಸಲ್ಲಿಸಲಾಯಿತು. ಮಹಾತ್ಮ ಗಾಂಧೀಜಿ, ಸಂಗೊಳ್ಳಿ ರಾಯಣ್ಣ,ಅಂಬೇಡ್ಕರ್‌ ಅವರಂತಹ ಸ್ವಾತಂತ್ರ್ಯ ಹೋರಾಟದ ಸೇನಾನಿಗಳಿಗೆ ಪುಷ್ಪ ನಮನ ಸಲ್ಲಿಸಿ, ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಸಾವಿರಾರು ಹೋರಾಟ ಕಲಿಗಳನ್ನು ಸ್ಮರಿಸಲಾಯಿತು.

ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಗಂಣದಲ್ಲಿ ಪ್ರಧಾನ ಕಾರ್ಯಕ್ರಮ ನಡೆದರೆ, ತಾಲ್ಲೂಕು ಮಟ್ಟಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿತು.

ADVERTISEMENT

ಕೋವಿಡ್‌–19 ಹಾವಳಿಯ ಕಾರಣಕ್ಕೆ ಜಿಲ್ಲಾಡಳಿತ ಆಯೋಜಿಸಿದ್ದ ಪ್ರಧಾನ ಕಾರ್ಯಕ್ರಮ ಸೇರಿದಂತೆ ಎಲ್ಲ ಕಡೆಗಳಲ್ಲೂ ಸರಳವಾಗಿ ಸ್ವಾತಂತ್ರ್ಯದಿನ ಆಚರಿಸಲಾಯಿತು.ಪ್ರಧಾನ ಕಾರ್ಯಕ್ರಮದಲ್ಲಿ ಈ ವರ್ಷವೂ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪಥ ಸಂಚಲನ ನಡೆಯಲಿಲ್ಲ.

ಡಾ.ಬಿ.ಆರ್.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್‌, ಗೃಹರಕ್ಷಕ, ಅರಣ್ಯ ರಕ್ಷಕ ದಳ, ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ, 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು. ಮಹಾತ್ಮ ಗಾಂಧಿ, ಬಾಲ ಗಂಗಾಧರ ತಿಲಕ್, ಜವಾಹರಲಾಲ್‌ ನೆಹರು, ಸರ್ದಾರ್‌ ವಲಭಬಾಯಿ ಪಟೇಲ್‌, ಸುಭಾಷ್‌ಚಂದ್ರ ಬೋಸ್‌, ಅಂಬೇಡ್ಕರ್‌, ಚಂದ್ರಶೇಖರ್‌ ಆಜಾದ್‌, ಭಗತ್‌ ಸಿಂಗ್‌, ಝಾನ್ಸಿರಾಣಿ ಲಕ್ಷ್ಮೀಬಾಯಿ ಸರೋಜಿನಿ ನಾಯ್ಡು, ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಮೊದಲಾದ ರಾಷ್ಟ್ರ ನಾಯಕರು, ಹೋರಾಟಗಾರರನ್ನು ನೆನೆದರು.

ತಮ್ಮ ಭಾಷಣದಲ್ಲಿ ಕಂದಾಯ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಅಡಿಯಲ್ಲಿ ಒಂದು ವರ್ಷದಲ್ಲಿ ಆದ ಅಭಿವೃದ್ಧಿ ಕೆಲಸಗಳ ಬಗ್ಗೆ ಉಲ್ಲೇಖಿಸಿದರು. ಕೈಗಾರಿಕಾ ಇಲಾಖೆಯ ಸಾಧನೆಯನ್ನು ಪ್ರಸ್ತಾಪಿಸುವ ವೇಳೆ, 2021ನೇ ಮಾರ್ಚ್‌ ಅಂತ್ಯಕ್ಕೆ ಜಿಲ್ಲೆಗೆ 14.16 ಕೋಟಿ ಬಂಡವಾಳ ಹೂಡಿಕೆಯಾಗಿರುವುದನ್ನು ಉಲ್ಲೇಖಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ ಜಿಲ್ಲಾಧಿಕಾರಿ ಅವರು, ರೋಗಿಗಳಿಗೆ ಆಮ್ಲಜನಕ ಕೊರತೆಯಾಗದಂತೆ ಮಾಡಲು ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪಿಸುತ್ತಿರುವುದನ್ನು ಹಾಗೂ ಸರ್ಕಾರ ಮಂಜೂರಾತಿ ನೀಡಿರುವುದನ್ನು ಜಿಲ್ಲಾಧಿಕಾರಿ ಅವರು ಪ್ರಸ್ತಾಪಿಸಿದರು.

ಒಗ್ಗಟ್ಟಿನಿಂದ ಬದುಕೋಣ: ‘ಹಲವು ವರ್ಷಗಳ ಕಾಲ ಪ್ರಾಣದ ಹಂಗು ತೊರೆದು ತಮ್ಮ ಸರ್ವಸ್ವವನ್ನು ನಾಡಿಗೆ ಸಮರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರ ದಿವ್ಯ ಚೇತನಗಳಶ್ರಮ ವ್ಯರ್ಥವಾಗದಂತೆ ಇಂದು ನಾವು ಒಗ್ಗಟ್ಟಿನಿಂದ ಬದುಕಬೇಕಿದೆ. ದೇಶದಲ್ಲಿ ಅಶಾಂತಿಯನ್ನುಂಟು ಮಾಡುವ ಆಂತರಿಕ ಹಾಗೂ ಬಾಹ್ಯ ದುಷ್ಟ ಶಕ್ತಿಗಳನ್ನು ಮೆಟ್ಟಿ ನಿಲ್ಲುವುದು ನಮ್ಮೆಲ್ಲರ ಜವಾಬ್ದಾರಿ. ಇದು ಸಾಧ್ಯವಾಗಬೇಕಾದರೆ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ನಿರಂತರಾಗಿ ಜಾಗೃತರಾಗಿರುವಂತೆ ಎಚ್ಚರವಹಿಸಬೇಕು’ ಎಂದು ಹೇಳಿದರು.

‘ನಾವಿಂದು ಎಲ್ಲ ಕ್ಷೇತ್ರಗಳಲ್ಲೂ ಇರುವ ವಿಪುಲ ಅವಕಾಶಗಳನ್ನು ಬಳಸಿಕೊಂಡು ಜೊತೆ ಜೊತೆಗೆ ರಾಷ್ಟ್ರೀಯ ಏಕತೆ ಮತ್ತು ಭಾವೈಕ್ಯ ಸಾಧಿಸಲು ವಿಶೇಷ ಗಮನ ಮತ್ತು ಪ್ರಯತ್ನ ನಡೆಸಬೇಕಾಗಿದೆ. ನೆತ್ತರ ಹರಿಸಿ ನಮಗೆ ಸ್ವಾತಂತ್ರ್ಯ ಗಳಿಸಿಕೊಟ್ಟ ಮಹಾತ್ಮರಿಗೆಲ್ಲರಿಗೂ ನೈಜ ಅರ್ಥದಲ್ಲಿ ಗೌರವ ಸಲ್ಲಿಸೋಣ’ ಎಂದು ಹೇಳಿ ಡಾ.ಎಂ.ಆರ್.ರವಿ ಅವರು ಭಾಷಣ ಕೊನೆಗೊಳಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ, ಉಪಾಧ್ಯಕ್ಷೆ ಸುಧಾ, ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ.ಜಿ.ಸಂತೋಷ್‌ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್‌ ಇತರರು ಇದ್ದರು.

ಜಿಲ್ಲೆಯ ಹೋರಾಟಗಾರರ ಸ್ಮರಣೆ

ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಹೋರಾಟಗಾರರನ್ನು ಸ್ಮರಿಸಿದರು.

‘ನಮ್ಮ ಜಿಲ್ಲೆಯು ಸ್ವಾತಂತ್ರ್ಯ ಹೋರಾಟಕ್ಕೆ ಅಮೂಲ್ಯ ಕಾಣಿಕೆ ಕೊಟ್ಟಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಸಿ.ರಂಗಸ್ವಾಮಿ, ಗೋಪಾಲರಾಯರು, ವೆಂಕಟ್‌ರಾವ್‌, ಡಿ.ಜೆ.ಶಂಕರಪ್ಪ, ಕೃಷ್ಣಮೂರ್ತಿ, ರಂಗನಾಯಕ ಅವರು 1942 ಭಾರತ ಬಿಟ್ಟು ತೊಲಗಿ ಹಾಗೂ 1947ರ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದಾರೆ. ಎಚ್‌.ಕೆ.ಕುಮಾರಸ್ವಾಮಿ ಅವರು ತಾಲ್ಲೂಕು ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷರಾಗಿ, ವೆಂಕಟಸುಬ್ಬಶೆಟ್ಟಿ ಅವರು ಕಾರ್ಯದರ್ಶಿಯಾಗಿ ಅವಿರತ ಹೋರಾಟ ನಡೆಸಿದ್ದಾರೆ. ಸಿ.ಯತಿರಾಜು, ಪಣ್ಯದ ಸಿದ್ದಪ್ಪ, ಮಲೆಯೂರು ಚಿಕ್ಕಲಿಂಗಪ್ಪ, ಪ್ಮರಾಜ ಪಂಡಿತ್‌, ಕೆ.ವಿ.ಕೃಷ್ಣಮೂರ್ತಿ, ಐಎನ್‌ಎ ರಾಮರಾವ್‌, ಗಾಂಧಿ ಪುಟ್ಟನಂಜಪ್ಪ, ತೋಟಪ್ಪ, ಗಾಂಧಿ ಬಸವಯ್ಯ, ಡಿ.ಬಸಪ್ಪ, ಲಲಿತಾ ಜಿ ಟ್ಯಾಗೆಟ್‌, ಗಜಲಕ್ಷ್ಮಿಬಾಯಿ ಕಮಲಮ್ಮ.. ಹೀಗೆ ಹಲವಾರು ಅಪ್ರತಿಮ ದೇಶಭಕ್ತರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.